ನ್ಯೂಯಾರ್ಕ್ [ಆ.16] : ಭಾರತದಲ್ಲಿ ಆಟೋಮೊಬೈಲ್‌, ರಿಯಲ್‌ ಎಸ್ಟೇಟ್‌, ಬ್ಯಾಂಕಿಂಗ್‌ ವಲಯದ ಕುಸಿತವು ಆರ್ಥಿಕ ಹಿಂಜರಿತದ ಲಕ್ಷಣಗಳು ಎಂಬ ವಾದ ಮಂಡನೆಯಾಗುತ್ತಿರುವಾಗಲೇ, ಅತ್ತ ವಿಶ್ವದ ಹಲವು ದೇಶಗಳಿಗೂ ಆರ್ಥಿಕ ಹಿಂಜರಿತ ಭೀತಿ ಬಹುವಾಗಿ ಅಪ್ಪಳಿಸಿದೆ. ಇದರ ಪರಿಣಾಮ ಎಂಬಂತೆ ಅಮೆರಿಕ ಸೇರಿದಂತೆ ವಿಶ್ವದ ಹಲವು ಷೇರುಪೇಟೆ ಸೂಚ್ಯಂಕಗಳು ಭಾರೀ ಕುಸಿತ ಕಂಡಿವೆ. ಇದು ಇಡೀ ವಿಶ್ವ ಮತ್ತೊಂದು ಅಪಾಯದತ್ತ ಹೆಜ್ಜೆ ಹಾಕುತ್ತಿದೆಯೇ ಎಂಬ ಆತಂಕವನ್ನು ಹುಟ್ಟುಹಾಕಿದೆ.

ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ಷೇರುಪೇಟೆಗೆ ರಜೆ ಇದ್ದ ಕಾರಣ, ಜಾಗತಿಕ ಷೇರುಪೇಟೆಯ ಹೊಡೆತದಿಂದ ಬಚಾವ್‌ ಆಗಿದೆ. ಒಂದು ವೇಳೆ ಶುಕ್ರವಾರವೂ ವಿಶ್ವದ ಇತರೆ ಷೇರುಪೇಟೆಯಲ್ಲಿ ಇದೇ ರೀತಿಯ ಇಳಿಕೆ ಮುಂದುವರೆದಿದ್ದೇ ಆದಲ್ಲಿ, ಭಾರತದ ಷೇರುಪೇಟೆಯಲ್ಲೂ ‘ರಕ್ತಪಾತ’ ಖಚಿತ ಎನ್ನಲಾಗಿದೆ. ಹೀಗಾಗಿ ಶುಕ್ರವಾರದ ಷೇರುಪೇಟೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

2020ರ ವೇಳೆಗೆ ಅಮೆರಿಕ, ಚೀನಾ ಸೇರಿದಂತೆ ಕೆಲವು ದೇಶಗಳನ್ನು ಆರ್ಥಿಕ ಹಿಂಜರಿತ ಕಾಡಬಹುದು ಎಂಬ ಭೀತಿ ಈಗಾಗಲೇ ಎಲ್ಲೆಡೆ ಹರಡಿದೆ. ಅದರೆ ಗುರುವಾರ ಬಿಡುಗಡೆಯಾದ ಚೀನಾ ಮತ್ತು ಜರ್ಮನಿ ದೇಶಗಳ ಕೈಗಾರಿಕಾ ಉತ್ಪಾದಕತೆ ಸೂಚ್ಯಂಕಗಳು ಜಾಗತಿಕ ಷೇರು ಮಾರುಕಟ್ಟೆಗೆ ಭಾರೀ ಹೊಡೆತ ನೀಡಿದೆ. ಚೀನಾದ ಕೈಗಾರಿಕಾ ಉತ್ಪಾದಕತೆ 17 ವರ್ಷಗಳ ಕನಿಷ್ಠಕ್ಕೆ ತಲುಪಿದ್ದರೆ, ಜರ್ಮನಿಯ ಕೈಗಾರಿಕಾ ಬೆಳವಣಿಗೆ ಸತತ 2ನೇ ತ್ರೈಮಾಸಿಕದಲ್ಲೂ ಪತನ ಕಂಡಿದೆ. ಮತ್ತೊಂದೆಡೆ ಅಮೆರಿಕದಲ್ಲಿ ಜುಲೈ ತಿಂಗಳ ಉತ್ಪಾದನಾ ಸೂಚ್ಯಂಕ, ಜೂನ್‌ಗೆ ಹೋಲಿಸಿದರೆ ಶೇ.0.4ರಷ್ಟುಕುಸಿತ ಕಂಡಿದೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಒಟ್ಟಾರೆ ಶೇ.15ರಷ್ಟುಕುಸಿತ ಕಂಡಂತೆ ಆಗಿದೆ.

ಇದೆಲ್ಲದರ ನಡುವೆ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಚೀನಾದ ಮೇಲೆ ಹೇರಲು ಉದ್ದೇಶಿಸಿದ್ದ ಹೆಚ್ಚುವರಿ ಸುಂಕವನ್ನು ಮುಂದೂಡಲು ಅಧ್ಯಕ್ಷ ಟ್ರಂಪ್‌ ಚಿಂತಿಸುತ್ತಿದ್ದಾರೆ ಎಂಬ ವರದಿಗಳು, ಷೇರುಪೇಟೆಯಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯನ್ನು ಇನ್ನಷ್ಟುಹೆಚ್ಚಿಸಿವೆ. ಪರಿಣಾಮ ಬುಧವಾರ ಅಮೆರಿಕದ ಡೌ ಜೋನ್ಸ್‌ ಷೇರುಪೇಟೆ 800 ಅಂಕಗಳಷ್ಟುಕುಸಿದು, 24,479 ಅಂಕಗಳನ್ನು ತಲುಪಿದೆ. ಇದು 2019ರಲ್ಲಿ ಡೌ ಜೋನ್ಸ್‌ನ ಗರಿಷ್ಠ ಕುಸಿತವಾಗಿದೆ. ಮತ್ತೊಂದೆಡೆ ಯುರೋಪಿಯನ್‌, ಜಪಾನ್‌, ಆಸ್ಟೇಲಿಯಾ, ಜರ್ಮನಿ ಸೇರಿದಂತೆ ಬಹುತೇಕ ದೇಶಗಳ ಷೇರುಪೇಟೆ ಕೂಡಾ ಭಾರೀ ಇಳಿಕೆ ಕಂಡಿವೆ.

ಈ ಹಿಂದೆ 1975, 1982, 1991, 1999ರಲ್ಲಿ ಜಾಗತಿಕ ಆರ್ಥಿಕ ಹಿಂಜರಿಕೆ ಕಾಣಿಸಿಕೊಂಡಿತ್ತು. 1991ರಲ್ಲಿ ಆರ್ಥಿಕ ಹಿಂಜರಿಕೆಗೆ ತುತ್ತಾಗಿ ಭಾರೀ ಸಮಸ್ಯೆ ಎದುರಿಸಿದ ಸಮಯದಲ್ಲೇ ಅಂದಿನ ಪ್ರಧಾನಿ ನರಸಿಂಹರಾವ್‌ ಅವರು, ಮನಮೋಹನ್‌ಸಿಂಗ್‌ ಅವರನ್ನು ಹಣಕಾಸು ಸಚಿವರಾಗಿ ನೇಮಿಸಿದ್ದರು. ರಾವ್‌ ಮತ್ತು ಡಾ.ಸಿಂಗ್‌ ಜೋಡಿ ದೇಶವನ್ನು ಉದಾರೀಕರಣಕ್ಕೆ ಮುಕ್ತ ಮಾಡಿತ್ತು.

ಈ ಹಿಂದೆ ಕಾಡಿದ್ದ ಜಾಗತಿಕ ಆರ್ಥಿಕ ಹಿಂಜರಿಕೆಗಳು ಹಲವು ದೇಶಗಳಲ್ಲಿ ಸರ್ಕಾರಗಳನ್ನೇ ಉರುಳಿಸಿದ, ಕೋಟ್ಯಂತರ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಿದ, ಸಾವಿರಾರು ಜನರ ಸಾವಿಗೆ ಕಾರಣವಾದ ಕರಾಳ ಇತಿಹಾಸವನ್ನು ಹೊಂದಿವೆ.