ವಿಜಯಪುರ ಜಿಲ್ಲೆಗೆ ಹಳೆಯ ಬಾಟಲಿಗೆ ಹೊಸ ಲೇಬಲ್‌ನಂತಾದ ಬಜೆಟ್
ಮತ್ತೆ ಕೈಗೂಡದ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಕನಸು, ವಿಶ್ವ ಪರಂಪರೆ ಪಟ್ಟಿಗೆ ಗೋಳಗುಮ್ಮಟ ಮತ್ತೆ ನನೆಗುದಿಗೆ.
ರುದ್ರಪ್ಪ ಆಸಂಗಿ
ವಿಜಯಪುರ(ಫೆ.18): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಂಡಿಸಿದ ಪ್ರಸಕ್ತ ಸಾಲಿನ ಆಯವ್ಯಯ ಪತ್ರದಲ್ಲಿ ಜಿಲ್ಲೆಗೆ ತಕ್ಕ ಮಟ್ಟಿನ ಕೊಡುಗೆ ಲಭಿಸಿದ್ದು, ಜಿಲ್ಲೆಯ ಜನರಿಗೆ ಸಂಪೂರ್ಣ ತೃಪ್ತಿ ನೀಡದಿದ್ದರೂ ತುಸು ಸಮಾಧಾನ ತಂದಿದೆ. ಆದರೆ ಈ ಬಜೆಟ್‌ನಲ್ಲಿ ಬಹಳಷ್ಟು ಯೋಜನೆಗಳು ಪುನರಾವರ್ತನೆಗೊಂಡಿವೆ. ಹೀಗಾಗಿ ಈ ಸಲದ ಬಜೆಟ್ ಜಿಲ್ಲೆಯ ಜನರ ಪಾಲಿಗೆ ಹಳೆಯ ಬಾಟಲಿಗೆ ಹೊಸ ಲೇಬಲ್‌ದಂತಾಗಿದೆ.
ಹೌದು, ಯುಕೆಪಿ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ಕಳೆದ ಬಾರಿಯ ಬಜೆಟ್‌ನಲ್ಲಿಯೇ . 5,000 ಕೋಟಿ ಘೋಷಣೆ ಮಾಡಲಾಗಿತ್ತು. ಕಳೆದ ಬಜೆಟ್‌ನಲ್ಲಿ ವಿಜಯಪುರಕ್ಕೆ ಸ್ವಯಂಚಾಲಿತ ಚಾಲನಾ ಸುರಕ್ಷತಾ ಪಥ ರಸ್ತೆ ಘೋಷಣೆಯಾಗಿತ್ತು. ಈ ಬಾರಿಯೂ ಬಜೆಟ್‌ನಲ್ಲಿ ಮತ್ತೆ ಇದೇ ಘೋಷಣೆ ಮಾಡಲಾಗಿದೆ. ವಿಜಯಪುರದಲ್ಲಿ ಮೆಗಾ ಜವಳಿ ಪಾರ್ಕ್ ಕಳೆದ ಬಜೆಟ್‌ನಲ್ಲಿಯೇ ಘೋಷಣೆಯಾಗಿತ್ತು. ಈ ಬಾರಿಯೂ ಮತ್ತೆ ನೂತನ ಮೆಗಾ ಜವಳಿ ಪಾರ್ಕ್ ಘೋಷಣೆ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ವಿಜಯಪುರದಲ್ಲಿ ಹೈಟೆಕ್ ಜೈಲು ಘೋಷಣೆಯಾಗಿತ್ತು. ಆದರೆ ಈ ಬಾರಿ ಮತ್ತೆ ಕಾರಾಗೃಹ ಅಭಿವೃದ್ಧಿಗೆ ಘೋಷಣೆ ಮಾಡಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಹಳೆ ಬಾಟಲಿಗೆ ಹೊಸ ಲೇಬಲ್‌ನಂತಾಗಿದೆ.
Karnataka Budget 2023: ಬೆಳಗಾವಿ ಜಿಲ್ಲೆಗೆ ಬೆರಳೆಣಿಕೆ ಯೋಜನೆ: ಜನರ ನಿರೀಕ್ಷೆ ಹುಸಿ!
ಕಳೆದ ಬಾರಿ ನೀಡಿದ್ದು ಏನು? ಈಡೇರಿದ್ದೇನು?
ಕಳೆದ ಬಾರಿ ರಾಜ್ಯ ಬಜೆಟ್‌ನಲ್ಲಿ ಕೇಂದ್ರದ ನೆರವಿನಿಂದ ಬೂದಿಹಾಳ- ಪೀರಾಪೂರ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡುವುದಾಗಿ ಘೋಷಿಸಲಾಗಿತ್ತು. ಅದು ಮಾತ್ರ ಅನುಷ್ಠಾನಗೊಂಡಿದೆ. ಉಳಿದಂತೆ ಕಳೆದ ಬಾರಿ ಬಜೆಟ್‌ನಲ್ಲಿ ಘೋಷಣೆ ಮಾಡಿದ ವಿಜಯಪುರ, ಹಂಪಿ, ಪಟ್ಟದಕಲ್ಲು, ಐಹೊಳಿ, ಬಾದಾಮಿ ಪ್ರವಾಸಿ ವೃತ್ತದ ಘೋಷಣೆ ಮಾಡಲಾಗಿತ್ತು. ಆದರೆ ಇದು ಅನುಷ್ಠಾನವಾಗಿಲ್ಲ. ಕಳೆದ ಬಜೆಟ್‌ನಲ್ಲಿ ದೇವರ ಹಿಪ್ಪರಗಿ ಮಾಚಿದೇವರ ಕುರುಹು ಅಭಿವೃದ್ಧಿಗೆ ಘೋಷಣೆ ಮಾಡಲಾಗಿತ್ತು. ಅದೂ ಕೂಡಾ ಆಗಿಲ್ಲ. ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಿರಸ ಮಂಡಳಿಗೆ ಕಳೆದ ಬಜೆಟ್‌ನಲ್ಲಿ . 35 ಕೋಟಿ ಘೋಷಣೆ ಮಾಡಿತ್ತು. ಆದರೆ ಕೇವಲ 2 ಕೋಟಿ ನೀಡಿ ಶಂಕು ಸ್ಥಾಪನೆ ಮಾತ್ರ ಮಾಡಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ಈ ಉದ್ದೇಶಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು . 100 ಕೋಟಿ ಒದಗಿಸಿದ್ದಾರೆ. ಇದು ಸಮಾಧಾನಕರ ಸಂಗತಿ.
ಪ್ರಸಕ್ತ ಬಜೆಟ್‌ನಲ್ಲಿ ಜಿಲ್ಲೆಗೆ ದೊರೆತಿದ್ದೇನು?
ಕಳೆದ ಹಲವಾರು ವರ್ಷÜಗಳಿಂದ ನನೆಗುದಿಗೆ ಬಿದ್ದಿದ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ನೀರಾವರಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ . 5,000 ಕೋಟಿ ಅನುದಾನ ಒದಗಿಸಿ ಯುಕೆಪಿ ಮೂರನೇ ಹಂತದ ನೀರಾವರಿ ಕಾಮಗಾರಿಗಳಿಗೆ ಚಾಲನೆ ನೀಡಲು ದಿಟ್ಟನಿರ್ಧಾರ ಕೈಗೊಂಡಿರುವುದು ಜಿಲ್ಲೆಯ ಜನತೆಯಲ್ಲಿ ಸಂತಸ ಮೂಡಿಸಿದೆ.
ಭೂಸ್ವಾಧೀನಕ್ಕೆ ಏಕ ರೂಪದ ದರ ನಿಗದಿ ಮಾಡುವ ಸಲುವಾಗಿ ಐತೀರ್ಪು ರಚಿಸಲು ಸರ್ಕಾರ ಬಜೆಟ್‌ನಲ್ಲಿ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಇದು ಸಂತ್ರಸ್ಥರಿಗೆ ಪರಿಹಾರ ಧನ ಪಡೆಯುವಲ್ಲಿ ಇರುವ ತೊಂದರೆಯನ್ನು ನಿವಾರಿಸಲು ಅನುಕೂಲವಾಗಿದೆ. ಇದರಿಂದ ಭೂಮಾಲೀಕರು ಹಾಗೂ ರೈತರಿಗೆ ತಕ್ಷಣ ಪರಿಹಾರ ದೊರೆಯಲಿದೆ.
ಕಳೆದ ಬಜೆಟ್‌ನಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಗೆ ರಾಜ್ಯ ಸರ್ಕಾರ . 35 ಕೋಟಿ ಘೋಷಣೆ ಮಾಡಿತ್ತು. ಆ ಪೈಕಿ ಕೇವಲ 2 ಕೋಟಿ ಮಾತ್ರ ನೀಡಿತ್ತು. ಶಂಕು ಸ್ಥಾಪನೆ ನಂತರ ಯಾವುದೇ ಕಾಮಗಾರಿ ನಡೆದಿರಲಿಲ್ಲ. ಆದರೆ ಪ್ರಸಕ್ತ ಬಜೆಟ್‌ನಲ್ಲಿ . 100 ಕೋಟಿ ಅನುದಾನ ಒದಗಿಸಲಾಗಿದೆ.
ಕರ್ನಾಟಕದ ಐತಿಹಾಸಿಕ ಘಟನಾವಳಿಗಳ ತಾಳಿಕೋಟೆ ಯುದ್ದವೂ ಸೇರಿದೆ. ಈ ಹಿನ್ನಲೆಯಲ್ಲಿ ರಕ್ಕಸಗಿ, ತಂಗಡಗಿ ಹಾಗೂ ತಾಳಿಕೋಟೆ ಸುತ್ತಲಿನ ಪ್ರವಾಸಿ ತಾಣಗಳ ಬಗ್ಗೆ ಯುವ ಜನಾಂಗಕ್ಕೆ ಪರಿಚಯಿಸಲು ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ವಿಜಯಪುರದ ಸ್ಮಾರಕ ತಾಜಬಾವಡಿ ಸಂರಕ್ಷಣೆಗೆ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಹಂಪಿಯ ವಿಜಯವಿಠಲ ದೇವಾಲಯ ಮತ್ತು ಪುರಂದರ ಮಂಟಪ, ಚಿಕ್ಕ ಬಳ್ಳಾಪುರ ಜಿಲ್ಲೆಯ ಭೋಗ ನಂದೀಶ್ವರ ದೇವಾಲಯ, ಬಾದಾಮಿ ಗುಹೆಗಳು, ಕಿತ್ತೂರ ಹಾಗೂ ಬೀದರ ಕೋಟೆಗಳ ಅಭಿವೃದ್ಧಿ ಮಾದರಿಯಲ್ಲಿಯೇ ವಿಜಯಪುರದ ವಿಶ್ವ ವಿಖ್ಯಾತ ಗೋಳಗುಮ್ಮಟ ಅಭಿವೃದ್ಧಿ ಪಡಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, ತ್ರಿಡಿ ಪ್ರೊಜೆಕ್ಷನ್ ಮ್ಯಾಪಿಂಗ್, ಧ್ವನಿ ಮತ್ತು ಬೆಳಕು ಪ್ರದರ್ಶನಗಳನ್ನು ಅಳವಡಿಸಲಾಗುವುದು. ಈ ಉದ್ದೇಶಕ್ಕಾಗಿ ಬಜೆಟ್‌ನಲ್ಲಿ 60 ಕೋಟಿ ಮೀಸಲು ಇಡಲಾಗಿದೆ.
Karnataka Budget 2023: ರಾಯಚೂರಿಗೆ ಜಿಲ್ಲೆಗೆ ಕಹಿಯಾದ ಕೊನೆ ಬಜೆಟ್
ರಾಯಚೂರ, ಕಲಬುರಗಿ, ವಿಜಯಪುರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೂತನ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಪಟ್ಟಣ ಸೇರಿ ರಾಜ್ಯದ 9 ಸ್ಥಳಗಳಲ್ಲಿ ಹೊಸದಾಗಿ ಕೈಗಾರಿಕೆ ವಸಾಹತುಗಳನ್ನು ಸ್ಥಾಪಿಸಲು ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ರಾಜ್ಯದ ಇತರ ಜಿಲ್ಲೆಗಳಂತೆ ವಿಜಯಪುರ ಜಿಲ್ಲೆಯಲ್ಲಿಯೂ ಗರಿಷ್ಠ ಭದ್ರತಾ ಕಾರಾಗೃಹ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯೂ ಸೇರಿದಂತೆ ಬೀದರ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ನೆಟೆರೋಗದಿಂದ ಹಾನಿಗೀಡಾದ ತೊಗರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ . 10,000 ಪರಿಹಾರ ಘೋಷಿಸಲಾಗಿದೆ. ಇದು ತೊಗರಿ ಬೆಳೆಗಾರರಿಗೆ ತಕ್ಕ ಮಟ್ಟಿನ ಅನುಕೂಲವಾಗಲಿದೆ.
ರಾಜ್ಯದಲ್ಲಿ ಐದು ಹೊಸ ವಿಮಾನ ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ವಿಜಯಪುರ, ಶಿವಮೊಗ್ಗ ಜಿಲ್ಲೆಯ ವಿಮಾನ ನಿಲ್ದಾಣಗಳ ಕಾಮಗಾರಿ ಶೀಘ್ರದಲ್ಲಿಯೇ ಮುಗಿಯಲಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದು ಕೊಂಚ ಸಂತಸವನ್ನು ಉಂಟು ಮಾಡಿದೆ.
ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಿಗದ ಮನ್ನಣೆ
ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರಸಕ್ತ ಬಜೆಟ್‌ನಲ್ಲಿಯೂ ಮನ್ನಣೆæ ದೊರೆತಿಲ್ಲ. ವಿಶ್ವ ವಿಖ್ಯಾತ ಗೋಳಗುಮ್ಮಟ ಸ್ಮಾರಕವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಬಜೆಟ್‌ನಲ್ಲಿ ಗಣನೆಗೆ ತಗೆದುಕೊಂಡಿಲ್ಲ. ಆದರೆ ಪೂರಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗೋಳಗುಮ್ಮಟ, ತಾಜಬಾವಡಿ ಅಭಿವೃದ್ಧಿಗೆ ಮಾತ್ರ ಅನುದಾನ ಒದಗಿಸಲು ಮುಂದಾಗಿದೆ. ಹಾಗಾಗಿ ಗುಮ್ಮಟ ನಗರಿ ಜನರಿಗೆ ತಕ್ಕ ಮಟ್ಟಿನ ಸಮಾಧಾನವಾಗಿದೆ.
ಹೊಸ ಶಿಕ್ಷಣ ನೀತಿ ಜಾರಿಗೆ ತರುವ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಅನುದಾನ ಒದಗಿಸಬೇಕಿತ್ತು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಹೀಗಾಗಿ ಹೊಸ ಶಿಕ್ಷಣ ನೀತಿ ಅನುಷ್ಠಾನ ನಾಮಕಾವಾಸ್ಥೆಯಾಗಿದೆ ಎಂದು ಶಿಕ್ಷಣ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ.