Asianet Suvarna News Asianet Suvarna News

ನಾಳೆ ಆರ್ಥಿಕ ಸಮೀಕ್ಷೆ ಮಂಡನೆ;ಬಜೆಟ್ ಗೂ ಇದಕ್ಕೂ ಏನ್ ಸಂಬಂಧ?

ನಾಳೆ ಕೇಂದ್ರ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದ ಮೊದಲ ದಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಹಾಗಾದ್ರೆ ಆರ್ಥಿಕ ಸಮೀಕ್ಷೆ ಅಂದ್ರೇನು? ಬಜೆಟ್ ಗೂ ಮುನ್ನ ಅದನ್ನೇಕೆ ಮಂಡಿಸುತ್ತಾರೆ?

DNA Explainer What is Economic Survey of India Know its role in Budget 2023 when it will be presented
Author
First Published Jan 30, 2023, 6:27 PM IST

Business Desk:2023-2024ನೇ ಹಣಕಾಸು ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ನಾಳೆಯೊಂದೇ ದಿನ ಬಾಕಿ ಉಳಿದಿದೆ. ಬಜೆಟ್ ಅಧಿವೇಶನಕ್ಕೆ ನಾಳೆ (ಜ.31) ಚಾಲನೆ ಸಿಗಲಿದೆ. ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಬಳಿಕ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಪ್ರತಿ ಬಾರಿ ಬಜೆಟ್ ಮಂಡನೆಗೂ ಮುನ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಇದನ್ನು ಹಣಕಾಸು ಸಚಿವಾಲಯ ಸಿದ್ಧಪಡಿಸುತ್ತದೆ. ಆದರೆ, ಆರ್ಥಿಕ ಸಮೀಕ್ಷೆ ಹಿಂದಿನ ವರ್ಷದಾಗಿರುತ್ತದೆ. ಅಂದರೆ ನಾಳೆ 2021-22ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಆರ್ಥಿಕ ಸಮೀಕ್ಷೆಯನ್ನು ದೇಶದ ಆರ್ಥಿಕ ಬೆಳವಣಿಗೆಯ  ವಿಮರ್ಶೆ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಇದು ಕಳೆದ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕತೆಯ ಪ್ರಗತಿ ಪತ್ರವೂ ಹೌದು. ಇನ್ನು ಮುಂದಿನ ವರ್ಷಕ್ಕೆ ಗುರಿಗಳನ್ನು ನಿಗದಿಪಡಿಸಲು ಇದು ಆಧಾರವೂ ಆಗಿದೆ. ಭಾರತದ ಆರ್ಥಿಕ ಸಮೀಕ್ಷೆಯ ಮಾಹಿತಿಗಳನ್ನು ಹಣಕಾಸು ಸಚಿವಾಲಯ ಪ್ರಕಟಿಸುತ್ತದೆ. ಹಾಗೆಯೇ ಇದು ಹಣಕಾಸು ತಜ್ಞರು, ನೀತಿ ನಿರೂಪಕರು ಹಾಗೂ ಷೇರುದಾರರಿಗೆ ನಿರ್ದಿಷ್ಟ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಕೇಂದ್ರ ಬಜೆಟ್ ಕುರಿತು ಊಹೆಗಳನ್ನು ಮಾಡಲು ನೆರವು ನೀಡಲಿದೆ. 

ಏನಿದು ಭಾರತದ ಆರ್ಥಿಕ ಸಮೀಕ್ಷೆ?
ಭಾರತದ ಆರ್ಥಿಕ ಸಮೀಕ್ಷೆಯನ್ನು (Economic Survey) ಹಣಕಾಸು ಸಚಿವಾಲಯ ಸಿದ್ಧಪಡಿಸಿ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಕೇಂದ್ರ ಬಜೆಟ್ ಮಂಡನೆಯ ಹಿಂದಿನ ದಿನ ಮಂಡಿಸಲಾಗುತ್ತದೆ. ಇದು ದೇಶದ ಕಳೆದ ಸಾಲಿನ ಆರ್ಥಿಕ ಪರಿಸ್ಥಿತಿಯ ಚಿತ್ರಣ ನೀಡುತ್ತದೆ. ಭಾರತದ ಆರ್ಥಿಕ ಸಮೀಕ್ಷೆಯನ್ನು ಭಾರತದ ಮುಖ್ಯ ಆರ್ಥಿಕ ಸಲಹೆಗಾರರ ಮುಂದಾಳತ್ವದಲ್ಲಿ ಸಿದ್ಧಪಡಿಸಲಾಗುತ್ತದೆ. ಪ್ರಸ್ತುತ ಡಾ.ವಿ. ಅನಂತ ನಾಗೇಶ್ವರನ್ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ. ಭಾರತದ ಮೊದಲ ಆರ್ಥಿಕ ಸಮೀಕ್ಷೆಯನ್ನು1950-51ನೇ ಸಾಲಿಗೆ ಸಂಬಂಧಿಸಿ ಮಂಡಿಸಲಾಗಿತ್ತು. ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಆರ್ಥಿಕ ಸಮೀಕ್ಷೆಯನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

Budget 2023:ಕೇಂದ್ರ ಬಜೆಟ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ಬಜೆಟ್ ಕುರಿತ ಆಸಕ್ತಿಕರ ಸಂಗತಿಗಳು

ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಆರ್ಥಿಕ ಸಮೀಕ್ಷೆ ಅನೇಕ ಪ್ರಮುಖ ಸಂಗತಿಗಳನ್ನು ಒಳಗೊಂಡಿದೆ. ಇದರಲ್ಲಿ ಹಣಕಾಸಿನ ಅಭಿವೃದ್ಧಿ, ಹಣಕಾಸಿನ ನಿರ್ವಹಣೆ ಹಾಗೂ ಇತರ ವಲಯಗಳಿಗೆ ಸಂಬಂಧಿಸಿದ ಮಾಹಿತಿಗಳು ಇರುತ್ತವೆ. ಕಳೆದ ಆರ್ಥಿಕ ಸಾಲಿನ ಪ್ರಮುಖ ಅಭಿವೃದ್ಧಿ ಯೊಜನೆಗಳು, ಸರ್ಕಾರದ ಮುಖ್ಯ ನೀತಿಗಳು ಮುಂತಾದ ಮಾಹಿತಿಗಳು ಆರ್ಥಿಕ ಸಮೀಕ್ಷೆಯಲ್ಲಿರುತ್ತದೆ. ಇನ್ನು ಕೇಂದ್ರ ಸರ್ಕಾರದ ಆರ್ಥಿಕ ನೀತಿಯಲ್ಲಿ ಏನಾದರೂ ಬದಲಾವಣೆ ಮಾಡಬೇಕಿದ್ರೆ ಅದನ್ನು ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗುತ್ತದೆ. ಹೀಗಾಗಿ ಮುಖ್ಯವಾದ ಆರ್ಥಿಕ ನೀತಿ ಬದಲಾವಣೆಗಳಿಗೆ ಈ ಸಮೀಕ್ಷೆಯೇ ಆಧಾರವಾಗಿರುತ್ತದೆ. ಎಲ್ಪಿಜಿ ಸಬ್ಸಿಡಿ ಸೇರಿದಂತೆ ಸರ್ಕಾರದ ಸಬ್ಸಿಡಿ ಹಣ ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ (Bank accounts) ಡೆಪಾಸಿಟ್ ಆಗಬೇಕೆಂದು ಸರ್ಕಾರಕ್ಕೆ ಆರ್ಥಿಕ ಸಮೀಕ್ಷೆಯೇ ಈ ಹಿಂದೆ ಶಿಫಾರಸ್ಸು ಮಾಡಿತ್ತು. ಆದರೆ, ಆರ್ಥಿಕ ಸಮೀಕ್ಷೆಯಲ್ಲಿ ಮಾಡಿರುವ ಎಲ್ಲ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದೇನಿಲ್ಲ.

ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್‌?

ಈ ಹಿಂದೆ ಆರ್ಥಿಕ ಸಮೀಕ್ಷೆ (Economic Survey) ಒಂದೇ ಪುಸ್ತಕದಲ್ಲಿ ಎರಡು ಭಾಗಗಳಲ್ಲಿ ಇರುತ್ತಿತ್ತು. ಅದರ ಮೊದಲ ಭಾಗದಲ್ಲಿ ವಿಶ್ಲೇಷಣೆ ಇದ್ರೆ, ಎರಡನೇ ಭಾಗದಲ್ಲಿ ಅಂಕಿಅಂಶಗಳಿರುತ್ತವೆ. ಆದರೆ, ಇತ್ತೀಚೆಗೆ ಆರ್ಥಿಕ ಸಮೀಕ್ಷೆಯನ್ನು ಏಳು ತಿಂಗಳ ಅಂತರದಲ್ಲಿ ಎರಡು ಬಾರಿ ಮಂಡಿಸಲಾಗುತ್ತಿದೆ. ಮೊದಲ ಭಾಗ ಜನವರಿ ಕೊನೆಯ ವಾರದಲ್ಲಿ ಮಂಡನೆ ಮಾಡಲಾಗುತ್ತದೆ. ಇನ್ನು ಎರಡನೇ ಭಾಗವನ್ನು ಜುಲೈ-ಆಗಸ್ಟ್ ನಲ್ಲಿ ಮಂಡಿಸಲಾಗುತ್ತದೆ. ಒಟ್ಟಾರೆ ಆರ್ಥಿಕ ಸಮೀಕ್ಷೆ ಭಾರತದ ಆರ್ಥಿಕತೆ ಭವಿಷ್ಯದಲ್ಲಿ ಎಷ್ಟು ಸಾಮರ್ಥ್ಯವನ್ನು ಹೊಂದಿದೆ ಹಾಗೂ ಹೇಗೆ ಅನೇಕ ನೀತಿಗಳು ಪ್ರಯೋಜನಕಾರಿಯಾಗಿರಲಿವೆ ಎಂಬುದನ್ನು ತಿಳಿಸುತ್ತದೆ. 
 

Follow Us:
Download App:
  • android
  • ios