ಹವಾಲಾ ಹಣ ಸ್ವೀಕರಿಸಿದ ಆರೋಪ;ಟೈಗರ್ ಶ್ರಾಫ್, ಸನ್ನಿ ಲಿಯೋನ್ ಸೇರಿ ಹಲವು ಬಾಲಿವುಡ್ ನಟ-ನಟಿಯರಿಗೆ ಇಡಿ ಶಾಕ್
ಇಂದು ಹಲವು ಬಾಲಿವುಡ್ ನಟ-ನಟಿಯರು ಹಾಗೂ ಗಾಯಕ-ಗಾಯಕಿಯರಿಗೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುವ ಮೂಲಕ ಶಾಕ್ ನೀಡಿದೆ. ಮಹಾದೇವ್ ಆನ್ ಲೈನ್ ಬೆಟ್ಟಿಂಗ್ ಅಪ್ಲಿಕೇಷನ್ ಮಾಲೀಕನ ಅದ್ಧೂರಿ ವಿವಾಹದಲ್ಲಿ ಭಾಗಿಯಾಗಲು ಹವಾಲಾ ಹಣ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಇವರನ್ನು ವಿಚಾರಣೆ ನಡೆಸುವ ನಿರೀಕ್ಷೆಯಿದೆ.
ಮುಂಬೈ (ಸೆ.15): ಮಹಾದೇವ್ ಆನ್ ಲೈನ್ ಬೆಟ್ಟಿಂಗ್ ಅಪ್ಲಿಕೇಷನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಟೈಗರ್ ಶ್ರಾಫ್, ಸನ್ನಿ ಲಿಯೋನ್ ಸೇರಿದಂತೆ ಬಾಲಿವುಡ್ ನ ಹಲವು ನಟ, ನಟಿಯರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಈ ಕುರಿತ ಖಚಿತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಮಹಾದೇವ್ ಆನ್ ಲೈನ್ ಬುಕ್ ಬೆಟ್ಟಿಂಗ್ ಆ್ಯಪ್ ಗೆ ಸಂಬಂಧಿಸಿ ಕೋಲ್ಕತ್ತ, ಭೋಪಾಲ್ ಹಾಗೂ ಮುಂಬೈನ 39 ಸ್ಥಳಗಳಲ್ಲಿ ಇಡಿ ಇಂದು (ಸೆ.15) ದಾಳಿ ನಡೆಸಿದ್ದು, ಸುಮಾರು 417 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ. ಈ ಸಂಸ್ಥೆ ಮಾಲೀಕ ಸೌರಭ್ ಚಂದ್ರಕರ್ ವಿವಾಹ ದುಬೈನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಅದ್ದೂರಿಯಾಗಿ ನಡೆದಿತ್ತು. 200 ಕೋಟಿ ರೂ. ವೆಚ್ಚದ ಈ ಐಷಾರಾಮಿ ಮದುವೆಯಲ್ಲಿ ಟೈಗರ್ ಶ್ರಾಫ್, ಸನ್ನಿ ಲಿಯೋನ್, ಕೃತಿ ಕರಬಂಧ, ನುಸ್ರತ್ ಬರೂಚಾ, ಭಾಗ್ಯಶ್ರೀ, ಕಮಿಡಿಯನ್ಗಳಾದ ಕೃಷ್ಣ ಅಭಿಷೇಕ್, ಭಾರತಿ, ಗಾಯಕರಾದ ನೇಹಾ ಕಕ್ಕಡ್, ಅತಿಫ್ ಅಸ್ಲಂ, ರಾಹತ್ ಫತೇ ಅಲಿ ಖಾನ್, ವಿಶಾಲ್ ದದ್ಲಾನಿ, ಅಲಿ ಅಸ್ಗರ್ ಸೇರಿದಂತೆ ಒಟ್ಟು 14 ಬಾಲಿವುಡ್ ನಟ-ನಟಿಯರು ಹಾಗೂ ಗಾಯಕ-ಗಾಯಕಿಯರು ಪಾಲ್ಗೊಂಡಿದ್ದರು. ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಸೆಲೆಬ್ರಿಟಿಗಳು ಹವಾಲಾ ಹಣ ಸ್ವೀಕರಿಸಿದ್ದಾರೆ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಇಡಿ ತಿಳಿಸಿದೆ.
ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗೆ 140 ಕೋಟಿ ಹವಾಲಾ ಹಣ
ಸೌರಭ್ ಚಂದ್ರಕರ್ ಮದುವೆ 2023 ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದಿದ್ದು, ಈ ಮದುವೆಗೆ ಒಟ್ಟು 200 ಕೋಟಿ ರೂ. ವ್ಯಯಿಸಲಾಗಿದೆ ಎಂದು ಇಡಿ ತಿಳಿಸಿದೆ. ಇದರಲ್ಲಿ 140 ಕೋಟಿ ರೂ. ಹಣವನ್ನು ಹವಾಲಾ ಮಾರ್ಗದ ಮೂಲಕ ಮುಂಬೈ ಮೂಲದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ನೀಡಲಾಗಿದೆ. ಈ ಸಂಸ್ಥೆಯೇ ಮದುವೆಯಲ್ಲಿ ಭಾಗವಹಿಸಿದ ಎಲ್ಲ ನಟ-ನಟಿಯರಿಗೆ ಸಂಭಾವನೆ ತಲುಪಿಸಿದೆ ಎಂದು ಇಡಿ ಮಾಹಿತಿ ನೀಡಿದೆ. ಹೀಗಾಗಿ ಟೈಗರ್ ಶ್ರಾಫ್, ಸನ್ನಿ ಲಿಯೋನ್, ಕೃತಿ ಕರಬಂಧ ಸೇರಿದಂತೆ ವಿವಾಹದಲ್ಲಿ ಭಾಗಿಯಾದ ಎಲ್ಲ ನಟ-ನಟಿಯರನ್ನು ಇಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಫ್ಲ್ಯಾಟ್ ಕೊಡಿಸುವ ನೆಪದಲ್ಲಿ ಹಿರಿ ಜೀವಗಳಿಗೆ ಮೋಸ, ಇಡಿ ವಿಚಾರಣೆಗೆ ಹಾಜರಾದ ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್
ಮದುವೆಗೆ ತೆರಳಲು ಪ್ರೈವೇಟ್ ಜೆಟ್
ಇನ್ನು ದುಬೈನಲ್ಲಿ ನಡೆದ ಈ ಮದುವೆಯಲ್ಲಿ ಪಾಲ್ಗೊಳ್ಳಲು ಅತಿಥಿಗಳಿಗೆ ನಾಗ್ಪುರದಿಂದ ಪ್ರೈವೇಟ್ ಜೆಟ್ ವ್ಯವಸ್ಥೆ ಮಾಡಲಾಗಿತ್ತು. ಇನ್ನು ದುಬೈನಲ್ಲಿ ಅತಿಥಿಗಳು ತಂಗಲು ಹೋಟೆಲ್ ಗಳಿಗೆ 40 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದಲ್ಲದೆ ಈ ಮದುವೆಗೆ ವ್ಯಯಿಸಿದ ಬಹುತೇಕ ಹಣವನ್ನು ಹವಾಲಾ ಮೂಲಕವೇ ನೀಡಲಾಗಿರೋದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಇಡಿ ತಿಳಿಸಿದೆ.
ಈ ಹವಾಲಾ ದಂಧೆಯನ್ನು ಯೋಗೇಶ್ ಪೊಪಟ್ ಎಂಬ ವ್ಯಕ್ತಿ ನಡೆಸುತ್ತಿರೋದು ಇಡಿ ವಿಚಾರಣೆ ವೇಳೆ ಪತ್ತೆಯಾಗಿದೆ. ಇನ್ನು ದಾಳಿ ಸಂದರ್ಭದಲ್ಲಿ ಗೋವಿಂದ್ ಕೆಡಿಯಾ ಎಂಬ ವ್ಯಕ್ತಿಯ ಮನೆಯಿಂದ 18 ಲಕ್ಷ ರೂ. ನಗದು ಹಾಗೂ 13 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ ಎಂದು ಇಡಿ ತಿಳಿಸಿದೆ.
ದಿಲ್ಲಿ ಅಬಕಾರಿ ಹಗರಣ: ಕೆಸಿಆರ್ ಪುತ್ರಿ ಕೆ.ಕವಿತಾಗೆ ಇ.ಡಿ.ಸಮನ್ಸ್
ಛತ್ತೀಸ್ ಗಢ ಮೂಲದ ರವಿ ಉಪ್ಪಲ್ ಹಾಗೂ ಸೌರಭ್ ಚಂದ್ರಕರ್ ಮಹಾದೇವ್ ಆನ್ ಲೈನ್ ಬೆಟ್ಟಿಂಗ್ ಅಪ್ಲಿಕೇಷನ್ ಮಾಲೀಕರಾಗಿದ್ದಾರೆ. ಈ ಸಂಸ್ಥೆ ದುಬೈನಿಂದಲೇ ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿ ಅನೇಕ ಪ್ರಾಂಚೈಸಿಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಈ ಪ್ರಾಂಚೈಸಿಗಳ ಜೊತೆಗೆ ರವಿ ಉಪ್ಪಲ್ ಹಾಗೂ ಸೌರಭ್ ಚಂದ್ರಕರ್ 70:30 ಅನುಪಾತದಲ್ಲಿ ಲಾಭಾಂಶ ಹಂಚಿಕೊಳ್ಳುತ್ತಿರೋದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಇಡಿ ತಿಳಿಸಿದೆ.