ಬೆಂಗಳೂರು[ಸೆ.30]: ಸ್ಪೇಸ್‌ ಬೇಸಿಕ್‌ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸಹ ಸಂಸ್ಥಾಪಕಿಯಾಗಿರುವ ಯುವ ಉದ್ಯಮಿ ಮಾಧವಿ ಶಂಕರ್‌ (29) ವಿಶ್ವ ಸಂಸ್ಥೆಯಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಯುವ ಉತ್ಸಾಹಿ ಉದ್ಯಮಿಯಾಗಿರುವ ಮಾಧವಿ ಶಂಕರ್‌ ಗೌರವ ಡಾಕ್ಟರೇಟ್‌ ಪ್ರಶಸ್ತಿ ಪುರಸ್ಕೃತೆಯೂ ಹೌದು. ಯುನೈಟೆಡ್‌ ನೇಷನ್ಸ್‌ನ ಪ್ರಧಾನ ಕಚೇರಿಯಲ್ಲಿ ಸೆ.27ರಂದು ನಡೆದ ‘1ಎಂ-2030’ ಸಂವಾದ ಕಾರ್ಯಕ್ರಮದಲ್ಲಿ ಭಾರತದ ಪರ ಯುವ ಉದ್ಯಮಿಯಾಗಿ ಪ್ರತಿನಿಧಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ತಂತ್ರಜ್ಞಾನ ಹಾಗೂ ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಟಸಾಧನೆ ತೋರಿರುವ ಭಾರತದ 60 ಮಂದಿ ಮಹಿಳೆಯರ ಪೈಕಿ ಮಾಧವಿ ಶಂಕರ್‌ ಕೂಡ ಒಬ್ಬರು. ಅವರ ಸ್ಪೇಸ್‌ ಬೇಸಿಕ್‌ ಸಂಸ್ಥೆ ಭಾರತ ಸರ್ಕಾರ ಹಾಗೂ ಯುನೈಟೆಡ್‌ ನೇಷನ್ಸ್‌ನಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಯುಎನ್‌ ಪ್ರಧಾನ ಕಚೇರಿ ಜಿನೆವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಔದ್ಯಮಿಕ ಕ್ಷೇತ್ರದ ಪ್ಯಾನೆಲಿಸ್ಟ್‌ಗಳ ಮುಂದೆ ತಮ್ಮ ಚಿಂತನೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ವಿಚಾರ ಮಂಡಿಸಿದರು.