Edible Oil Price:ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಇಳಿಕೆ; ಲೀಟರ್ ಗೆ 10ರೂ. ತಗ್ಗಿಸಿದ ಅದಾನಿ ವಿಲ್ಮರ್

*ಖಾದ್ಯ ತೈಲಗಳ ಬೆಲೆಯಲ್ಲಿ ಲೀಟರ್ ಗೆ 10ರೂ. ಇಳಿಕೆ ಮಾಡಿದ ಅದಾನಿ ವಿಲ್ಮರ್ 
*ಕೆಲವು ದಿನಗಳ ಹಿಂದೆ ಬೆಲೆ ಇಳಿಕೆ ಮಾಡಿದ್ದ ಜೆಮಿನಿ ಖಾದ್ಯ ತೈಲ ಕಂಪನಿ
*ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ

Edible Oil Prices Drop again Why Rates Are Cooling Off details here

ನವದೆಹಲಿ (ಜೂ.20): ಗಗನಕ್ಕೇರಿದ ಖಾದ್ಯ ತೈಲ ಬೆಲೆ ಕಳೆದ ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡುವ ಮೂಲಕ ಗ್ರಾಹಕರಿಗೆ ಕೊಂಚ ನಿರಾಳತೆ ಒದಗಿಸಿದೆ. ನಾಲ್ಕೈದು ದಿನಗಳ ಹಿಂದಷ್ಟೇ ಅಲ್ಪಇಳಿಕೆಯಾಗಿದ್ದ ಅಡುಗೆ ಎಣ್ಣೆ (Edible oil) ಬೆಲೆಯಲ್ಲಿ ಈಗ ಮತ್ತೆ ಇಳಿಕೆಯಾಗಿದೆ. ಅದಾನಿ ವಿಲ್ಮರ್ (Adani Wilmar) ಖಾದ್ಯ ತೈಲಗಳ ಬೆಲೆಯಲ್ಲಿ ಲೀಟರ್ ಗೆ 10ರೂ. ಇಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. 

ಫಾರ್ಚೂನ್ ಸನ್ ಫ್ಲವರ್ ತೈಲದ ಪ್ರತಿ ಒಂದು ಲೀಟರ್ ಪ್ಯಾಕ್ ಬೆಲೆಯನ್ನು 220ರೂ.ನಿಂದ 210ರೂ.ಗೆ ಇಳಿಕೆ ಮಾಡಿದೆ. ಇನ್ನು ಫಾರ್ಚೂನ್ ಸೋಯಾಬಿನ್ ಹಾಗೂ ಫಾರ್ಚೂನ್ ಕಚ್ಚಿ ಘನಿ (mustard oil) ಒಂದು ಲೀಟರ್ ಪ್ಯಾಕೆಟ್ ಬೆಲೆಯನ್ನು 205ರೂ.ನಿಂದ 195ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಅದಾನಿ ವಿಲ್ಮರ್ ಪ್ರಕಟಣೆಯಲ್ಲಿ ತಿಳಿಸಿದೆ. 

Sovereign Gold Bond:ಚಿನ್ನದ ಮೇಲಿನ ಹೂಡಿಕೆಗೆ ಒಳ್ಳೆಯ ಅವಕಾಶ; ಸೋಮವಾರ ಸಾವರಿನ್ ಗೋಲ್ಡ್ ಬಾಂಡ್ ಬಿಡುಗಡೆ

ಹೈದರಾಬಾದ್ (Hyderabad) ಮೂಲದ ಜೆಮಿನಿ ಖಾದ್ಯ ತೈಲ ಕಂಪನಿಯು (Gemini Edibles & Fats) ಫ್ರಿಡಂ ಸನ್ ಫ್ಲವರ್ ಎಣ್ಣೆ (Freedom Sunflower Oil) ಎಂಆರ್ ಪಿಯಲ್ಲಿ (MRP) 15ರೂ. ಕಡಿತಗೊಳಿಸಿದ್ದು, ಒಂದು ಲೀಟರ್ ಪ್ಯಾಕೆಟ್ ಬೆಲೆ 220ರೂ. ತಲುಪಿದೆ. ಮುಂದಿನ ದಿನಗಳಲ್ಲಿ ಕಂಪನಿಯು ಬೆಲೆಯಲ್ಲಿ ಮತ್ತೆ 20ರೂ. ಇಳಿಕೆ ಮಾಡಿ ಲೀಟರ್ ಗೆ 200ರೂ. ಮಾಡುವ ಸಾಧ್ಯತೆಯಿದೆ.

ಬೆಲೆ ಇಳಿಕೆಗೆ ಕಾರಣವೇನು?
ಕೇಂದ್ರ ಸರ್ಕಾರ ಇತ್ತೀಚೆಗೆ ಖಾದ್ಯ ತೈಲಗಳ ಆಮದು ಸುಂಕವನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕಂಪನಿಗಳು ಬೆಲೆಯಲ್ಲಿ ಇಳಿಕೆ ಮಾಡಿವೆ.  ಕಳೆದ ವಾರ ಬ್ರ್ಯಾಂಡೆಡ್ ತಾಳೆ ಎಣ್ಣೆ (Palm Oil),ಸೂರ್ಯಕಾಂತಿ (Sunflower) ಹಾಗೂ ಸೋಯಾಬಿನ್ ಎಣ್ಣೆ (Soybean Oil) ಬೆಲೆಯಲ್ಲಿ (Price) ಪ್ರತಿ ಲೀಟರ್ ಗೆ 15ರೂ. ಇಳಿಕೆಯಾಗಿದೆ. ತಾಳೆ ಎಣ್ಣೆ ಬೆಲೆ ಪ್ರತಿ ಲೀಟರ್ ಗೆ 7-8ರೂ. ತಗ್ಗಿದೆ. ಇನ್ನು ಸೂರ್ಯಕಾಂತಿ ಎಣ್ಣೆ ದರದಲ್ಲಿ ಕೂಡ ಪ್ರತಿ ಲೀಟರ್ ಗೆ 10-15ರೂ. ಇಳಿಕೆ ಕಂಡಿದೆ. ಇನ್ನು ಸೋಯಾಬಿನ್ ಎಣ್ಣೆ ಬೆಲೆಯಲ್ಲಿ ಕೂಡ 5ರೂ. ಕಡಿಮೆಯಾಗಿದೆ. 

ಕಚ್ಚಾ ತಾಳೆ ಎಣ್ಣೆ ಆಮದು ಬೆಲೆ ಈಗ ಪ್ರತಿ ಟನ್ ಗೆ 1,620 ಡಾಲರ್ ಇದೆ. ಈ ಹಿಂದೆ ಪ್ರತಿ ಟನ್ ಗೆ 1,625 ಡಾಲರ್ ಇತ್ತು. ಇನ್ನು ಕಚ್ಚಾ ಸೋಯಾ ಎಣ್ಣೆ ಆಮದು ಬೆಲೆ ಕೂಡ ಪ್ರತಿ ಟನ್ ಗೆ 1,866 ಡಾಲರ್ ನಿಂದ 1,831 ಡಾಲರ್ ಗೆ ಇಳಿಕೆಯಾಗಿದೆ. 

ಭಾರತದ ಅಡುಗೆ ಎಣ್ಣೆ ಆಮದು
ಇಂಡೋನೇಷ್ಯಾ (Indonesia) ಖಾದ್ಯ ತೈಲಗಳ ರಫ್ತಿನ ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಭಾರತದ ತಾಳೆ ಎಣ್ಣೆ ಆಮದು ಏಪ್ರಿಲ್ ಗೆ ಹೋಲಿಸಿದ್ರೆ ಮೇನಲ್ಲಿ ಶೇ.10ರಷ್ಟು ಇಳಿಕೆ ಕಂಡಿತ್ತು. ಭಾರತ ಏಪ್ರಿಲ್ ನಲ್ಲಿ 5,72,508 ಟನ್ ಗಳಷ್ಟು ತಾಳೆ ಎಣ್ಣೆ ಆಮದು ಮಾಡಿಕೊಂಡಿದ್ದರೆ ಮೇನಲ್ಲಿ 5,14,022 ಟನ್ಸ್ ಅಷ್ಟೇ ಆಮದು ಮಾಡಿಕೊಂಡಿದೆ.

ಭಾರತದಿಂದ ಕುವೈತ್‌ಗೆ 192 ಟನ್‌ ಸಗಣಿ ರಫ್ತು!

ಭಾರತವು ಜಗತ್ತಿನ ಅತೀದೊಡ್ಡ ತಾಳೆ ಎಣ್ಣೆ ಆಮದು ರಾಷ್ಟ್ರವಾಗಿದ್ದು, ಪೂರೈಕೆಗೆ ಇಂಡೋನೇಷ್ಯಾ ಹಾಗೂ ಮಲೇಷ್ಯಾವನ್ನು ಅವಲಂಬಿಸಿದೆ. ಪ್ರತಿ ವರ್ಷ ಭಾರತ 13.5 ಮಿಲಿಯನ್ ಟನ್ಸ್ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ 8-8.5 ಮಿಲಿಯನ್ ಟನ್ಸ್ (ಸುಮಾರು ಶೇ.63)  ತಾಳೆ ಎಣ್ಣೆಯಾಗಿದೆ. ಈಗ ಶೇ.45ರಷ್ಟನ್ನು ಇಂಡೋನೇಷ್ಯಾ ಹಾಗೂ ಉಳಿದ ಭಾಗವನ್ನು ನೆರೆಯ ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತ ಪ್ರತಿ ವರ್ಷ ಸರಿಸುಮಾರು 4 ಮಿಲಿಯನ್ ಟನ್ ಗಳಷ್ಟು ತಾಳೆ ಎಣ್ಣೆಯನ್ನು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ.

Latest Videos
Follow Us:
Download App:
  • android
  • ios