ನಾರಾಯಣ ಮೂರ್ತಿ ಹಾಗೂ ಸುಬ್ರಹ್ಮಣ್ಯನ್ ವಾರದಲ್ಲಿ 70, 90 ಗಂಟೆ ಕೆಲಸಕ್ಕೆ ಸೂಚಿಸಿ ಟ್ರೋಲ್ ಆಗಿದ್ದರು. ಆದರೆ ಇದೀಗ ಇಬ್ಬರೂ ಕೊಂಚ ನಿರಾಳರಾಗಿದ್ದಾರೆ. ಕಾರಣ ಕೆಲಸದ ವಿಚಾರದಲ್ಲಿ ಇವರ ದೊಡ್ಡಪ್ಪ ಎಲಾನ್ ಮಸ್ಕ್ ಹೊಸ ಲಾಜಿಕ್ ಮುಂದಿಟ್ಟಿದ್ದಾರೆ.  

ನವದೆಹಲಿ(ಫೆ.05) ನಾರಾಯಣ ಮೂರ್ತಿ, ಸುಬ್ರಹ್ಮಣ್ಯನ್ ಇದೀಗ ಫುಲ್ ಖುಷ್ ಆಗಿದ್ದಾರೆ. ಕಾರಣ ವಾರದಲ್ಲಿ 70 ಗಂಟೆ, 90 ಗಂಟೆ ಕೆಲಸಕ್ಕೆ ಸೂಚಿಸಿ ಕೋಲಾಹಲ ಸೃಷ್ಟಿಸಿದ್ದರು. ಆದರೆ ಇದೀಗ ಎಲಾನ್ ಮಸ್ಕ್ ಹೇಳಿಕೆಯಿಂದ ಇಬ್ಬರು ದಿಗ್ಗಜರು ನಿರಾಳರಾಗಿದ್ದಾರೆ. ಕಾರಣ ವಿಶ್ವದ ಶ್ರೀಮಂತ ಉದ್ಯಮಿ, ಕೈ ಹಾಕಿದ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಕಂಡಿರುವ ಎಲಾನ್ ಮಸ್ಕ್ ಇದೀಗ ವಾರದಲ್ಲಿ 120 ಗಂಟೆ ಕೆಲಸ ಮಾಡಿದರೆ ಉತ್ತಮ ಎಂದಿದ್ದಾರೆ. ಎಲಾನ್ ಮಸ್ಕ್ ಈ ಹೇಳಿಕೆ ನೀಡುತ್ತಿದ್ದಂತೆ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಇದೀಗ ವಾರದಲ್ಲಿ ಎಷ್ಟು ಗಂಟೆ ಕೆಲಸ ಮಾಡಬೇಕು ಅನ್ನೋ ಚರ್ಚೆ ಶುರುವಾಗಿದೆ. ಆದರೆ ಈ ಚರ್ಚೆ ಭಾರತದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಲೇ ಇದೆ. ಎಲಾನ್ ಮಸ್ಕ್ ಹೇಳಿಕೆಗೆ ಭಾರಿ ವಿರೋಧಗಳು ವ್ಯಕ್ತವಾಗಿದೆ. 

ಎಲಾನ್ ಮಸ್ಕ್ ಸದ್ಯ ಡೋನಾಲ್ಡ್ ಟ್ರಂಪ್ ಸರ್ಕಾರದ ಭಾಗವಾಗಿದ್ದಾರೆ. ತಮ್ಮ ಕಾರ್ಪೋರೇಟ್ ಶೈಲಿಯನ್ನು ಇದೀಗ ಟ್ರಂಪ್ ಸರ್ಕಾರದ ಪ್ರತಿ ಇಲಾಖೆಗಳಲ್ಲಿ ತರಲು ಬಯಸುತ್ತಿದ್ದಾರೆ. ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಶೀಯೆನ್ಸಿ(DOGE) ಅಧಿಕಾರಿಗಳು ವಾರದಲ್ಲಿ 120 ಗಂಟೆ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ. ವಾರಾಂತ್ಯದಲ್ಲೂ ಕೆಲಸ ಮಾಡಿದರೆ ಮಾತ್ರ ಸೂಪರ್ ಪವರ್ ಆಗಲು ಸಾಧ್ಯ. ಸರ್ಕಾರಿ ಅಧಿಕಾರಿಗಳು ವಾರದಲ್ಲಿ ಕೇವಲ 40 ಗಂಟೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಕೆಲವೇ ಕೆಲವು ಅಧಿಕಾರಿಗಳು ವಾರಾಂತ್ಯದಲ್ಲಿ ಕೆಲಸ ಮಾಡುತ್ತಾರೆ.

ನೌಕರರಿಗೆ ವೀಕೆಂಡ್‌ನಲ್ಲಿ ಕೆಲಸ, ಬಾಸ್‌ಗೆ ಮಾತ್ರ ಟಿ20 ಕಿಕ್, ಮತ್ತೆ ನಾರಾಯಣ ಮೂರ್ತಿ ಟ್ರೋಲ್

ಮಸ್ಕ್ ಸೂಚಿಸಿದ ಪ್ರಕಾರ ವಾರದಲ್ಲಿ 120 ಗಂಟೆ ಅದರೆ ವಾರದಲ್ಲಿ 5 ದಿನ ಕೆಲಸ ಮಾಡಿ ಇನ್ನೆರಡು ದಿನ ರಜೆ ತೆಗೆದುಕೊಳ್ಳಲು ಬಯಸಿದೆ ಉದ್ಯೋಗಿ ಪ್ರತಿ ದಿನ 24 ಗಂಟೆ ಕೆಲಸ ಮಾಡಬೇಕು. ದಿನದ 24 ಗಂಟೆಯೂ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವವರು ವಾರದ 7 ದಿನ ಕೆಲಸ ಮಾಡಬೇಕು. ಹೀಗೆ 7 ದಿನ ಕೆಲಸ ಮಾಡಲು ಬಯುಸುವ ಉದ್ಯೋಗಿಗಳು ಪ್ರತಿ ದಿನ 17 ಗಂಟೆ ಕೆಲಸ ಮಾಡಬೇಕು. ಹೀಗಾದರೆ ಮಾತ್ರ ಎಲಾನ್ ಮಸ್ಕ್ ಹೇಳಿದ 120 ಗಂಟೆಯಾಗಲಿದೆ. ಇದು ಯಾವ ಆಯಾಮದಿಂದ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲಸ ಮಾಡಲು, ಮಾಡಿಸುವುದಕ್ಕೂ ಒಂದು ಮಿತಿ ಇದೆ. ಈ ರೀತಿ ಕೆಲಸದ ಸಮಯ ಜಾಸ್ತಿ ಮಾಡಿಕೊಳ್ಳುತ್ತಾ ಹೋದರೆ ಪರಿಣಾಮ ಏನಾಗಬಹುದು ಅನ್ನೋ ಸಣ್ಣ ಕಲ್ಪನೆಯಾದರೂ ಇದೆಯಾ ಎಂದು ಹಲವರು ಪ್ರಶ್ನಿಸಿದ್ದಾರೆ. ನಾರಾಯಣ ಮೂರ್ತಿ, ಸುಬ್ರಹ್ಮಣ್ಯನ್ ಪರ್ವಾಗಿಲ್ಲ, ಎಲಾನ್ ಮಸ್ಕ್ ಇವರಿಗೆ ದೊಡ್ಡಪ್ಪ ಎಂದು ಭಾರತದಲ್ಲಿ ಹಲವರು ಕಮೆಂಟ್ ಮಾಡಿದ್ದಾರೆ. 

ನಾರಾಯಣ ಮೂರ್ತಿ ಮೊದಲು ವಾರದಲ್ಲಿನ ಉದ್ಯೋಗಿಗಳ ಕೆಲಸದ ಸಮಯ ಹೆಚ್ಚಿಸಬೇಕು ಅನ್ನೋ ಚರ್ಚೆ ಹುಟ್ಟುಹಾಕಿದ್ದರು. ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ತಾನು ಬೆಳಗ್ಗೆ 8 ಗಂಟೆಗೆ ಕಚೇರಿಗೆ ತೆರಳಿ ರಾತ್ರಿ 8.30ರ ವರೆಗೆ ಕೆಲಸ ಮಾಡಿದ್ದೇನೆ. ಉತ್ಪಾದನೆ ಹೆಚ್ಚಿಸಲು, ಸಾಧನೆಗೆ 70 ಗಂಟೆ ಕೆಲಸ ಅನಿವಾರ್ಯ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇತ್ತ ಎಲ್‌ ಆ್ಯಂಡ್ ಟಿ ಸುಬ್ರಹ್ಮಣ್ಯನ್ ಸಂದರ್ಶನದಲ್ಲಿ ವಾರದಲ್ಲಿ 90ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಭಾನುವಾರ ಪತ್ನಿ ಮುಖ ಎಷ್ಟು ನೋಡುತ್ತೀರಿ. ಕಚೇರಿಗೆ ಬಂದು ಕೆಲಸ ಮಾಡಿ. ಶನಿವಾರ ಹಾಗೂ ಭಾನುವಾರ ಉದ್ಯೋಗಿಗಳನ್ನು ಕೆಲಸ ಮಾಡುವಂತೆ ಹೇಳಲಿಲ್ಲ ಅನ್ನೋ ತಪ್ಪಿತಸ್ಥ ಭಾವನೆ ನನ್ನಲ್ಲಿದೆ ಎಂದು ಸುಬ್ರಹ್ಮಣ್ಯನ್ ಹೇಳಿದ್ದರು. ಇದೀಗ 120 ಗಂಟೆಗೆ ಎಲಾನ್ ಮಸ್ಕ್ ಸೂಚಿಸಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.