ಬೆಂಗಳೂರು[ಜ.12]: ಸೇಬಿನಷ್ಟು ದರ ದಾಖಲಿಸಿಕೊಂಡಿದ್ದ ಟೊಮಟೊ ಬೆಲೆಯಲ್ಲಿ ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಎರಡು ದಿನಗಳ ಹಿಂದೆ ಕೆ.ಜಿ.ಗೆ ₹58ರಿಂದ ₹60 ಬೆಲೆ ಕುದುರಿಸಿಕೊಂಡಿದ್ದ ಟೊಮಟೊ ದರ 40ಕ್ಕೆ ಕುಸಿದಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 25ರಿಂದ 35 ರು. ನಿಗದಿಯಾಗಿದೆ.

ಚಳಿಯಿಂದಾಗಿ ಕೆಲ ತರಕಾರಿ ಹಾಗೂ ಟೊಮಟೊ ಇಳುವರಿ ಕುಂಠಿತವಾಗಿತ್ತು. ಇದರಿಂದ ಉತ್ತಮ ಧಾರಣೆಯೂ ಲಭ್ಯವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ವಿವಿಧ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ ಕೆ.ಜಿ.ಗೆ ₹30ರಿಂದ ₹70ರವರೆಗೆ ಮಾರಾಟಗೊಂಡಿತ್ತು. ಆದರೆ, ಗುರುವಾರ (ಜ.10) ಸಗಟು ಮಾರುಕಟ್ಟೆಯಲ್ಲಿ ₹23 ಕೆ.ಜಿ. ಇರುವ ಟ್ರೇ ಟೊಮಟೊ ₹800 ರೊಳಗೆ ಬೆಲೆ ದಾಖಲಿಸಿಕೊಂಡಿದ್ದು, ಈ ಹಿಂದಿನ ದರಕ್ಕಿಂತ ₹300ರಿಂದ ₹350 ಕುಸಿತ ಕಂಡಿತ್ತು. ಗುರುವಾರ ಹಾಗೂ ಶುಕ್ರವಾರವೂ ₹550-600 ಬೆಲೆಗೆ ಮಾರಾಟವಾಗಿದೆ. ಇದೀಗ ಸಗಟು ದರ ಕೆ.ಜಿ.ಗೆ ₹26 ಇದ್ದು, ಚಿಲ್ಲರೆ ಅಂಗಡಿ ಮಾರಾಟಗಾರರು ಆಯಾ ಪ್ರದೇಶಕ್ಕೆ ಅನುಗುಣವಾಗಿ ದರ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ, ದಿನವಹಿ 15ರಿಂದ 20 ಲಾರಿ ಲೋಡ್ ಟೊಮಮೊ ಮಾರುಕಟ್ಟೆಗೆ ಬರುತ್ತದೆ. ಪೂರೈಕೆ ಪ್ರಮಾಣ ಹೆಚ್ಚಾದಷ್ಟು ಬೇಡಿಕೆ ಕುಸಿಯಲಿದೆ ಎನ್ನುತ್ತಾರೆ ಕಲಾಸಿಪಾಳ್ಯ ತರಕಾರಿ ಹಾಗೂ ಹಣ್ಣು ಸರಬರಾಜುದಾರರಾದ ರಾಧಾಕೃಷ್ಣ.

ಉತ್ತಮ ದರ ವ್ಯಕ್ತವಾದ ಹಿನ್ನೆಲೆ ಮಾರುಕಟ್ಟೆಗೆ ರೈತರು ತರುವ ಟೊಮಟೊ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲದೆ ನಾಸಿಕ್‌ನಿಂದಲೂ ಟೊಮಟೊ ಬರುತ್ತಿದೆ. ಎಪಿಎಂಸಿ ಮಾರುಕಟ್ಟೆಗೆ ನಾಸಿಕ್‌ನಿಂದ ಶುಕ್ರವಾರ ಮೂರು ಗಾಡಿ ಲೋಡ್ ಟೊಮಟೊ ಬಂದಿದೆ. ಬೆಂಗಳೂರು ಸುತ್ತಮುತ್ತಲಿ ನಿಂದಲೂ 8ರಿಂದ 10 ಸಾವಿರ ಟ್ರೇ ಟೊಮಟೊ ಬಂದಿದೆ. ಮಾರುಕಟ್ಟೆಯಲ್ಲಿ 23 ಕೆ.ಜಿ. ಇರುವ ಟ್ರೇ ಟೊಮೊಟೊ ₹500ರಿಂದ 700ಕ್ಕೆ ಮಾರಾಟವಾಗಿದೆ. ಕೆ.ಜಿ.ಗೆ ₹50ರಿಂದ 55ಕ್ಕೆ ನಿಗದಿಯಾಗಿದ್ದ ಸಗಟು ದರ ಶುಕ್ರವಾರ ಕೆ.ಜಿ.ಗೆ ₹35ಕ್ಕೆ ಇಳಿಕೆಯಾಗಿದೆ ಎಂದು ಎಪಿಎಂಸಿಯ ಚಂದ್ರಶೇಖರ್ ತಿಳಿಸಿದರು.

ತರಕಾರಿ ಬೆಲೆಯಲ್ಲಿ ಅಲ್ಪ ಕುಸಿತ: ಹವಾಮಾನ ವೈಪರೀತ್ಯ ದಿಂದ ವಿವಿಧ ತರಕಾರಿಗಳ ಇಳುವರಿ ಪ್ರಮಾಣ ಕುಸಿದಿದೆ. ಈಗ ಬಂದಿರುವ ಫಸಲಿಗೆ ಉತ್ತಮ ಧಾರಣೆ ದೊರೆಯುತ್ತಿದೆ. ಹಾಪ್‌ಕಾಮ್ಸ್, ಮಂಡಿಗಳಲ್ಲಿ ತರಕಾರಿ ಬೆಲೆ ಸ್ವಲ್ಪಮಟ್ಟಿಗೆ ಕಡಿಮೆ ಇದ್ದು, ಹಣ್ಣುಗಳ ಬೆಲೆ ಸ್ಥಿರತೆ ಕಾಯ್ದುಕೊಂಡಿ

ಯಶವಂತಪುರ ಮಾರುಕಟ್ಟೆಯಲ್ಲಿ ಗುರುವಾರ ಬೀನ್ಸ್ ಕೆ.ಜಿ. ₹60, ಬೆಂಡೆಕಾಯಿ ₹60, ಹಿರೇಕಾಯಿ ₹80, ಕ್ಯಾರೆಟ್ ₹50, ಬದನೆಕಾಯಿ ₹60, ದೊಣ್ಣೆ ಮೆಣಸಿನಕಾಯಿ ₹40, ಬೀಟ್‌ರೋಟ್ ಕೆ.ಜಿ. ₹35ಗೆ ಖರೀದಿಯಾಯಿತು. ಕಳೆದ ವಾರದಲ್ಲಿ ಈ ಎಲ್ಲಾ ತರಕಾರಿಗಳ ಬೆಲೆ ಕೆ.ಜಿ.ಗೆ ₹20ರಿಂದ ₹40 ನಿಗದಿಯಾಗಿತ್ತು.

ನಗರದ ಕೆ.ಆರ್.ಮಾರುಕಟ್ಟೆ ಸಗಟು ಮಾರುಕಟ್ಟೆಯಲ್ಲಿ ಬೆಂಡೆಕಾಯಿ ಕೆ.ಜಿ.ಗೆ ₹32, ಹಿರೇಕಾಯಿ ₹28, ಕ್ಯಾರೆಟ್ ಲೋಕಲ್ ₹24, ಊಟಿ ಕ್ಯಾರೆಟ್ ₹28, ಬದನೆಕಾಯಿ ಕೆ.ಜಿ. ₹26, ದೊಣ್ಣೆ ಮೆಣಸಿನಕಾಯಿ ₹48, ಬೀಟ್ ರೋಟ್ ಕೆ.ಜಿ. ₹16ಕ್ಕೆ ಮಾರಾಟವಾಗಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಕೆಲವು ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ವಿವಿಧ ತರಕಾರಿಗಳು ಕೆ.ಜಿ.ಗೆ ₹20ರಿಂದ ₹60 ಒಳಗೆ ಮಾರಾಟಗೊಳ್ಳುತ್ತಿವೆ. ಕೊತ್ತಂಬರಿ ನಾಟಿ ದಪ್ಪ ಕಟ್ಟು ₹30, ಫಾರಂ ₹20ಕ್ಕೆ ಮಾರಾಟವಾಗುತ್ತಿದೆ.