ಜಯರಾಮ

ತೀರಾ ಸಾಮಾನ್ಯ ವ್ಯಕ್ತಿಗೂ ಅಸಾಮಾನ್ಯನಂತೆ ಬದುಕುವ ಆಯ್ಕೆಯಿದೆ ಅನ್ನುವ ಒಂದು ಹೇಳಿಕೆಯಿಂದ ಎಲ್ಲರ ಗಮನ ಸೆಳೆದವನು ಎಲಾನ್‌ ಮಸ್ಕ್‌. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಹುಟ್ಟಿದವನು. ಚಿಕ್ಕವನಿರುವಾಗಲೇ ಅವನ ಅಪ್ಪ ಅಮ್ಮ ವಿಚ್ಛೇದನ ಪಡೆದು ದೂರವಾಗುತ್ತಾರೆ. ನಮ್ಮಪ್ಪ ಒಬ್ಬ ಭಯಾನಕ ಮನುಷ್ಯ ಅಂತ ಮತ್ತೆ ಮತ್ತೆ ಹೇಳುತ್ತಲೇ , ಏಕಾಂಗಿಯಾಗಿಯೇ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾನೆ ಮಸ್ಕ್‌. ಸಿಕ್ಕಸಿಕ್ಕ ಪುಸ್ತಕಗಳನ್ನು ಓದುತ್ತಾನೆ. ತನ್ನದೇ ಶೈಲಿಯಲ್ಲಿ ಸಂಶೋಧನೆಗಳನ್ನು ಮಾಡುತ್ತಾ ಹೋಗುತ್ತಾನೆ. ಬೇರೆಯವರು ಹೇಳಿದ್ದನ್ನು ಒಪ್ಪುವುದಿಲ್ಲ, ನಡೆದ ದಾರಿಯಲ್ಲಿ ನಡೆಯುವುದಿಲ್ಲ.

ಬಿಲ್‌ಗೇಟ್ಸ್‌ ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತನಾದ ಎಲೋನ್ ಮಸ್ಕ್!‌ 

ಈಗ ಐವತ್ತರ ಹೊಸ್ತಿಲಲ್ಲಿರುವ ಮಸ್ಕ್‌ ಕಟ್ಟಿದ ಸಂಸ್ಥೆಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಅವನು ಎದುರಿಸಿರುವ ಮೆಚ್ಚುಗೆ ಮತ್ತು ಟೀಕೆಗಳನ್ನು ಕಂಡಾಗಲೂ ಭಯವಾಗುತ್ತದೆ. ಎಲ್ಲವನ್ನೂ ಮಾಡುತ್ತೇನೆ, ಆದರೆ ನನ್ನ ಶೈಲಿಯಲ್ಲಿಯೇ ಮಾಡುತ್ತೇನೆ. ನನ್ನ ದಾರಿಯೇ ಬೇರೆ ಎಂದು ನಡೆದ ಪೋರನಂತೆ ಕಂಡವನು ಮಸ್ಕ್‌. ಒಂಚೂರು ಧಿಮಾಕು, ಒಂದಷ್ಟುಸೊಕ್ಕು, ಇಷ್ಟೇ ಇಷ್ಟುಅಹಂಕಾರ ಮತ್ತು ಸೋಲುವುದು ಕೂಡ ಒಂದು ಆಯ್ಕೆ ಎಂದು ಭಾವಿಸುವ ದಿಟ್ಟತನಕ್ಕೆ ಪ್ರಖರವಾದ ಬುದ್ಧಿವಂತಿಕೆ ಸೇರಿದರೆ ಎಲಾನ್‌ ಮಸ್ಕ್‌ ಎಂಬ ಅದ್ಬುತ ಮನುಷ್ಯ ಸೃಷ್ಟಿಯಾಗುತ್ತಾನೆ.

ತನ್ನ ಹುಚ್ಚು ಐಡಿಯಾಗಳನ್ನು, ಸ್ಪೇಸ್‌ಎಕ್ಸ್‌ನಲ್ಲಿ ಕೈಗೊಂಡ ವಿಚಿತ್ರ ಹುಡುಕಾಟಗಳನ್ನು ಸಾರ್ವಜನಿಕವಾಗಿ ಚರ್ಚಿಸಬಲ್ಲ ಧೈರ್ಯವೇ ಮಸ್ಕ್‌ ತರುಣರ ಕಣ್ಮಣಿ ಆಗುವಂತೆ ಮಾಡಿತು. ಅತ್ಯಂತ ಪ್ರಾಮಾಣಿಕ ಅಂತಲೂ ಕರೆಸಿಕೊಳ್ಳುವಂತೆ ಮಾಡಿತು. ಅವನ ಕುರಿತಾಗಿರುವ ಬಹುದೊಡ್ಡ ಮೆಚ್ಚುಗೆಯೆಂದರೆ ಆತ ಯಾರ ಮಾತನ್ನೂ ಕೇಳದೇ ತನ್ನದೇ ದಾರಿಯಲ್ಲಿ ಸಾಗಿ ಗೆದ್ದವನು ಎಂಬುದೇ. ಬಹುಶಃ ಅವನು ಮತ್ತೊಬ್ಬರ ಮಾತು ಕೇಳಿದ್ದರೆ ಈ ಮಟ್ಟದ ಯಶಸ್ಸು ಪಡೆಯುತ್ತಿರಲಿಲ್ಲ. 12 ವರ್ಷದ ಹುಡುಗನಾಗಿದ್ದಾಗಲೇ ಅವನು ತಾನೇ ಡಿಸೈನ್‌ ಮಾಡಿದ ಕಂಪ್ಯೂಟರ್‌ ಗೇಮ್‌ ಮಾರಾಟ ಮಾಡಿದ್ದ. ಅಂಥವನು ಟೆಸ್ಲಾ ಮೋಟಾರ್ಸ್‌, ಪೇಪಾಲ್‌ ಮತ್ತು ಸ್ಸೇಸೆಕ್ಸ್‌ ಕಟ್ಟಿದನೆಂದರೆ ಅದರಲ್ಲೇನಿದೆ ಅಚ್ಚರಿ!

ಒಂದೇ ವರ್ಷದಲ್ಲಿ ಟಾಪ್ 2 ಶ್ರೀಮಂತರಾಗೋದು ಹೇಗೆ? ಏನಿದು ಮ್ಯಾಜಿಕ್? 

ಮಸ್ಕ್‌ ಒಬ್ಬ ರಿಸ್ಕ್‌ ಟೇಕರ್‌. ದೊಡ್ಡ ಕನಸುಗಳನ್ನು ಕಾಣುತ್ತಿದ್ದ ಮಹಾ ಕನಸುಗಾರ. ಕಂಡ ಕನಸನ್ನು ಸಾಕಾರಗೊಳಿಸಬಲ್ಲ ಜಾಣ್ಮೆಯೂ ಅವನಲ್ಲಿತ್ತು. ಅದಕ್ಕಾಗಿ ಆತ ಹಗಲಿರುಳು ದುಡಿಯುತ್ತಿದ್ದ. ದಿನಕ್ಕೆ ಹದಿನೈದು ಗಂಟೆ ಕೆಲಸ ಮಾಡುವ ಮಸ್ಕ್‌ ಪ್ರಕಾರ ಈ ಜಗತ್ತು ಹಿಂದುಳಿದಿರುವುದಕ್ಕೆ ಕಾರಣ ರಿಸ್ಕ್‌ ತೆಗೆದುಕೊಳ್ಳಲು ಹೆದರುವುದು.

ಕತ್ತೆ ಥರ ದುಡೀರಿ. ವಾರಕ್ಕೆ ಎಲ್ಲರೂ 40 ಗಂಟೆ ದುಡೀತಾರೆ. ನೀವು 80ರಿಂದ 100 ಗಂಟೆ ದುಡೀರಿ. ಹೊಸದೇನನ್ನೂ ಮಾಡೋದಕ್ಕೆ ಆಗದಿದ್ದರೆ ಮಾಡಬೇಡಿ. ಮಾಡೋದನ್ನೇ ಮಾಡ್ತಾ ಇರಿ. ಆಗ ವಾರಕ್ಕೆ 40 ಗಂಟೆ ದುಡಿಯುವವರು ಒಂದು ವರ್ಷದಲ್ಲಿ ಮಾಡೋದನ್ನು ನೀವು ನಾಲ್ಕೇ ತಿಂಗಳಲ್ಲಿ ಮಾಡಿ ಮುಗಿಸಿರ್ತೀರಿ. ನಿಮ್ಮ ಆಯಸ್ಸು ಇದ್ದಕ್ಕಿದ್ದ ಹಾಗೆ ಇಮ್ಮಡಿ ಆಗಿರುತ್ತೆ. ಒಂದು ದಿನಕ್ಕೆ 48 ಗಂಟೆ ಸಿಕ್ಕಿರುತ್ತೆ. ಮಸ್ಕ್‌ ಹೇಳುತ್ತಿದ್ದದ್ದು ಇದನ್ನೇ. ಯಾವತ್ತೂ ಜಾಸ್ತಿ ಮಂದಿ ಇದ್ದ ತಕ್ಷಣ ಜಾಸ್ತಿ ಕೆಲಸ ಆಗುತ್ತೆ ಅಂದ್ಕೋಬಾರದು.

ತನ್ನ ಸ್ಕೂಲು ದಿನಗಳ ಬಗ್ಗೆ ಮಸ್ಕ್‌ ಬರೆದುಕೊಂಡದ್ದು ಮಜವಾಗಿದೆ. ನಮ್ಮೂರಿನ ಶಾಲೆಗಳ ಹಾಗೆಯೇ ಅಲ್ಲಿಯೂ ಮಸ್ಕ್‌ ಕಷ್ಟಪಟ್ಟದ್ದೂ ಮೇಷ್ಟು್ರಗಳು ದಂಡಿಸಿದ್ದೂ ಈ ಪ್ರಸಂಗದಲ್ಲಿದೆ. ಮಸ್ಕ್‌ ಹೇಳುವುದಿಷ್ಟು:

ನನಗೆ ಶಾಲೆಗೆ ಹೋಗಲಿಕ್ಕೇ ಇಷ್ಟವಿರಲಿಲ್ಲ. ನಮ್ಮಪ್ಪ ಅಮ್ಮ ಒಂದೂರಿಂದ ಮತ್ತೊಂದೂರಿಗೆ ಹೋಗುತ್ತಾ ಇದ್ದದ್ದರಿಂದ ನಾನು ಆರು ಶಾಲೆಗಳಲ್ಲಿ ಓದಿದೆ. ಹೀಗಾಗಿ ನನಗೆ ಗೆಳೆಯರೇ ಇರಲಿಲ್ಲ. ಹೊಸ ಗೆಳೆಯರು ಹುಟ್ಟುವ ಮೊದಲೇ ನಾನು ಶಾಲೆ ಬಿಟ್ಟಿರುತ್ತಿದ್ದೆ. ಕ್ಲಾಸಿನಲ್ಲೇ ನಾನೇ ಅತಿ ಚಿಕ್ಕ ಹುಡುಗನೂ ಆಗಿದ್ದೆ. ಹೀಗಾಗಿ ಸಾಕಷ್ಟುಪೆಟ್ಟೂತಿನ್ನುತ್ತಿದ್ದೆ. ಅದರಿಂದ ತಪ್ಪಿಸಿಕೊಳ್ಳಲು ಅಡಗಿ ಕೂರುತ್ತಿದ್ದೆ, ಓಡಿಬಿಡುತ್ತಿದ್ದೆ. ಯಾರ ಕಣ್ಣಿಗೂ ಬೀಳದಿರಲು ಪುಸ್ತಕ ಓದುತ್ತಾ ತಲೆಮರೆಸಿಕೊಳ್ಳುತ್ತಿದ್ದೆ.

ವಿಶ್ವದ ಮೊದಲ ಸಿರಿವಂತ ಸ್ಥಾನಕ್ಕೇರಿದ ಟೆಸ್ಲಾ ಮುಖ್ಯಸ್ಥ ಎಲೆನ್ ಮಸ್ಕ್ 

ಈ ಜೀವನದ ಅರ್ಥವೇನು ಅಂತ ಹುಡುಕಲಿಕ್ಕೆ ಸಿಕ್ಕ ಸಿಕ್ಕ ಪುಸ್ತಕಗಳನ್ನು ಓದುತ್ತಿದ್ದ ಹದಿನೈದರ ಹುಡುಗ ಮಸ್ಕ್‌ ಯೋಚಿಸುತ್ತಿದ್ದ ರೀತಿಯೇ ಬೇರೆಯಾಗಿತ್ತು. ಇಂಗ್ಲಿಷ್‌, ಗಣಿತ, ವಿಜ್ಞಾನವನ್ನು ಪುಸ್ತಕದಿಂದ ಮಸ್ತಕಕ್ಕೆ ಡೌನ್‌ ಲೋಡ್‌ ಮಾಡಿಕೊಳ್ಳುತ್ತಾ, ಯಾವುದೋ ಫ್ಯಾಕ್ಟರಿಯ ಅಸೆಂಬ್ಲಿ ಲೈನಿನಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಹೋಗುವ ಸರಕಿನ ಹಾಗೆ ವಿದ್ಯಾರ್ಥಿಗಳೂ ಒಂದರಿಂದ ಮತ್ತೊಂದು ತರಗತಿಗೆ ಹೋಗುವುದು ನನಗೆ ತಮಾಷೆಯಾಗಿ ಕಾಣುತ್ತಿತ್ತು. ಅದರಿಂದ ಯಾವ ಉಪಯೋಗವೂ ಇಲ್ಲ ಅನ್ನುವುದು ಗೊತ್ತಾಯಿತು. ಅವರವರು ಅವರವರ ಆಸಕ್ತಿಯ ಸಂಗತಿಗಳನ್ನು ಬೇರೆ ಬೇರೆ ಜಾಗಗಳಲ್ಲಿ ಕಲಿಯುತ್ತಾರೆ. ಕಲಿಯದೇ ಇದ್ದವರು ಉತ್ತೀರ್ಣರಾಗುತ್ತಾರೆ!

ಎಲಾನ್‌ ಮಸ್ಕ್‌ ಮಾಡಿದ ಸಾಧನೆಗಳ ಪಟ್ಟಿಯನ್ನು ಕೊಡುವುದಕ್ಕಿಂತ ಅವನ ಮನಸ್ಸಿನ ಮಾತುಗಳನ್ನು ಕೇಳುವುದು ಮುಖ್ಯ. ಮಸ್ಕ್‌ ಎಲ್ಲರಂತೆ ಯೋಚಿಸಲೇ ಇಲ್ಲ. ತುಂಬ ದುಡ್ಡು ಮಾಡುವುದಕ್ಕೆ, ಹೆಸರು ಮಾಡುವುದಕ್ಕೆ ಏನು ಬೇಕು ಅಂತ ಕೇಳಿದಾಗ ಆತ ಹೇಳಿದ್ದು, ಅದಕ್ಕೆ ಬೇಕಾಗಿರುವುದು ಹೃದಯವಂತಿಕೆ. ಆತನ ಪ್ರಕಾರ ಸಂತೋಷವಾಗಿರುವುದಕ್ಕೆ ಮುಖ್ಯವಾಗಿ ಬೇಕಾದದ್ದು ಶ್ರದ್ಧೆ,

1, ಗಮನ ಕೊಡಿ, ಕ್ರಿಯಾಶೀಲರಾಗಿ: ಮಸ್ಕ್‌ ಗೆದ್ದದ್ದು ಅದೃಷ್ಟದಿಂದ ಅಲ್ಲ. ಶ್ರೀಮಂತಿಕೆಯ ಬೆಂಬಲವೂ ಆತನಿಗಿರಲಿಲ್ಲ. ಆತ ಮಹಾ ಜಾಣನೇನೂ ಅಲ್ಲ. ಬದಲಾಗಿ ತನ್ನ ಸುತ್ತಲಿನ ಪರಿಸರ ತನಗೆ ಕೊಡುತ್ತಿದ್ದ ಸೂಚನೆಗಳನ್ನು ಆತ ಗಮನಿಸುತ್ತಿದ್ದ. ಆ ಸೂಚನೆಗಳಂತೆ ನಡೆಯುತ್ತಿದ್ದ. ನೀವು ಎಲ್ಲವನ್ನೂ ಸದಾ ಗಮನಿಸುತ್ತಿರಿ ಅನ್ನುವುದು ಅವನ ಮೂಲಮಂತ್ರ. ಅದನ್ನು ಆತ ಹೇಳಿದ್ದು ಪ್ರಕೃತಿಯನ್ನು ಕುರಿತು.

2. ಪೆಟ್ಟುಗಳಿಂದ ತಪ್ಪಿಸಿಕೊಳ್ಳಿ: ಮಸ್ಕ್‌ ಬೆಳೆದದ್ದು ಬಡತನದಲ್ಲಿ. ಅವನ ಬಾಲ್ಯ ಸಂತೋಷದಾಯಕವಾಗಿ ಇರಲಿಲ್ಲ. ಆದರೆ ಕ್ರಮೇಣ ಆತ ತನಗೆ ಬೀಳುತ್ತಿದ್ದ ಪೆಟ್ಟುಗಳಿಂದಲೇ ತನ್ನನ್ನು ರೂಪಿಸಿಕೊಳ್ಳಲು ಕಲಿತ. ಒಂದೊಂದು ಸಾರಿ ಅದೃಷ್ಟಒದ್ದಾಗಲೂ ಒಂಚೂರು ಮುಂದೆ ಹೋಗುತ್ತಿದ್ದ. ಅನಿರೀಕ್ಷಿತ ಘಟನೆಗಳನ್ನು ಅವಕಾಶಗಳಾಗಿ ಬಳಸಿಕೊಳ್ಳಬೇಕು ಅನ್ನುವುದು ಮಸ್ಕ್‌ ಹೇಳುವ ಮಾತು.

ವಿಶ್ವದ ನಂ.1 ಶ್ರೀಮಂತ ಮಸ್ಕ್; ಬೈಡೆನ್‌ಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿದ ಟ್ರಂಪ್ 

3. ದುಡಿಮೆಯ ನಂಬಿ ಬದುಕು: ದುಡಿಮೆಗಿಂತ ದೇವರಿಲ್ಲ, ಕಾಯಕವೇ ಕೈಲಾಸ ಅನ್ನುವುದು ಆತನಿಗೆ ಗೊತ್ತಿತ್ತು. ಹೀಗಾಗಿ ಎಲ್ಲರೂ ವಾರಕ್ಕೆ ನಲವತ್ತು ಗಂಟೆ ದುಡಿಯುವಾಗ, ಮಸ್ಕ್‌ ನೂರು ಗಂಟೆ ದುಡಿಯುತ್ತಿದ್ದ.

4. ನಿನ್ನ ಉದ್ದೇಶ ನಿನಗೆ ಗೊತ್ತಿರಲಿ: ಯಾವುದೇ ಕೆಲಸವನ್ನು ನಾವೇಕೆ ಮಾಡುತ್ತಿದ್ದೇವೆ ಎಂಬುದು ನಮಗೆ ಗೊತ್ತಿರಬೇಕು, ಅವನ ಉದ್ದೇಶ ಇದು ಅಂತ ಮೂರನೆಯವರು ಏನು ಬೇಕಾದರೂ ಅಂದುಕೊಳ್ಳಲಿ, ನಿಜವಾದ ಕಾರಣ ನಮಗೆ ಗೊತ್ತಿದ್ದರೆ ಸಾಕು.

5. ಪ್ಲಾನ್‌ ಮಾಡಿ ಆದರೆ ಅದಕ್ಕೇ ಜೋತುಬೀಳಬೇಡಿ: ಇದು ಮಸ್ಕ್‌ ಪಾಲಿಸುತ್ತಿದ್ದ ಮತ್ತೊಂದು ನೀತಿ. ಎಲ್ಲವನ್ನೂ ಚೆನ್ನಾಗಿ ಪ್ಲಾನ್‌ ಮಾಡಬೇಕು, ಆದರೆ ಅದು ನಡೆಯುವುದಿಲ್ಲ ಅಂತ ಗೊತ್ತಾದರೆ ಥಟ್ಟನೆ ಅದನ್ನು ಬದಲಾಯಿಸಬೇಕು. ಯೋಜನೆ ಅಂದರೆ ಬದಲಾಯಿಸುತ್ತಾ ಇರುವುದು ಅಂತ ಹೇಳಿಕೊಟ್ಟದ್ದು ಮಸ್ಕ್‌.

6. ನಿಮ್ಮ ಯಶಸ್ಸಿನ ಮಟ್ಟನೀವೇ ಕಂಡುಕೊಳ್ಳಿ: ಜಗತ್ತಿನಲ್ಲಿ ಯಾವುದೂ ಗೆಲುವಲ್ಲ. ಹೀಗಾಗಿ ನನ್ನ ಗೆಲುವು ಇದು ಅಂತ ನಾವೇ ಕಂಡುಕೊಳ್ಳಬೇಕು. ಅದನ್ನು ಬೇರೆಯವರು ನಿರ್ಧಾರ ಮಾಡುವಂತೆ ಆಗಬಾರದು. ಆದರೆ ಸೋಲು ಕೂಡ ನಮ್ಮನ್ನು ಬೆಳೆಸುವ ಉಪಾಯ ಎಂದು ನಂಬುತ್ತಿದ್ದ. ಅವನ ಪ್ರಕಾರ ಯಾವುದೇ ಯೋಜನೆ ಸೋಲದೇ ಹೋದರೆ ಅದರಲ್ಲಿ ಹೊಸತನವೇ ಇಲ್ಲ ಅಂತ ಅರ್ಥ.

ಬೆಳಗ್ಗೆ ಎದ್ದಾಕ್ಷಣ ನನ್ನ ಇಂದು ಮತ್ತು ನಾಳೆಗಳು ಮತ್ತಷ್ಟುಸುಂದರವೂ ಪ್ರಕಾಶಮಾನವೂ ಆಗಿರುತ್ತದೆ ಅಂತ ಅನ್ನಿಸಿದರೆ ಅದು ಒಳ್ಳೆಯ ದಿನ, ಅಲ್ಲದೇ ಹೋದರೆ ಅಲ್ಲ. ಇದು ಮಸ್ಕ್‌ ಹೇಳುತ್ತಿದ್ದ ಮಾತು.

New Sensation: ವಾಟ್ಸಾಪ್ ಹಿಂದಿಕ್ಕುವ ‘ಸಿಗ್ನಲ್’ 

ಈಗ ಐವತ್ತರಲ್ಲಿರುವ ಮಸ್ಕ್‌ ಕುರಿತು ಸಾವಿರಾರು ಪುಸ್ತಕಗಳು ಬಂದಿವೆ. ಸಾವಿರಾರು ಅಭಿಮಾನಿಗಳು ಮಸ್ಕ್‌ ಹೇಳಿದ್ದನ್ನು ಕೇಳಿಕೊಂಡು ತಮ್ಮ ಗುರಿ ಸಾಧಿಸಿದ್ದಾರೆ. ಹೊಸ ವರುಷದ ಆರಂಭದ ದಿನಗಳಲ್ಲಿ ಮಸ್ಕ್‌ ನಿಮಗೂ ಸ್ಫೂರ್ತಿಯಾಗಲಿ.