Asianet Suvarna News Asianet Suvarna News

Economic Survey 2023:ಮುಂದಿನ ದಿನಗಳಲ್ಲಿ ಧಾನ್ಯಗಳು, ಮಸಾಲ ಪದಾರ್ಥ, ಹಾಲಿನ ಬೆಲೆ ಏರಿಕೆ ನಿರೀಕ್ಷೆ

*ಇಂದು ಆರ್ಥಿಕ ಸಮೀಕ್ಷೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 
*ದೇಶದ 46 ನಗರಗಳಲ್ಲಿ ಮನೆ ಬೆಲೆಯಲ್ಲಿ ಏರಿಕೆಯಾಗಿದೆ ಎಂದ ಸಮೀಕ್ಷೆ
*ಮುಂದಿನ ದಿನಗಳಲ್ಲಿ ರೂಪಾಯಿ ಮೇಲೆ ಒತ್ತಡ ಹೆಚ್ಚುವ ನಿರೀಕ್ಷೆ 
 

Economic Survey 2023 Cereals spices milk costs to rise
Author
First Published Jan 31, 2023, 4:01 PM IST

ನವದೆಹಲಿ (ಜ.31): ಕೇಂದ್ರ ಬಜೆಟ್ ಅಧಿವೇಶನ ಇಂದು ಆರಂಭವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ದೇಶದ ಆರ್ಥಿಕ ಬೆಳವಣಿಗೆಯ  ವಿಮರ್ಶೆ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಇದು ಕಳೆದ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕತೆಯ ಪ್ರಗತಿ ಪತ್ರವೂ ಹೌದು. ಇನ್ನು ಮುಂದಿನ ವರ್ಷಕ್ಕೆ ಗುರಿಗಳನ್ನು ನಿಗದಿಪಡಿಸಲು ಇದು ಆಧಾರವೂ ಆಗಿದೆ. ಭಾರತದ ಆರ್ಥಿಕ ಸಮೀಕ್ಷೆಯ ಮಾಹಿತಿಗಳನ್ನು ಹಣಕಾಸು ಸಚಿವಾಲಯ ಪ್ರಕಟಿಸುತ್ತದೆ. ಹಾಗೆಯೇ ಇದು ಹಣಕಾಸು ತಜ್ಞರು, ನೀತಿ ನಿರೂಪಕರು ಹಾಗೂ ಷೇರುದಾರರಿಗೆ ನಿರ್ದಿಷ್ಟ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಕೇಂದ್ರ ಬಜೆಟ್ ಕುರಿತು ಊಹೆಗಳನ್ನು ಮಾಡಲು ನೆರವು ನೀಡಲಿದೆ.  ಈ ಬಾರಿಯ ಆರ್ಥಿಕ ಸಮೀಕ್ಷೆ ಧಾನ್ಯಗಳು, ಮಸಾಲ ಪದಾರ್ಥಗಳು ಹಾಗೂ ಹಾಲಿನ ದರದಲ್ಲಿ ಏರಿಕೆಯಾಗುವ ಮುನ್ಸೂಚನೆ ನೀಡಿದೆ. ಹಾಗೆಯೇ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೂಡ ದರ ಹೆಚ್ಚಳವಾಗುವ ಬಗ್ಗೆ ಭವಿಷ್ಯ ನುಡಿದಿದೆ. ಆದರೆ, ಈ ವರ್ಷಕ್ಕೆ ಹೋಲಿಸಿದ್ರೆ ಮುಂದಿನ ಹಣಕಾಸಿನ ಸಾಲಿನಲ್ಲಿ ಹಣದುಬ್ಬರ ಸವಾಲುಗಳು ಕಡಿಮೆ ಇರಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಧಾನ್ಯಗಳು, ಹಾಲಿನ ದರ ಏರಿಕೆ
ಆರ್ಥಿಕ ಸಮೀಕ್ಷೆಯು 2023ರಲ್ಲಿ ಧಾನ್ಯಗಳು, ಮಸಾಲ ಪದಾರ್ಥಗಳು ಹಾಗೂ  ಹಾಲಿನ ದರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಪೂರೈಕೆ ವ್ಯತ್ಯಯದಿಂದ ಮುಂದಿನ ದಿನಗಳಲ್ಲಿ ಧಾನ್ಯಗಳು ಹಾಗೂ ಮಸಾಲ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಬಹುದು ಎಂದು ಆರ್ ಬಿಐ ಭವಿಷ್ಯ ನುಡಿದಿದೆ. ಹಸುಗಳಿಗೆ ನೀಡುವ ಪೌಷ್ಟಿಕ ಆಹಾರದ ಬೆಲೆ ಏರಿಕೆಯ ಪರಿಣಾಮ ಹಾಲಿನ ದರ ಕೂಡ ಹೆಚ್ಚಳವಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಹೇಳೋದಾದ್ರೆ ಜಗತ್ತಿನಾದ್ಯಂತ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದು ಆಹಾರ ಬೆಲೆಗಳ ಹೆಚ್ಚಳದ ಅಪಾಯ ಹೆಚ್ಚಿಸಿದೆ ಎಂದು ಆರ್ಥಿಕ ಸಮೀಕ್ಷೆ 2023 ತಿಳಿಸಿದೆ. 

Economic Survey: 2022-23ರಲ್ಲಿ ದೇಶದ ಜಿಡಿಪಿ ಶೇ. 7ರಷ್ಟು ಬೆಳವಣಿಗೆ ಎಂದ ಆರ್ಥಿಕ ಸಮೀಕ್ಷೆ!

46 ನಗರಗಳಲ್ಲಿ ಮನೆ ಬೆಲೆ ಹೆಚ್ಚಳ
ಕೋವಿಡ್ -19 ದೇಶದ ರಿಯಲ್ ಎಸ್ಟೇಟ್ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ರಾಷ್ಟ್ರೀಯ ಗೃಹ ಬ್ಯಾಂಕ್ ನಿಯಂತ್ರಿಸುವ ಗೃಹ ಬೆಲೆ ಸೂಚ್ಯಂಕದ (HPI) ಅನ್ವಯ 50 ನಗರಗಳ ಪೈಕಿ  46 ನಗರಗಳಲ್ಲಿ ಬೆಲೆ ಹೆಚ್ಚಳ ಕಂಡುಬಂದಿದೆ. ಇನ್ನು ನಾಲ್ಕು ನಗರಗಳಲ್ಲಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಆರ್ಥಿಕ ಸಮೀಕ್ಷೆ 2023ರ ಪ್ರಕಾರ ಎಲ್ಲ ಪ್ರಮುಖ ಎಂಟು ನಗರಗಳಲ್ಲಿ ಗೃಹ ಬೆಲೆ ಸೂಚ್ಯಂಕದಲ್ಲಿ ವಾರ್ಷಿಕ ಏರಿಕೆ ಕಂಡುಬಂದಿದೆ. 

ರೂಪಾಯಿ ಮೇಲೆ ಒತ್ತಡ
ದೇಶದ ಚಾಲ್ತಿ ಖಾತೆ ಬ್ಯಾಲೆನ್ಸ್ ಮೇಲೆ ಅನೇಕ ಅಂಶಗಳು ಪರಿಣಾಮ ಬೀರಲಿವೆ. ವಸ್ತುಗಳ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿವೆ. ಸರಕುಗಳ ಬೆಲೆ ಹೆಚ್ಚಳದ ನಡುವೆ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ಕಾರಣ ಭಾರತ ಬೇರೆ ರಾಷ್ಟ್ರಗಳಿಂದ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು  ಅಗತ್ಯ. ಇದ್ರಿಂದ ಆಮದು ಬಿಲ್ ಹೆಚ್ಚಲಿದೆ. ಇದು ಚಾಲ್ತಿ ಖಾತೆ ಬ್ಯಾಲೆನ್ಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಚಾಲ್ತಿ ಖಾತೆ ಕೊರತೆಯಿಂದ ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆಯಿದೆ. ಹಾಗೆಯೇ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ಬ್ಯಾಂಕ್ ಬಡ್ಡಿದರವನ್ನು ಮತ್ತಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದ್ದು, ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. 

Budget 2023: ಕೇಂದ್ರ ಬಜೆಟ್‌ನ ಈ ವಿವರಗಳ ಬಗ್ಗೆ ನಿಮಗೆಷ್ಟು ಗೊತ್ತು?

ವೇಗವಾಗಿ ಪ್ರಗತಿ ಕಂಡ ಭಾರತದ ಆರ್ಥಿಕತೆ 
ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಶೇ. 6.8 ಹಣದುಬ್ಬರವಿದ್ರೂ ಹೂಡಿಕೆಯನ್ನು ದುರ್ಬಲಗೊಳಿಸಲಿಲ್ಲ ಎಂದು ಸಮೀಕ್ಷೆ ಹೇಳಿದೆ. ಹಾಗೆಯೇ ಭಾರತದ ಆರ್ಥಿಕತೆ ಅನೇಕ ಸವಾಲುಗಳ ನಡುವೆಯೂ ಸಮರ್ಥವಾಗಿ ಎದ್ದು ನಿಂತಿದೆ. ಕೋವಿಡ್ -19  ಕಾರಣದಿಂದ ಉಂಟಾದ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ಆರ್ಥಿಕತೆ ಬಹುಬೇಗ ಚೇತರಿಕೆ ಕಂಡಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. 
 

Follow Us:
Download App:
  • android
  • ios