ನವದೆಹಲಿ(ಜ.30): ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಲು 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಾಗುವುದು ಎಂದು ಶುಕ್ರವಾರ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸಂಸತ್ತಿನಲ್ಲಿ ಮಂಡಿಸಲಾದ ಸಮೀಕ್ಷೆಯ ವರದಿ ಪ್ರಕಾರ, 15ರಿಂದ 59 ವರ್ಷದ ಒಳಗಿನ ವಯೋಮಾನದ ಕೆಲಸಗಾರರ ಪೈಕಿ ಶೇ.2.4ರಷ್ಟುಮಂದಿ ಮಾತ್ರ ಔಪಚಾರಿಕವಾಗಿ ವೃತ್ತಿಪರ ಅಥವಾ ತಾಂತ್ರಿಕ ತರಬೇತಿ ಪಡೆದುಕೊಂಡಿದ್ದಾರೆ. ಶೇ.8.9ರಷ್ಟುಅನೌಪರಚಾರಿಕವಾಗಿ ತರಬೇತಿ ಪಡೆದಿದ್ದಾರೆ.

ಹೀಗಾಗಿ ಕೌಶಲ್ಯ ಕೊರತೆಯನ್ನು ನೀಗಿಸುವ ಸಲುವಾಗಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್‌ ಯೋಜನೆ ಅಡಿಯಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಜಾರಿ ಮಾಡಬೇಕು. ಪುರುಷರಿಗೆ ಮುಖ್ಯವಾಗಿ ಎಲೆಕ್ಟ್ರಿಕಲ್‌, ಮೆಕೆನಿಕಲ್‌, ಅಟೊಮೊಬೈಲ್‌, ಉತ್ಪಾದನೆ ಹಾಗೂ ಉದ್ದಿಮೆ ಸಂಬಂಧಿತ ಕೌಶಲ್ಯಗಳನ್ನು ನೀಡಬೇಕು. ಅದೇ ರೀತಿ ಮಹಿಳೆಯರಿಗೆ ಜವಳಿ, ಕೈಮಗ್ಗ, ಕಚೇರಿ ಕೆಲಸ, ಆರೋಗ್ಯ ಸೇವೆ, ಮಕ್ಕಳ ಆರೈಕೆ ಮತ್ತಿತರ ಕೌಶಲ್ಯಗಳ ಬಗ್ಗೆ ತರಬೇತಿ ನೀಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ