ನವದೆಹಲಿ(ಜ.30): ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ 2020-21ರ ಆರ್ಥಿಕ ಸಮೀಕ್ಷೆಯಲ್ಲಿ ಥಾಲಿ ಸೂಚ್ಯಂಕ ಮತ್ತು ಥಾಲಿನಾಮಿಕ್ಸ್‌ ಎಂಬ ಪರಿಕಲ್ಪನೆಗಳ ಕುರಿತಾಗಿ ವಿಶೇಷ ವಿವರಣೆ ನೀಡಲಾಗಿದೆ. ಇದರಲ್ಲಿ ನಿಗದಿತ ಅವಧಿಯಲ್ಲಿ ದೇಶಾದ್ಯಂತ ವಿವಿಧ ಭಾಗಗಳಲ್ಲಿ ಮನೆಯೂಟದ ವೆಚ್ಚ ಎಷ್ಟಿತ್ತು ಎಂಬ ವಿವರಣೆ ನೀಡಲಾಗಿದೆ. ವರದಿ ಅನ್ವಯ 2020ರ ಜೂನ್‌ನಿಂದ ನವೆಂಬರ್‌ 2020ರ ವೇಳೆಗೆ ಊಟದ ಬೆಲೆ ಏರಿಕೆಯಾಗಿತ್ತಾದರೂ, ಡಿಸೆಂಬರ್‌ನಲ್ಲಿ ಹಲವು ಮೂಲಭೂತ ವಸ್ತುಗಳ ದರ ಇಳಿಕೆಯಾದ ಪರಿಣಾಮ ಆಹಾರದ ಬೆಲೆಯಲ್ಲಿ ಭಾರೀ ಇಳಿಕೆಯಾಯಿತು.

ಎಲ್ಲೆಲ್ಲಿ ಎಷ್ಟೆಷ್ಟು ದರ?:

ಗ್ರಾಮೀಣ ಪ್ರದೇಶಗಳ ಸಸ್ಯಾಹಾರ ಊಟದಲ್ಲಿ ಅಂಡಮಾನ್‌ ನಿಕೋಬಾರ್‌ನಲ್ಲಿ 38.7 ರು. ದರ ಇದ್ದು ಅತಿ ಗರಿಷ್ಠವಾದರೆ, ಉತ್ತರಪ್ರದೇಶದಲ್ಲಿ 23.1 ರು. ಇದ್ದು ಅತಿ ಕನಿಷ್ಠ ವೆಚ್ಚ ವೆನ್ನಿಸಿಕೊಂಡಿದೆ. ಇನ್ನು ಮಾಂಸಾಹಾರದ ವಿಷಯದಲ್ಲಿ 48.5 ರು.ನೊಂದಿಗೆ ಅರುಣಾಚಲ ಪ್ರದೇಶ ಅತಿ ಗರಿಷ್ಠ ಮತ್ತು 29.9 ರು.ನೊಂದಿಗೆ ಚಂಡೀಗಢ ಅತಿ ಕನಿಷ್ಠ ವೆಚ್ಚ ಹೊಂದಿತ್ತು.

ಇನ್ನು ನಗರ ಪ್ರದೇಶಗಳ ಪೈಕಿ 40 ರು.ನೊಂದಿಗೆ ಅಂಡಮಾನ್‌ ಮತ್ತು ನಿಕೋಬಾರ್‌ ಅತಿ ದುಬಾರಿ ಎನ್ನಿಸಿಕೊಂಡರೆ, 24 ರು.ನೊಂದಿಗೆ ಮಧ್ಯಪ್ರದೇಶ ಅಗ್ಗ ಎನ್ನಿಸಿಕೊಂಡಿದೆ. ಮಾಂಸಾಹಾರದ ವಿಷಯದಲ್ಲಿ 52.40 ರು.ನೊಂದಿಗೆ ಮಿಜೋರಾಂ ದುಬಾರಿ ಮತ್ತು 28 ರು.ನೊಂದಿಗೆ ಹರ್ಯಾಣ ಅಗ್ಗದ ಊಟ ಎನ್ನಿಸಿಕೊಂಡಿದೆ.