Asianet Suvarna News Asianet Suvarna News

ಆರ್‌ಬಿಐ ಕ್ರಮದ ಬೆನ್ನಲ್ಲಿಯೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ನಿರ್ದೇಶಕ ಮಂಡಳಿಯ ಸದಸ್ಯ ರಾಜೀನಾಮೆ!

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ವಿರುದ್ಧ ಆರ್‌ಬಿಐ ಕ್ರಮದ ಬೆನ್ನಲ್ಲಿಯೇ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಇದರ ನಡುವೆ ಪಿಪಿಬಿಎಲ್‌ನ ನಿರ್ದೇಶಕ ಮಂಡಳಿಯಲ್ಲಿ 2021ರಿಂದಲೂ ಸ್ಥಾನ ಪಡೆದಿದ್ದ ಸದಸ್ಯ ಮಂಜು ಅಗರ್ವಾಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

amid RBI crackdown Paytm Payments Bank board member resigns san
Author
First Published Feb 9, 2024, 4:16 PM IST


ನವದೆಹಲಿ (ಫೆ.9): ಪೇಟಿಎಂ ವಿಚಾರದಲ್ಲಿ ಸಂಕಷ್ಟಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆರ್‌ಬಿಐ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ (ಪಿಪಿಬಿಎಲ್‌) ವಿರುದ್ಧ ಕ್ರಮ ಕಗೊಂಡ ಬೆನ್ನಲ್ಲಿಯೇ ಕಂಪನಿಯ ಸ್ವತಂತ್ರ ನಿರ್ದೇಶಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ನ ನಿರ್ದೇಶಕ ಮಂಡಳಿಯಲ್ಲಿದ್ದ ಸ್ವತಂತ್ರ ನಿರ್ದೇಶಕ ಮಂಜು ಅಗರರ್ವಾಲ್‌ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 1 ರಂದೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಜನವರಿ 31 ರಂದು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ನೋಟಿಸ್‌ ನೀಡಿದ್ದ ಆರ್‌ಬಿಐ ಎಲ್ಲಾ ರೀತಿಯ ಬ್ಯಾಂಕಿಂಗ್‌ ವ್ಯವಹಾರಗಳನ್ನು ಫೆ.29ರ ಒಳಗಾಗಿ ಬಂದ್‌ ಮಾಡುವಂತೆ ಸೂಚಿಸಿತ್ತು. ಇದರ ಮರುದಿನವೇ ಮಂಜು ಅಗರ್ವಾಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರ್‌ಬಿಐನ ನಿರ್ಬಂಧದ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನೊಂದಿಗೆ ಸಹಭಾಗಿತ್ವದ ಬಗ್ಗೆ ಮತ್ತು ಇತರ ಕಂಪನಿಗಳಲ್ಲಿನ ಅವರ ಮಂಡಳಿಯ ಸದಸ್ಯತ್ವದ ಮೇಲೆ ಅದು ಹೇಗೆ ಪರಿಣಾಮ ಬೀರಬಹುದು ಎಂಬ ಕಳವಳದಿಂದ ಅಗರ್ವಾಲ್ ರಾಜೀನಾಮೆಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಪಾಲಿಕ್ಯಾಬ್, ಸ್ವಿಚ್ ಮೊಬಿಲಿಟಿ, ಸಿಎಂಎಸ್‌ ಇನ್ಫೋ ಮತ್ತು ಗ್ಲೆನ್‌ಮಾರ್ಕ್ ಲೈಫ್ ಮುಂತಾದ ಕಂಪನಿಗಳಲ್ಲಿ ಮಂಡಳಿಯ ಸದಸ್ಯತ್ವವನ್ನು ಹೊಂದಿದ್ದಾರೆ.

ಮಂಜು ಅಗರ್ವಾಲ್ ಅವರು ಹಿರಿಯ ಬ್ಯಾಂಕರ್ ಆಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಅಲ್ಲಿ ಅವರು ಡಿಜಿಟಲ್ ಬ್ಯಾಂಕಿಂಗ್ ಮತ್ತು ಹೊಸ ವ್ಯಾಪಾರ ಉಪಕ್ರಮಗಳ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿದ್ದರು.

ಈ ಬಗ್ಗೆ ಮಾತಾಡಿರುವ ಮೋಹನ್‌ದಾಸ್ ಪೈ, ಆರ್‌ಬಿಐ ಪೇಟಿಎಂಗೆ 22 ತಿಂಗಳುಗಳನ್ನು ನೀಡಿತ್ತು. ಇಲ್ಲಿ ಸಾಕಷ್ಟು ಆಡಿಟ್‌ಗಳು, ಸಾಕಷ್ಟು ವರದಿಗಳು ಹಾಗೂ ಆರ್‌ಬಿಐ ಅಧಿಕಾರಿಗಳ ಭೇಟಿ, ಥರ್ಡ್‌ ಪಾರ್ಟಿ ಆಡಿಟ್‌ಗಳು ನಡೆದಿರಬಹುದು. ಇಷ್ಟೆಲ್ಲಾ ನಡೆದರೂ, ಆರ್‌ಬಿಐ ನಿಯಮ ಪಾಲಿಸಲು ಆಗಿಲ್ಲ ಎಂದಾದಲ್ಲಿ, ಆರ್‌ಬಿಐ ಕ್ರಮ ಕೈಗೊಂಡಿದ್ದು ಸರಿಯಾಗಿದೆ. ಆರ್‌ಬಿಐ ಈಗಾಗಲೇ ಪೇಟಿಎಂಗೆ ಸಾಕಷ್ಟು ಸಮಯ ನೀಡಿದೆ ಎಂದು ಅವರು ಹೇಳಿದ್ದಾರೆ.

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ನಿರಂತರವಾಗಿ ಬದಲಾವಣೆಗಳು ಆಗುತ್ತಲೇ ಇದೆ. ಹೊಸ ಮಂಡಳಿ ಸದಸ್ಯರು ಬಂದು ಇನ್ನೇನು ಕೆಲಸ ಪ್ರಾರಂಭ ಮಾಡುವ ಹೊತ್ತಿನಲ್ಲಿ ಅವರು ಹುದ್ದೆ ತೊರೆಯುತ್ತಿರುವುದು ಸಮಸ್ಯೆಯಾಗಿದೆ. ಈವರೆಗೂ ಪಿಪಿಬಿಎಲ್‌ನಲ್ಲಿ ಮಂಜು ಅಗರ್ವಾಲ್‌ ಒಬ್ಬರೇ ರಾಜೀನಾಮೆ ನೀಡಿದ್ದಾರೆಯೇ ಅಥವಾ ರಾಜೀನಾಮೆ ನೀಡುವವರು ಲಿಸ್ಟ್‌ನಲ್ಲಿದ್ದಾರೆಯೇ ಎನ್ನುವುದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ, ಬೋರ್ಡ್‌ ಮಂಡಳಿಯ ಇನ್ನೊಬ್ಬ ಸದಸ್ಯರು ಕೂಡ ರಾಜೀನಾಮೆ ನೀಡಲು ಮುಂದಾಗಿದ್ದು, ಆದರೆ, ಮುಂದಿನ ಕೆಲ ತಿಂಗಳುಗಳ ಕಾಲ ಅವರು ಮುಂದುವರಿಯಲಿದ್ದಾರೆ.

ಪೇಮೆಂಟ್ಸ್‌ ಬ್ಯಾಂಕ್ ಮೇಲೆ ಮಾತ್ರವೇ ನಿರ್ಬಂಧ: ಇನ್ನೊಂದೆಡೆ ಆರ್‌ಬಿಐ ಕ್ರಮದಿಂದ ಪೇಟಿಎಂ ಗ್ರಾಹಕರಲ್ಲೂ ಆತಂಕ ಶುರುವಾಗಿದೆ. ಕಂಪನಿಯ ಸಿಇಒ ವಿಜಯ್‌ ಶೇಖರ್‌ ಶರ್ಮ ಕೂಡ ಇದನ್ನು ಹೇಳಿದ್ದಾರೆ. ಆರ್‌ಬಿಐ ನಿರ್ಬಂಧದಿಂದ ಪೇಟಿಎಂ ಅಪ್ಲಿಕೇಶನ್‌ ಬ್ಲಾಕ್‌ ಆಗಲಿದೆ ಎನ್ನುವ ಊಹಾಪೋಹಗಳು ಹರಿದಾಡುತ್ತಿದೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಆರ್‌ಬಿಐ, ಪೇಟಿಎಂ ಅಪ್ಲಿಕೇಶನ್‌ ಹಾಗೂ ಅದರ ಕಾರ್ಯವಿಧಾನಗಳು ಎಂದಿನಂತೆಯೇ ನಡೆಯಲಿದೆ. ಆದರೆ, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಕೆಲಸಗಳ ಬಗ್ಗೆ ಮಾತ್ರ ಎಂದು ಹೇಳಿದೆ.
 

Follow Us:
Download App:
  • android
  • ios