ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಎಲೋನ್ ಮಸ್ಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಟೆಲಿಕಾಂ ವಲಯದಲ್ಲಿ ಮುಕೇಶ್ ಅಂಬಾನಿ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರು (ಅ.8): ಭಾರತದಲ್ಲಿ ತಮ್ಮ ಕನಸಿನ 'ಸ್ಟಾರ್‌ಲಿಂಕ್' (Starlink) ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳ ಚಾಲನೆಗೆ ಅನುಮತಿ ಸಿಗದಿರುವುದಕ್ಕೆ ವಿಶ್ವದ ಪ್ರಮುಖ ಉದ್ಯಮಿ ಎಲೋನ್ ಮಸ್ಕ್ ಅತ್ಯಂತ ತೀವ್ರವಾಗಿ ಕಿಡಿಕಾರಿದ್ದಾರೆ. ಮಾರುಕಟ್ಟೆ ನಿಯಮಾವಳಿಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಮಸ್ಕ್ ಅವರ ಆರೋಪವನ್ನು ಭಾರತ ಸರ್ಕಾರವು ತಳ್ಳಿಹಾಕಿದ ಕೆಲವೇ ಗಂಟೆಗಳಲ್ಲಿ, ಟೆಕ್ ಬಿಲಿಯನೇರ್ ಮಸ್ಕ್ ಭಾರತೀಯ ಟೆಲಿಕಾಂ ವಲಯದ ಪ್ರಭಾವಿ ಉದ್ಯಮಿ ಮುಕೇಶ್ ಅಂಬಾನಿ ಅವರನ್ನು ಗುರಿಯಾಗಿಸಿಕೊಂಡು ನೇರ ಸವಾಲು ಎಸೆದಿದ್ದಾರೆ. "ಭಾರತದ ರಿಯಲ್ ಬಾಸ್ ಅಂಬಾನಿಯೇ" ಎಂದು ಮಸ್ಕ್ ನೇರವಾಗಿ ಪ್ರಶ್ನೆ ಮಾಡುವ ಮೂಲಕ ವಿಶ್ವದ ಶ್ರೀಮಂತ ವ್ಯಕ್ತಿ ಈ ವಿಚಾರದಲ್ಲಿ ಭಾರತದ ಶ್ರೀಮಂತ ಉದ್ಯಮಿಯನ್ನು ಎಳೆದು ತಂದಿದ್ದಾರೆ.
ಕಳೆದ ಹಲವು ವರ್ಷಗಳಿಂದ ಭಾರತದ ನಿಯಂತ್ರಣ ಪ್ರಾಧಿಕಾರಗಳೊಂದಿಗೆ ನಿರಂತರವಾಗಿ ವ್ಯವಹರಿಸುತ್ತಿದ್ದು, ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬಂದಿದ್ದರೂ, ಸ್ಟಾರ್‌ಲಿಂಕ್ ಸಂಸ್ಥೆಗೆ ಇಂದಿಗೂ ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸಲು ಅನುಮತಿ ಸಿಗದಿರುವುದರ ಹಿಂದಿನ ರಹಸ್ಯವೇನು ಎಂದು ಮಸ್ಕ್ ಖಾರವಾಗಿ ಕೇಳಿದ್ದಾರೆ. ಇದರ ಜೊತೆಗೆ, ಭಾರತೀಯ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರೇ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ.
'ಎಕ್ಸ್' (X)ನಲ್ಲಿ ಮಸ್ಕ್ ಬರೆದುಕೊಂಡಿರುವುದೇನು?
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಎಲೋನ್ ಮಸ್ಕ್, "ಸ್ಟಾರ್‌ಲಿಂಕ್ ಸಂಸ್ಥೆಯು ಜಗತ್ತಿನಾದ್ಯಂತ 165ಕ್ಕೂ ಹೆಚ್ಚು ದೇಶಗಳಲ್ಲಿ ಅಧಿಕೃತ ಲೈಸೆನ್ಸ್ (ಪರವಾನಗಿ) ಪಡೆದುಕೊಂಡು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಭಾರತ ಸರ್ಕಾರದ ಪ್ರತಿಯೊಂದು ಕಾನೂನು ಹಾಗೂ ನಿಯಮಾವಳಿಗಳನ್ನು ಪಾಲಿಸಲು ನಾವು ಕಳೆದ ಐದು ವರ್ಷಗಳಿಂದ ಶ್ರಮಿಸಿದ್ದೇವೆ. ಹೀಗಿದ್ದರೂ ನಮಗೆ ಭಾರತದಲ್ಲಿ ಇಂದಿಗೂ ಲೈಸೆನ್ಸ್ ಏಕೆ ಸಿಕ್ಕಿಲ್ಲ?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಬೆನ್ನಲ್ಲೇ ಮತ್ತೊಂದು ತೀವ್ರ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿರುವ ಅವರು, "ಭಾರತದ ರಿಯಲ್ ಬಾಸ್ ಅಂಬಾನಿಯೇ" ಎಂದು ಪಶ್ನಿಸುವ ಮೂಲಕ ಭಾರತೀಯ ಟೆಲಿಕಾಂ ರಂಗದ ನಾಯಕತ್ವ ಮತ್ತು ಪ್ರಭಾವದ ಕುರಿತು ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದ್ದಾರೆ.

ವಿವಾದದ ಹಿನ್ನೆಲೆ
ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗಳ (Satellite Broadband Services) ತರಂಗಾಂತರ (Spectrum) ಹಂಚಿಕೆಯ ವಿಚಾರದಲ್ಲಿ ಭಾರತೀಯ ಟೆಲಿಕಾಂ ವಲಯದಲ್ಲಿ ಕಳೆದ ಕೆಲವು ಸಮಯದಿಂದ ದೊಡ್ಡ ಮಟ್ಟದ ಜಟಾಪಟಿ ನಡೆಯುತ್ತಿದೆ. ರಿಲಯನ್ಸ್ ಜಿಯೋ ಸಂಸ್ಥೆಯು ಉಪಗ್ರಹ ತರಂಗಾಂತರಗಳನ್ನು ಹರಾಜು (Auction) ಮಾಡುವ ಮೂಲಕವೇ ಹಂಚಿಕೆ ಮಾಡಬೇಕು ಎಂದು ಪ್ರತಿಪಾದಿಸುತ್ತಿದ್ದರೆ, ಎಲೋನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಸೇರಿದಂತೆ ಜಾಗತಿಕ ಸಂಸ್ಥೆಗಳು ಅಂತರರಾಷ್ಟ್ರೀಯ ಮಾನದಂಡಗಳಂತೆ ಆಡಳಿತಾತ್ಮಕವಾಗಿ (Administrative Allocation) ಹಂಚಿಕೆ ಮಾಡಬೇಕೆಂದು ಒತ್ತಾಯಿಸುತ್ತಿದ್ದವು. ಪ್ರಸ್ತುತ ಭಾರತ ಸರ್ಕಾರವು ಮಸ್ಕ್ ಅವರ ತಾರತಮ್ಯದ ಆರೋಪವನ್ನು ಅಧಿಕೃತವಾಗಿ ನಿರಾಕರಿಸಿದ್ದರೂ, ಮಸ್ಕ್ ಅವರು ನೇರವಾಗಿ ಮುಕೇಶ್ ಅಂಬಾನಿ ಅವರ ಹೆಸರನ್ನು ಪ್ರಸ್ತಾಪಿಸಿ ಆಕ್ಷೇಪ ಎತ್ತಿರುವುದು ಜಾಗತಿಕ ಉದ್ಯಮ ರಂಗ ಹಾಗೂ ಭಾರತೀಯ ಉದ್ಯಮ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.


