ಬೆಂಗಳೂರು(ಜ.11): ಭಾರತ ಆಭರಣ ಪ್ರಿಯರ ನಾಡು. ಆಭರಣಗಳಿಲ್ಲದೇ ಭಾರತದಲ್ಲಿ ಯಾವುದೇ ಸಮಾರಂಭ ನಡೆಯುವುದಿಲ್ಲ. ಹಬ್ಬ ಹರಿದಿನಗಳಲ್ಲಿ ಆಭರಣ ತೊಟ್ಟ ಭಾರತೀಯ ಮಹಿಳೆ ನಮ್ಮ ಸಂಸ್ಕೃತಿಯ ಸಾಕ್ಷಾತ್ ಪ್ರತಿಬಿಂಬ.

ಆದರೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದರೆ ಭಾರತೀಯರ ಮೊಗದಲ್ಲಿರುವ ಸಂತಸ ಮಾಯವಾಗುತ್ತದೆ. ವರ್ಷದ 365ದಿನಗಳಲ್ಲೂ ಚಿನ್ನ, ಬೆಳ್ಳಿ ಖರೀದಿಸುವ ಭಾರತೀಯರಿಗೆ ಬೆಲೆ ಏರಿಕೆಯಿಂದ ಸಿಟ್ಟು ಬರುವುದು ಸಹಜ.

ಅಂತಾರಾಷ್ಟ್ರೀಯ ವಿದ್ಯಮಾನಗಳು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಸೇರಿದಂತೆ ಆಭರಣಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಅದರಲ್ಲೂ ಯುದ್ಧದ ಸನ್ನಿವೇಶ ಹಳದಿ ಲೋಹದ ಬೆಲೆ ಏರಿಕೆಯ ಪ್ರಮುಖ ಕಾರಣಗಳಲ್ಲೊಂದು.

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ಇಂದಿನ ಆಭರಣ ದರ..!

ಸದ್ಯ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಗಗನಕ್ಕೇರಿದ್ದು, ದೇಶೀಯ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿದೆ. ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ 10 ಗ್ರಾಂ ಗೆ 39,680 ರೂ. ಇರುವುದೇ ಸಾಕ್ಷಿ. ಬೆಳ್ಳಿ ಕೂಡ ದುಬಾರಿಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 6,419 ರೂ. ಆಗಿದೆ.

ಅದರಲ್ಲೂ ಇರಾನ್-ಅಮೆರಿಕ ನಡುವಿನ ಯುದ್ಧೋನ್ಮಾದದ ಪರಿಣಾಮ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ತುಸು ಏರಿಕೆ ಕಂಡು ಬಂದಿತ್ತು. ಆದರೆ ಯುದ್ಧ ಸನ್ನಿವೇಶ ತಣ್ಣಗಾದಂತೆ ಮತ್ತೆ ಬೆಲೆಗಳು ಇಳಿಕೆಯತ್ತ ಮುಖ ಮಾಡಿರುವುದು ಸಂತಸದ ವಿಚಾರ.

ಭಾರತ ಆಭರಣ ಪ್ರಿಯರ ನಾಡು:
 ಅಂಕಿ ಅಂಶಗಳ ಪ್ರಕಾರ ವಿಶ್ವಾದ್ಯಂತದ ಒಟ್ಟು ಭೌತಿಕ ಬೇಡಿಕೆಯ ಸುಮಾರು ಶೇ. 25ರಷ್ಟು ವಾರ್ಷಿಕ ಬೇಡಿಕೆಯೊಂದಿಗೆ, ಭಾರತ ಚಿನ್ನದ ಅತಿದೊಡ್ಟ ಗ್ರಾಹಕ ಮಾರುಕಟ್ಟೆಯಾಗಿದೆ.

ಹಬ್ಬ ಹರಿದಿನ ಮತ್ತು ವಿವಾಹದ ಸಂದರ್ಭಗಳಲ್ಲಿ ಭಾರತದಲ್ಲಿ ಆಭರಣಗಳ ಬೇಡಿಕೆ ಹೆಚ್ಚಾಗುತ್ತದೆ. ಚಿನ್ನದ ಬೇಡಿಕೆ ಅದರ ಬೆಲೆ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ ಎಂಬುದರಲ್ಲಿ ಸತ್ಯಾಂಶವಿದೆ. 

ವಿಶ್ವ ಚಿನ್ನದ ಮಂಡಳಿ ವರದಿಯ ಪ್ರಕಾರ, 1990 ರಿಂದ 2015 ರವರೆಗಿನ ವಾರ್ಷಿಕ ದತ್ತಾಂಶವು ಚಿನ್ನದ ಗ್ರಾಹಕರ ಬೇಡಿಕೆಯ ಮೇಲೆ ದೀರ್ಘಾವಧಿಯವರೆಗೆ ಪರಿಣಾಮ ಬೀರುವ ಎರಡು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದೆ.

ಮೊದಲನೆಯದಾಗಿ  ಚಿನ್ನದ ಬೇಡಿಕೆ ಆದಾಯದ ಮಟ್ಟದೊಂದಿಗೆ ಏರಿಕೆಯಾಗುವುದು ಕಂಡುಬಂದಿದ್ದು, ತಲಾ ಆದಾಯದಲ್ಲಿ ಶೇ.1 ರಷ್ಟು ಹೆಚ್ಚಿದರೆ ಚಿನ್ನದ ಬೇಡಿಕೆ ಕೂಡ ಶೇ.1ರಷ್ಟು ಹೆಚ್ಚಾಗುತ್ತದೆ.

ಸಂಜೆ ಹೊತ್ತಲ್ಲಿ ಚಿನ್ನದ ಬೆಲೆ: ಕೊಳ್ಳುವ ಮೊದಲು ದರಪಟ್ಟಿ ನೋಡಿ ಇಲ್ಲೇ!

ಎರಡನೆಯದಾಗಿ ಚಿನ್ನದ ಬೆಲೆಯಲ್ಲಿನ ವ್ಯತ್ಯಾಸ ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ. ಚಿನ್ನದ ದರದಲ್ಲಿ ಶೇ.1ರಷ್ಟು ಹೆಚ್ಚಾದರೆ ಬೇಡಿಕೆ ಶೇ.0.5 ರಷ್ಟು ಕುಸಿಯುತ್ತದೆ ಎಂದು  ವರದಿ ಹೇಳುತ್ತದೆ.

ರಾಜಕೀಯ ಪ್ರಕ್ಷುಬ್ಧತೆ:
ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಸಾಮಾನ್ಯವಾಗಿ ಏರಿಕೆಯಾಗುತ್ತವೆ. ಅದರಲ್ಲೂ ಯುದ್ಧದ ಸನ್ನಿವೇಶ ಚಿನ್ನ ಹಾಗೂ ಬೆಳ್ಳಿ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.

ಈ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರಿಕಾಗಿ, ದೇಶೀಯ ಮಾರುಕಟ್ಟೆಗಳಲ್ಲೂ ದುಬಾರಿಯಾಗಿ ಪರಿಣಮಿಸುತ್ತದೆ.

ಆದರೆ ಭಾರತದಂತ ದೇಶಗಳಲ್ಲಿ ಆಭರಣ ಸಂಸ್ಕೃತಿಯ ಭಾಗವಾಗಿರುವುದರಿಂದ ಬೆಲೆ ಏರಿಕೆಯ ನಡುವೆಯೂ ಬೇಡಿಕೆ ಕುಸಿಯುವುದಿಲ್ಲ ಎಂಬುದು ಸ್ಪಷ್ಟ.

ರಣೋತ್ಸಾಹದಿಂದ ಹಿಂದೆ ಸರಿದ ಇರಾನ್-ಯುಎಸ್:

ಅಮೆರಿಕ, ಇರಾನ್‌ ನಡುವಿನ ಯುದ್ಧೋನ್ಮಾದ ಥಂಡಾ

ಯುದ್ಧದ ಹೊಸ್ತಿಲಲ್ಲಿ ನಿಂತಿದ್ದ ಇರಾನ್-ಅಮೆರಿಕ ಸದ್ಯ ರಣೋತ್ಸಾಹವನ್ನು ಕುಗ್ಗಿಸಿವೆ. ಯುದ್ಧ ಆರಂಭದ ಸಂದೇಹ ಹಳದಿ ಲೋಹದ ಮೇಲೆ ಪರಿಣಾಮ ಬೀರಿತ್ತು. ಬೆಲೆ ಏರಿಕೆಯಿಂದ ಗ್ರಾಹಕ ಕೂಡ ಕಂಗಾಲಾಗಿದ್ದ.

ಆದರೆ ಯುದ್ಧ ಭೀತಿ ಕಡಿಮೆಯಾಗುತ್ತಿದ್ದಂತೇ ಭಾರತದ ಮಾರುಕಟ್ಟೆ ಮತ್ತೆ ಪುಟಿದೆದ್ದಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆಗಳಲ್ಲಿ ಇಳಿಕೆ ಕಂಡು ಬರುತ್ತಿದೆ.

ಇಷ್ಟೇ ಅಲ್ಲದೇ ಯುದ್ಧ ಭೀತಿ ಷೇರು ಮಾರುಕಟ್ಟೆಯನ್ನೂ ಅಲುಗಾಡಿಸಿ ಬಿಡುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ದುರ್ಬಲಗೊಳ್ಳುವುದರಿಂದ ಇದು ಆಭರಣಗಳ ಬೆಲೆಗಳ ಮೇಲೂ ನೇರ ಪರಿಣಾಮ ಬೀರುತ್ತದೆ.

ಒಟ್ಟಿನಲ್ಲಿ ಯುದ್ಧ ಭೀತಿ ಚಿನ್ನ ಹಾಗೂ ಬೆಳ್ಳಿ ಬೆಲೆಗಳ ಮೇಲೆ ಪರಿಣಾಮ ಬೀರುವುದು ಸ್ಪಷ್ಟವಾಗಿದ್ದು, ಸದ್ಯ ಯುದ್ಧ ಭೀತಿ ಕಡಿಮೆಯಾಗಿರುವುದರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಇಳಿಕೆಯಾಗುವ ಭರವಸೆ ಕಂಡುಬರುತ್ತಿದೆ.