ನವದೆಹಲಿ[ಮಾ.06]: ನೌಕರರ ಭವಿಷ್ಯ ನಿಧಿಗೆ ನೀಡು ಬಡ್ಡಿದರವನ್ನು ಶೇ.8.5ಕ್ಕೆ ಕಡಿತಗೊಳಿಸಲು ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್‌ಒ) ಗುರುವಾರ ತೀರ್ಮಾನಿಸಿದೆ. ಇದರಿಂದಾಗಿ ಭವಿಷ್ಯ ನಿಧಿ (ಪಿಎಫ್‌) ಬಡ್ಡಿದರ 7 ವರ್ಷದ ಕನಿಷ್ಠಕ್ಕೆ ಇಳಿದಂತಾಗಿದೆ.

2012-13ರಲ್ಲಿ ಶೇ.8.5 ಇದ್ದ ಬಡ್ಡಿದರ 2013-14 ಮತ್ತು 2014-15ರಲ್ಲಿ ಶೇ.8.75ಕ್ಕೆ ಏರಿತ್ತು. 2018-19ನೇ ಸಾಲಿಗೆ ಶೇ.8.65ರಷ್ಟುಬಡ್ಡಿದರ ನಿಗದಿಯಾಗಿತ್ತು. ಆದರೆ ಈಗ ಶೇ.0.15ರಷ್ಟುಬಡ್ಡಿದರ ಕಡಿತ ಆಗಿರುವುದು ಪಿಎಫ್‌ ಮಂಡಳಿಯ ಸುಮಾರು 6 ಕೋಟಿ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ.

ಇನ್ಮುಂದೆ PF ಹಣ ಪಡೆಯುವುದು ಸುಲಭ: ಬಂದಿದೆ ಹೊಸ ಆಪ್ಶನ್!

ಇಪಿಎಫ್‌ನ ಕೇಂದ್ರೀಯ ಟ್ರಸ್ಟಿಗಳ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌, ‘ಶೇ.8.5ಕ್ಕೆ ಬಡ್ಡಿದರ ಕಡಿತಗೊಳಿಸಿರುವ ಕಾರಣ ಇಪಿಎಫ್‌ ಮಂಡಳಿಗೆ 700 ಕೋಟಿ ರು. ಉಳಿತಾಯವಾಗಲಿದೆ’ ಎಂದರು.

‘ಶೇ.8.55ರಷ್ಟು ಬಡ್ಡಿದರ ಇರಿಸಿದ್ದರೆ 300 ಕೋಟಿ ರು. ಉಳಿತಾಯ ಆಗುತ್ತಿತ್ತು. ಆದರೆ ಶೇ.8.55ಕ್ಕಿಂತ ಹೆಚ್ಚು ಬಡ್ಡಿ ಇರಿಸಿದ್ದರೆ ಇಪಿಎಫ್‌ಒಗೆ ಸಂಕಷ್ಟವಾಗುತ್ತಿತ್ತು’ ಎಂದು ಮೂಲಗಳು ಹೇಳಿವೆ.