*ಆಧಾರ್-ಪ್ಯಾನ್ ಲಿಂಕ್ ಮಾಡಲು ಜೂ.30ರ ತನಕ 500ರೂ. ದಂಡ*ಜುಲೈ1 ರಿಂದ ಆಧಾರ್-ಪ್ಯಾನ್ ಲಿಂಕ್ ಗೆ ದುಪ್ಪಟ್ಟು ದಂಡ*ಪ್ಯಾನ್-ಆಧಾರ್ ಜೋಡಣೆಗೆ 2023ರ ಮಾರ್ಚ್ 31 ಅಂತಿಮ ಗಡುವು
ನವದೆಹಲಿ (ಜೂ.3): ನೀವು ಇನ್ನೂ ಆಧಾರ್ ನೊಂದಿಗೆ (Aadhar) ಪ್ಯಾನ್ ಕಾರ್ಡ್ (PAN Card) ಲಿಂಕ್ (Link) ಮಾಡಿಲ್ವ? ಹಾಗಾದ್ರೆ ತಪ್ಪದೇ ಜೂನ್ 30ರೊಳಗೆ ಈ ಕೆಲಸವನ್ನು ಮಾಡಿ ಮುಗಿಸಿ. ಏಕೆಂದ್ರೆ ಜುಲೈ 1ರ ಬಳಿಕ 500ರೂ. ಅಲ್ಲ 1000ರೂ. ದಂಡ (Penalty) ಪಾವತಿಸಬೇಕಾಗುತ್ತದೆ.
ಕೇಂದ್ರ ಸರ್ಕಾರ ಪ್ಯಾನ್ -ಆಧಾರ್ ಜೋಡಣೆ ಅಂತಿಮ ಗಡುವನ್ನು (Deadline) 2023ರ ಮಾರ್ಚ್ 31ರ ತನಕ ವಿಸ್ತರಿಸಿದೆ. ಈ ಹಿಂದೆ ಈ ವರ್ಷದ ಮಾರ್ಚ್ 31ರ ತನಕ ಗಡುವು ನೀಡಲಾಗಿತ್ತು. ಆದ್ರೆ ಈ ವರ್ಷದ ಏಪ್ರಿಲ್ 1ರಿಂದ ತೆರಿಗೆದಾರರು (Taxpayers) ಆಧಾರ್-ಪ್ಯಾನ್ ಜೋಡಣೆಗೆ ದಂಡ ಪಾವತಿಸಬೇಕಿದೆ. ಈ ಬಗ್ಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಹೊರಡಿಸಿರುವ ಸುತ್ತೋಲೆಯಲ್ಲಿ 2022 ರ ಏಪ್ರಿಲ್ 1ರಿಂದ ಜೂನ್ 30ರ ತನಕ ತೆರಿಗೆದಾರರು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಿದ್ರೆ 500ರೂ. ವಿಳಂಬ ಶುಲ್ಕ (late fee) ಪಾವತಿಸಬೇಕು. ಇನ್ನು ಜುಲೈ 1ರ ಬಳಿಕ ಆಧಾರ್-ಪ್ಯಾನ್ ಜೋಡಣೆಗೆ 1000 ರೂ. ದಂಡ ಪಾವತಿಸಬೇಕು ಎಂದು ತಿಳಿಸಿದೆ.
2023ರ ಮಾರ್ಚ್ 31 ಅಂತಿಮ ಗಡುವು
2023ರ ಮಾರ್ಚ್ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ರೆ 2023ರ ಏಪ್ರಿಲ್ 1ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ (Bank Account) ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ (Mutual Fund) ಹೂಡಿಕೆ (Invest) ಮಾಡಲು ಹಾಗೂ ಡಿಮ್ಯಾಟ್ ಖಾತೆ (Demat account) ತೆರೆಯಲು ಸಾಧ್ಯವಾಗೋದಿಲ್ಲ. ಇನ್ನು 50 ಸಾವಿರ ರೂ.ಗಿಂತ ಅಧಿಕ ಮೊತ್ತದ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಹೀಗಾಗಿ ಪ್ಯಾನ್ ನಿಷ್ಕ್ರಿಯಗೊಂಡ್ರೆ ಬ್ಯಾಂಕಿಂಗ್ ಸೇವೆಗಳನ್ನು (Banking Services) ಪಡೆಯಲು ತೊಂದರೆಯಾಗುತ್ತದೆ.
ಆಧಾರ್ ಜೊತೆ ಲಿಂಕ್ ಮಾಡದಿದ್ರೆ ಪ್ಯಾನ್ ನಿಷ್ಕ್ರಿಯ
2020ರಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಎಲ್ಲ ಪ್ಯಾನ್ ಕಾರ್ಡ್ ಗಳನ್ನು ಆಧಾರ್ ಜೊತೆಗೆ ಲಿಂಕ್ ಮಾಡೋದನ್ನು ಕಡ್ಡಾಯಗೊಳಿಸಿತ್ತು. ಈ ಕೆಲಸಕ್ಕೆ 2021ರ ಜೂನ್ 30ರ ಗಡುವು ನೀಡಿತ್ತು. ಆ ಬಳಿಕ ಈ ಗಡುವನ್ನು 2021ರ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ಮತ್ತೆ 2022ರ ಮಾರ್ಚ್ 31ಕ್ಕೆ ನಿಗದಿಪಡಿಸಲಾಗಿತ್ತು.
ಆದಾಯ ತೆರಿಗೆ ಕಾನೂನಿನ (Income Tax Law) ಪ್ರಕಾರ 2017ರ ಜುಲೈ 1ರಿಂದ ಪ್ರತಿ ವ್ಯಕ್ತಿ ಪ್ಯಾನ್ ಕಾರ್ಡ್ ಹೊಂದಿರೋದು ಕಡ್ಡಾಯ. ಅದೇರೀತಿ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ (Link) ಮಾಡೋದನ್ನು ಕೂಡ ಕಡ್ಡಾಯ ಮಾಡಲಾಗಿದೆ. ನಿಗದಿತ ದಿನಾಂಕದೊಳಗೆ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸೋದಾಗಿಯೂ ಆದಾಯ ತೆರಿಗೆ ಇಲಾಖೆ (Income tax department) ಈ ಹಿಂದೆಯೇ ಮಾಹಿತಿ ನೀಡಿತ್ತು.
ಮೇನಲ್ಲಿ ಭರ್ಜರಿ 1.41 ಲಕ್ಷ ಕೋಟಿ ರು. ಜಿಎಸ್‌ಟಿ ಆದಾಯ!
ಪ್ಯಾನ್-ಆಧಾರ್ ಲಿಂಕ್ ಮಾಡೋದು ಹೇಗೆ?
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ ಅನೇಕ ವಿಧಾನಗಳನ್ನು ಒದಗಿಸಿದೆ. ಇದರಲ್ಲಿ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್, ಎಸ್ ಎಂಎಸ್, ಎನ್ಎಸ್ ಡಿಎಲ್ (NSDL) ಅಥವಾ ಯುಟಿಐಐಎಲ್ (UTIIL) ಕಚೇರಿಗಳಿಗೆ ಭೇಟಿ ನೀಡೋ ಮೂಲಕ ಪ್ಯಾನ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.
