ಮದುವೆ, ಮುಂಜಿ ಪ್ಲ್ಯಾನ್ ಇದೆಯಾ?: 45 ಸಾವಿರ ರೂ. ಗಡಿ ದಾಟಲಿದೆ ಚಿನ್ನ!
45 ಸಾವಿರ ರೂ. ಗಡಿ ದಾಟಲಿರುವ ಚಿನ್ನ| ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನದ ಬೆಲೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಒಂದು ಔನ್ಸ್’ಗೆ ಶೇ. 21.28 ರಷ್ಟು ಏರಿಕೆ| ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,000 ರೂ. ಗಡಿ ದಾಟುವ ಆತಂಕ| ‘ಭೌತಿಕ ಚಿನ್ನದ ಮೇಲೆ ಹೂಡಿಕೆಗಿಂತ ಎಲೆಕ್ಟ್ರಾನಿಕ್ ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ’| ಗೋಲ್ಡ್ ಇಟಿಎಫ್ ಅಥವಾ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆಗೆ ತಜ್ಞರ ಸಲಹೆ|
ಬೆಂಗಳೂರು(ಜ.18): ಕಳೆದ ಹದಿನೈದು ದಿನಗಳಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದು, 2020ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 45,000 ರೂ. ಗಡಿ ದಾಟಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ವರ್ಷದ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ನಿರಂತಗರ ಏರಿಕೆ ಕಾಣುತ್ತಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮಾರಾಟದ ಚಟುವಟಿಕೆ ಕುಂಠಿತಗೊಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಒಂದು ಔನ್ಸ್’ಗೆ ಶೇ. 21.28 ರಷ್ಟು ಏರಿಕೆಯಾಗಿದ್ದು, ಇರಾನ್-ಅಮೆರಿಕ ನಡುವಿನ ಯುದ್ಧೋನ್ಮಾದದ ಪರಿಣಾಮ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಯುದ್ಧಕ್ಕೂ ಚಿನ್ನಕ್ಕೂ ಏನ್ರೀ ಸಂಬಂಧ?: ಬಂದೂಕಿನೊಂದಿಗೆ ಇಳಿಕೆಯ ಅನುಬಂಧ!
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಲ್ಪಾವಧಿಯ ಚಿನ್ನದ ಬೆಲೆ ಒಂದು ಔನ್ಸ್’ಗೆ 6 1,630 ರೂ.(ಭಾರತೀಯ ಕರೆನ್ಸಿ) ತಲುಪುವ ನಿರೀಕ್ಷೆ ಇದ್ದು, ಇದು ಸಹಜವಾಗಿ ದೇಶೀಯ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಮುಂದಿನ ಆರು ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,000 ರೂ. ಗಡಿ ದಾಟುವ ಆತಂಕ ಎದುರಾಗಿದೆ. ಇದು ಆಭರಣ ಪ್ರಿಯರಿಗೆ ಖಂಡಿತ ಕಹಿ ಸುದ್ದಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.
ಆದರೆ ಬೆಲೆ ಹೆಚ್ಚಳದ ನಡುವೆ ಚಿನ್ನದ ಶೇಖರಣೆಗಿಂತ ಚಿನ್ನದ ಮೇಲಿನ ಹೂಡಿಕೆ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಭೌತಿಕ ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕಿಂತ, ಎಲೆಕ್ಟ್ರಾನಿಕ್ ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.
ಗೋಲ್ಡ್ ಇಟಿಎಫ್ ಅಥವಾ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗಲಿದೆ ಎಂದು ತಜ್ಞರು ಅಂದಾಜಿಸಿದ್ದು, ಇದರಿಂದ ಚಿನ್ನ ಶೇಖರಣಾ ಸಮಸ್ಯೆಯಿಲ್ಲದೇ ಧ್ರುವೀಕರಣ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.