ದೇಶದಲ್ಲಿ 6 ತಿಂಗಳಲ್ಲಿ 9 ಲಕ್ಷ ಕೋಟಿ ರೂ. Direct Taxes ಸಂಗ್ರಹ: ಶೇ. 24 ರಷ್ಟು ಏರಿಕೆ
ದೇಶದ ಮೊದಲ 6 ತಿಂಗಳಲ್ಲಿ 8.98 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಿದ್ದು, ಇದು ಶೇ. 24ರಷ್ಟು ಏರಿಕೆಯಾಗಿದೆ. ಕೈಗಾರಿಕಾ ಉತ್ಪಾದನೆ, ರಫ್ತು ಕುಸಿದರೂ ತೆರಿಗೆ ಸಂಗ್ರಹ ಏರಿಕೆಯಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮೊದಲ 6 ತಿಂಗಳ ಅಂಕಿ ಅಂಶ ಬಿಡುಗಡೆ ಮಾಡಿದೆ.
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ (Financial Year) ಮೊದಲ 6 ತಿಂಗಳಲ್ಲಿ 8.98 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ ಶೇ.24ರಷ್ಟು ಹೆಚ್ಚು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ. ವೈಯಕ್ತಿಕ ಆದಾಯ ತೆರಿಗೆ (Personal Income Tax) ಮತ್ತು ಕಾರ್ಪೊರೇಟ್ ತೆರಿಗೆಯನ್ನು (Corporate Tax) ಒಟ್ಟಾಗಿ ನೇರ ತೆರಿಗೆ ಎಂದು ಹೇಳಲಾಗುತ್ತದೆ. ಈ ಪೈಕಿ ಏಪ್ರಿಲ್ 1ರಿಂದ ಅಕ್ಟೋಬರ್ 8ರ ಅವಧಿಯಲ್ಲಿ ವೈಯಕ್ತಿಕ ತೆರಿಗೆ ಸಂಗ್ರಹದಲ್ಲಿ ಶೇ. 32ರಷ್ಟು ಮತ್ತು ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಶೇ.16.73ರಷ್ಟು ಏರಿಕೆಯಾಗಿದೆ. ಈ ಮೂಲಕ ತೆರಿಗೆ ಸಂಗ್ರಹದಲ್ಲಿ ಸರಾಸರಿ ಶೇ.24ರಷ್ಟು ಏರಿಕೆ ದಾಖಲಾಗಿದೆ.
ತೆರಿಗೆ ಸಂಗ್ರಹದಲ್ಲಿ ರೀಫಂಡ್‌ಗೆ (Refund) ಅಗತ್ಯ ಹಣ ಮೀಸಲಿರಿಸಿದ ಬಳಿಕ ತೆರಿಗೆ ಸಂಗ್ರಹ ಪ್ರಮಾಣ 7.45 ಲಕ್ಷ ಕೋಟಿ ರೂ.ಗಳಾಗಿರಲಿದೆ. ಇದು ಪೂರ್ತಿ ಹಣಕಾಸು ವರ್ಷದಲ್ಲಿ ಸಂಗ್ರಹವಾಗಬಹುದೆಂದು ಬಜೆಟ್‌ನಲ್ಲಿ ಅಂದಾಜಿಸಿರುವ ಪ್ರಮಾಣದ ಶೇ. 52.46 ರಷ್ಟು ಎಂದು ತಿಳಿದುಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ 14.10 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿತ್ತು. ಈ ವರ್ಷ ಸರ್ಕಾರ 14.20 ಲಕ್ಷ ಕೋಟಿ ರೂ. ಸಂಗ್ರಹದ ನಿರೀಕ್ಷೆ ಇಟ್ಟುಕೊಂಡಿದೆ.
ಇದನ್ನು ಓದಿ: 58 ಸಾವಿರ ಕೋಟಿ ರೂ. ಆನ್‌ಲೈನ್ ಬಹುಮಾನಕ್ಕೆ ತೆರಿಗೆಯೇ ಬಂದಿಲ್ಲ: ಟ್ಯಾಕ್ಸ್ ವಂಚಕರಿಗೆ IT Notice
ಯಾವುದೇ ದೇಶದಲ್ಲಿ ತೆರಿಗೆ ಸಂಗ್ರಹವು, ಆ ದೇಶದ ಆರ್ಥಿಕ ಪ್ರಗತಿಯ ಸೂಚ್ಯಂಕವಾಗಿರುತ್ತದೆ. ಆದರೆ ಭಾರತದಲ್ಲಿ ಕೈಗಾರಿಕಾ ಉತ್ಪಾದನೆ ಮತ್ತು ರಫ್ತು ಕುಂಠಿತವಾಗಿರುವ ಹೊರತಾಗಿಯೂ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಥಿಕ ವಿಶ್ಲೇಷಕರು, ಆರ್ಥಿಕ ಪ್ರಗತಿ ಕುಂಠಿತವಾಗಿದ್ದು, ಕಾರ್ಪೊರೆಟ್ ಸಂಸ್ಥೆಗಳು ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿರುವ ಕಾರಣ, ತೆರಿಗೆ ಸಂಗ್ರಹ ಅಬಾಧಿತವಾಗಿದೆ ಎಂದು ಹೇಳಿದ್ದಾರೆ.
"ಇದುವರೆಗೆ ಒಟ್ಟು ಆದಾಯ ಸಂಗ್ರಹಣೆಯಲ್ಲಿ ಕಾರ್ಪೊರೇಟ್ ಆದಾಯ ತೆರಿಗೆ (Corporate Income Tax) (ಸಿಐಟಿ) ಮತ್ತು ವೈಯಕ್ತಿಕ ಆದಾಯ ತೆರಿಗೆ (Personal Income Tax) (ಪಿಐಟಿ) ಬೆಳವಣಿಗೆಯ ದರಕ್ಕೆ ಸಂಬಂಧಿಸಿದಂತೆ, ಸಿಐಟಿಯ ಬೆಳವಣಿಗೆ ದರವು 16.73 ಪ್ರತಿಶತವಾಗಿದ್ದರೆ, ಪಿಐಟಿಗೆ (ಎಸ್‌ಟಿಟಿ ಸೇರಿದಂತೆ) ಶೇ. 32.30 ಆಗಿದೆ" ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (Central Board of Direct Taxes) (CBDT) ಹೇಳಿದೆ. ಮರುಪಾವತಿಗಾಗಿ ಹೊಂದಾಣಿಕೆಯ ನಂತರ, CIT ಮತ್ತು PIT ಸಂಗ್ರಹಣೆಗಳಲ್ಲಿನ ನಿವ್ವಳ ಬೆಳವಣಿಗೆಯು ಕ್ರಮವಾಗಿ 16.29% ಮತ್ತು 17.35% ಆಗಿದೆ ಎಂದೂ ಕೇಂದ್ರ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಇದನ್ನೂ ಓದಿ: ಇಂದಿನಿಂದ ಆಗುತ್ತಿರುವ 6 ಬದಲಾವಣೆಗಳು: ಸಣ್ಣ ಉಳಿತಾಯಕ್ಕೆ ಹೆಚ್ಚಿನ ಬಡ್ಡಿ, ಸಿಲಿಂಡರ್ ಬೆಲೆಯಲ್ಲಿ ಇಳಿಕೆ!