EPF Interest Rate 2021-22: ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ ಶೇ. 8.1ಕ್ಕೆ ಇಳಿಕೆ!
*2021-22 ಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲೆ ಶೇಕಡಾ 8.1 ಬಡ್ಡಿದರ
*ಇಪಿಎಫ್‌ಓನ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ನಿರ್ಧಾರ
ನವದೆಹಲಿ (ಮಾ. 12): ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಶನಿವಾರದಂದು ಪ್ರಸಕ್ತ ಹಣಕಾಸು ವರ್ಷ 2021-22 ಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲೆ ಶೇಕಡಾ 8.1 ಬಡ್ಡಿದರವನ್ನು ಪಾವತಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇಂದು ನಡೆದ ಇಪಿಎಫ್‌ಓನ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಶನಿವಾರ ಗುವಾಹಟಿಯಲ್ಲಿ ನಡೆದ ಇಪಿಎಫ್‌ಒ ಮಂಡಳಿ ಸಭೆಯಲ್ಲಿ ಟ್ರೇಡ್ ಯೂನಿಯನ್‌ಗಳಿಂದ ಹೆಚ್ಚಿನ ಪ್ರತಿರೋಧದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇಪಿಎಫ್‌ಓ ಅಥವಾ ಸಿಬಿಟಿಯ ಟ್ರಸ್ಟಿಗಳ ಕೇಂದ್ರ ಮಂಡಳಿಯು ಸರ್ಕಾರ, ಕಾರ್ಮಿಕರು ಮತ್ತು ಉದ್ಯೋಗದಾತರ ಪ್ರತಿನಿಧಿಗಳನ್ನು ಒಳಗೊಂಡಿರುವ ತ್ರಿಪಕ್ಷೀಯ ಸಂಸ್ಥೆಯಾಗಿದೆ ಮತ್ತು ಸಿಬಿಟಿಯ ನಿರ್ಧಾರವು ಇಪಿಎಫ್‌ಒ ಮೇಲೆ ಬದ್ಧವಾಗಿದ್ದು ಕಾರ್ಮಿಕ ಸಚಿವರು ಇದರ ನೇತೃತ್ವ ವಹಿಸುತ್ತಾರೆ.
ಇದನ್ನೂ ಓದಿ: ಇಪಿಎಫ್ ಖಾತೆದಾರರಿಗೆ ಪ್ರೀಮಿಯಂ ಪಾವತಿಸದೆ 7ಲಕ್ಷ ರೂ. ಜೀವ ವಿಮಾ ಸೌಲಭ್ಯ; ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ
8.5% ರಿಂದ 8.1%ಕ್ಕೆ ಇಳಿಕೆ: ಈ ಹಿಂದೆ, ನಿವೃತ್ತಿ ಸಂಸ್ಥೆಯು ಜನರ ಆರ್ಥಿಕ ಸಂಪನ್ಮೂಲಗಳ ಮೇಲೆ ಕೋವಿಡ್‌ನ ಪ್ರಭಾವದ ಹಿನ್ನೆಲೆಯಲ್ಲಿ ಠೇವಣಿಗಳ ಗಣನೀಯ ಹಿಂಪಡೆಯುವಿಕೆಯ ಹೊರತಾಗಿಯೂ, 2020-21ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 8.5 ಕ್ಕೆ ಬದಲಾಯಿಸದೆ ಇರಿಸಿತ್ತು. ಕೋವಿಡ್-19 ಸಾಂಕ್ರಾಮಿಕದ ನಂತರ ನಿವೃತ್ತಿ ನಿಧಿ ಸಂಸ್ಥೆಯು ಹೆಚ್ಚಿನ ಹಿಂಪಡೆಯುವಿಕೆ ಮತ್ತು ಕಡಿಮೆ ಠೇವಣಿಗಳನ್ನು ಕಂಡಿತು. ಅಲ್ಲದೇ ಡಿಸೆಂಬರ್ 31 ರವರೆಗೆ, ಮುಂಗಡ ಸೌಲಭ್ಯದ ಅಡಿಯಲ್ಲಿ ಒದಗಿಸಲಾದ 14,310.21 ಕೋಟಿ ಮೌಲ್ಯದ 56.79 ಲಕ್ಷ ಕ್ಲೈಮ್‌ಗಳನ್ನು ಇಪಿಎಫ್‌ಒ ಇತ್ಯರ್ಥಗೊಳಿಸಿದೆ.
ಅದಕ್ಕೂ ಮೊದಲು, ಇಪಿಎಫ್‌ಓ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ಕ್ಕೆ ಏಳು ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಿತ್ತು. 2018-19ರಲ್ಲಿ ಬಡ್ಡಿ ದರ ಶೇ.8.65 ಇತ್ತು. ಇಪಿಎಫ್‌ಓ ತನ್ನ ಚಂದಾದಾರರಿಗೆ 2017-18 ಕ್ಕೆ 8.55 ಶೇಕಡಾ ಬಡ್ಡಿದರವನ್ನು ಒದಗಿಸಿದೆ. 2016-17ರಲ್ಲಿ ಬಡ್ಡಿ ದರ ಶೇ.8.65 ಇತ್ತು.
ಇದನ್ನೂ ಓದಿ: ನೌಕರರಿಗೆ ಗುಡ್‌ನ್ಯೂಸ್: 15 ಸಾವಿರಕ್ಕಿಂತ ಹೆಚ್ಚು ವೇತನ ಇರುವವರಿಗೆ ಹೊಸ ಪೆನ್ಶನ್ ಸ್ಕೀಮ್!
ಹಣಕಾಸು ಸಚಿವಾಲಯದ ಅನುಮೋದನೆ ಅಗತ್ಯ: ಇಪಿಎಫ್‌ಓಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿರುವ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ, ಪ್ರತಿ ವರ್ಷ ಭವಿಷ್ಯ ನಿಧಿ ಠೇವಣಿಗಳ ಮೇಲೆ ಒದಗಿಸಬೇಕಾದ ಬಡ್ಡಿದರಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಒಮ್ಮೆ ಸಿಬಿಟಿ ಒಂದು ಹಣಕಾಸಿನ ವರ್ಷಕ್ಕೆ ಇಪಿಎಫ್‌ಓ ಠೇವಣಿಗಳ ಮೇಲಿನ ಬಡ್ಡಿ ದರವನ್ನು ನಿರ್ಧರಿಸಿದರೆ, ಅದನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಹಣಕಾಸು ಸಚಿವಾಲಯದ ಮೂಲಕ ಸರ್ಕಾರವು ಅನುಮೋದಿಸಿದ ನಂತರವೇ ಇಪಿಎಫ್‌ಓ ಬಡ್ಡಿದರವನ್ನು ಒದಗಿಸುತ್ತದೆ.
ಇಪಿಎಫ್ ಎಂದರೇನು? :ಇಪಿಎಫ್ ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರ ಅಡಿಯಲ್ಲಿ ಕಡ್ಡಾಯ ಉಳಿತಾಯ ಯೋಜನೆಯಾಗಿದೆ. ಇದನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಅಡಿಯಲ್ಲಿ ನಿರ್ವಹಿಸಲಾಗುತ್ತದೆ. ಇದು 20 ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಉದ್ಯೋಗದಲ್ಲಿರುವ ಪ್ರತಿಯೊಂದು ಸಂಸ್ಥೆಯನ್ನು ಒಳಗೊಳ್ಳುತ್ತದೆ. ಉದ್ಯೋಗಿ ಭವಿಷ್ಯ ನಿಧಿಗೆ ನಿರ್ದಿಷ್ಟ ಕೊಡುಗೆಯನ್ನು ಪಾವತಿಸಬೇಕಾಗುತ್ತದೆ ಮತ್ತು ಅದೇ ಮೊತ್ತವನ್ನು ಉದ್ಯೋಗದಾತರು ಮಾಸಿಕ ಆಧಾರದ ಮೇಲೆ ಪಾವತಿಸುತ್ತಾರೆ.
ನಿವೃತ್ತಿಯ ಕೊನೆಯಲ್ಲಿ ಅಥವಾ ಸೇವೆಯ ಸಮಯದಲ್ಲಿ (ಕೆಲವು ಸಂದರ್ಭಗಳಲ್ಲಿ), ನೌಕರನು ಪಿಎಫ್ ಕೊಡುಗೆಯ ಮೇಲಿನ ಬಡ್ಡಿಯನ್ನು ಒಳಗೊಂಡಂತೆ ಒಟ್ಟು ಮೊತ್ತವನ್ನು ಪಡೆಯುತ್ತಾನೆ. ಸೆಪ್ಟೆಂಬರ್ 2017 ರಿಂದ ನವೆಂಬರ್ 2021 ರ ಅವಧಿಯಲ್ಲಿ ಸುಮಾರು 4.9 ಕೋಟಿ ಹೊಸ ಚಂದಾದಾರರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಸೇರಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳು ತೋರಿಸಿವೆ.