Union Budget 2022: ಡಿಜಿಟಲ್ ರುಪಿಯನ್ನು ನಗದಿಗೆ ಬದಲಾಯಿಸಿಕೊಳ್ಳಬಹುದು
* ಡಿಜಿಟಲ್ ರುಪಿಯಿಂದ ಆರ್ಥಿಕತೆಯಲ್ಲಿ ಹೊಸ ಕ್ರಾಂತಿ: ಮೋದಿ
* ಡಿಜಿಟಲ್ ರುಪಿಯನ್ನು ನಗದಿಗೆ ಬದಲಾಯಿಸಿಕೊಳ್ಳಬಹುದು
* ಇದು ಹೊಸ ಅವಕಾಶಗಳ ಗಣಿ: ಮೋದಿ
ನವದೆಹಲಿ(ಫೆ.03): ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಡಿಜಿಟಲ್ ರುಪಿ, ದೇಶದ ಡಿಜಿಟಲ್ ಆರ್ಥಿಕತೆಯಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ. ಇದು ಹೊಸ ಅವಕಾಶಗಳ ಗಣಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಬುಧವಾರ ಆಯೋಜಿಸಲಾಗಿದ್ದ ‘ಆತ್ಮನಿರ್ಭರ ಅರ್ಥವ್ಯವಸ್ಥೆ’ ಕಾರ್ಯಕ್ರಮದಲ್ಲಿ ವಚ್ರ್ಯುವಲಿ ಭಾಗವಹಿಸಿದ ಮಾತನಾಡಿದ ಪ್ರಧಾನಿ ಮೋದಿ ‘ಡಿಜಿಟಲ್ ರುಪಿ ಫಿನ್‌ಟೆಕ್ ಕಂಪನಿಗಳಿಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಆರ್‌ಬಿಐ ಬಿಡುಗಡೆ ಮಾಡಲಿರುವ ಈ ಡಿಜಿಟಲ್ ಕರೆನ್ಸಿಯು ಆನ್‌ಲೈನ್ ಪಾವತಿಯನ್ನು ಮತ್ತಷ್ಟುಸುರಕ್ಷಿತ, ಅಪಾಯ ರಹಿತ ಮಾಡಲಿದ್ದು, ಮುಂಬರುವ ವರ್ಷಗಳಲ್ಲಿ ಡಿಟಿಟಲ್ ಆರ್ಥಿಕತೆಗೆ ಉತ್ತೇಜನ ನೀಡಲಿದೆ’ ಎಂದು ಹೇಳಿದರು.
‘ಡಿಜಿಟಲ್ ರುಪಿ, ಹಾಲಿ ಬಳಕೆಯಲ್ಲಿರುವ ಭೌತಿಕ ಕರೆನ್ಸಿಯ ಡಿಜಿಟಲ್ ರೂಪ. ಇದನ್ನು ಆರ್‌ಬಿಐ ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಈ ವ್ಯವಸ್ಥೆಯಲ್ಲಿ ಡಿಜಿಟಲ್ ರುಪಿಯನ್ನು ಭೌತಿಕ ಕರೆನ್ಸಿಯಾಗಿ ಬದಲಾಯಿಸಿಕೊಳ್ಳಲು ಅವಕಾಶವಿರಲಿದೆ. ಯಾರಾದರೂ ಡಿಜಿಟಲ್ ಕರೆನ್ಸಿಯಲ್ಲಿ ಪಾವತಿ ಮಾಡಿದರೆ ನೀವು ಅದನ್ನು ಭೌತಿಕ ಕರೆನ್ಸಿ ರೂಪದಲ್ಲಿ ಪಡೆದುಕೊಳ್ಳಲು ಅವಕಾಶವಿರುತ್ತದೆ. ಈ ಹೊಸ ವ್ಯವಸ್ಥೆಯು ಜಾಗತಿಕ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಳಕೆದಾರ ಸ್ನೇಹಿಯನ್ನಾಗಿ ಮಾಡಲಿದೆ’ ಎಂದರು.
ಇದೇ ವೇಳೆ ಡಿಜಿಟಲ್ ರುಪಿಯು, ನಗದು ಮುದ್ರಣ, ನಿರ್ವಹಣೆ, ಸಾಗಣೆಯ ಹೊರೆಯನ್ನು ತಪ್ಪಿಸಲಿದೆ ಎಂದು ಬಣ್ಣಿಸಿದರು.
ಕ್ರಿಪ್ಟೋಗೆ ತೆರಿಗೆ ಹಾಕಿದ ಮಾತ್ರಕ್ಕೆ ಕಾನೂನಿನ ಮಾನ್ಯತೆ ನೀಡಿದಂತಲ್ಲ
ಕಾನೂನು ಮಾನ್ಯತೆ ಹೊಂದಿಲ್ಲದ ಕ್ರಿಪ್ಟೊಕರೆನ್ಸಿ ಆದಾಯದ ಮೇಲೆ ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವು, ಕ್ರಿಪ್ಟೋಕರೆನ್ಸಿಗೆ ಪರೋಕ್ಷವಾಗಿ ಕಾನೂನಿನ ಮಾನ್ಯತೆ ನೀಡಿದಂತೆ ಅಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಬಿಡಿಟಿ ಅಧ್ಯಕ್ಷ ಜೆ.ಪಿ.ಮಹಾಪಾತ್ರ ‘ಕ್ರಿಪ್ಟೋಕರೆನ್ಸಿ ಆದಾಯಕ್ಕೆ ತೆರಿಗೆ ಮತ್ತು ವಹಿವಾಟಿಗೆ ಟಿಡಿಎಸ್ ವಿಧಿಸುವ ನಿರ್ಧಾರವು, ದೇಶದಲ್ಲಿನ ಕ್ರಿಪ್ಟೋ ಉದ್ಯಮದ ಆಳಗಲವನ್ನು ಪರಿಶೀಲಿಸುವ ಉದ್ದೇಶ ಹೊಂದಿದೆಯೇ ಹೊರತೂ ಅವುಗಳಿಗೆ ಕಾನೂನು ಮಾನ್ಯತೆ ನೀಡುವ ಉದ್ದೇಶದ್ದಲ್ಲ. ಯಾರು ಹೂಡಿಕೆ ಮಾಡುತ್ತಿದ್ದಾರೆ? ಅವರ ಹೂಡಿಕೆಯ ಮೊತ್ತ ಎಷ್ಟು? ಅದರ ಮೂಲ ಏನು? ಹೂಡಿಕೆಯಿಂದ ಬಂದ ಆದಾಯವನ್ನು ಅವರು ತೋರಿಸುತ್ತಿದ್ದಾರೆಯೇ? ಎಂಬುದನ್ನು ಪರಿಶೀಲಿಸುವುದಷ್ಟೇ ನಮ್ಮ ಕೆಲಸ’ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಯಾವುದೇ ವಹಿವಾಟಿನ ಕಾನೂನಿನ ಮಾನ್ಯತೆಯ ಗೋಜಿಗೆ ಹೋಗುವುದಿಲ್ಲ. ನಮ್ಮ ಇಲಾಖೆ ಮತ್ತು ನಮ್ಮ ತೆರಿಗೆ ಕಾಯ್ದೆಗಳು, ಯಾವುದೇ ವ್ಯಕ್ತಿ ನಡೆಸಿದ ವ್ಯವಹಾರದಿಂದ ಆತನಿಗೆ ಆದಾಯ ಬಂದಿದೆಯೇ ಎಂಬುದನ್ನಷ್ಟೇ ಪರಿಶೀಲಿಸುತ್ತದೆ. ನಾವು ಆದಾಯದ ಕಾನೂನಿನ ಮಾನ್ಯತೆ ಪರಿಶೀಲಿಸುವುದಿಲ್ಲ, ಬದಲಾಗಿ ಅದರ ಮೇಲೆ ತೆರಿಗೆ ವಿಧಿಸುವುದನ್ನು ಪರಿಶೀಲಿಸುತ್ತೇವೆ. ಈ ಕಾರಣಕ್ಕಾಗಿಯೇ ಈಗಲೂ ನಾವು ಕ್ರಿಪ್ಟೋ ಕರೆನ್ಸಿಗೆ ತೆರಿಗೆ ವಿಧಿಸುವುದು ಅದಕ್ಕೆ ಕಾನೂನಿನ ಮಾನ್ಯತೆ ನೀಡಿದಂತೆ ಆಗುವುದಿಲ್ಲ ಎಂದು ಹೇಳುತ್ತಿರುವುದು ಎಂದು ಮಹಾಪಾತ್ರ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ ಕ್ರಿಪ್ಟೋಕರೆನ್ಸಿ ಮತ್ತು ಎನ್‌ಎಫ್‌ಟಿ ಆದಾಯದ ಮೇಲೆ ಶೇ.30ರಷ್ಟುತೆರಿಗೆ ಮತ್ತು ವಾರ್ಷಿಕ 10000 ರು.ಗಿಂತ ಹೆಚ್ಚಿನ ವಹಿವಾಟಿಗೆ ಶೇ.1ರಷ್ಟುಟಿಡಿಎಸ್ ವಿಧಿಸುವ ನಿರ್ಧಾರ ಪ್ರಕಟಿಸಿದ್ದರು. ಇದು ಕೇಂದ್ರ ಸರ್ಕಾರ ಪರೋಕ್ಷವಾಗಿ ಕ್ರಿಪ್ಟೋಗೆ ಕಾನೂನು ಮಾನ್ಯತೆ ನೀಡಿದಂತೆ ಎಂದು ವಿಶ್ಲೇಷಣೆ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮಹಾಪಾತ್ರ ಈ ಸ್ಪಷ್ಟನೆ ನೀಡಿದ್ದಾರೆ.
ಭಾರತದಲ್ಲಿ ಹಾಲಿ ಕ್ರಿಪ್ಟೋ ಕರೆನ್ಸಿ ವಹಿವಾಟಿಗೆ ಹಾಲಿ ಮಾನ್ಯತೆಯೂ ಇಲ್ಲ, ನಿಷೇಧವೂ ಇಲ್ಲ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ 10 ಕೋಟಿ ಜನರು ಅಂದಾಜು 1 ಲಕ್ಷ ಕೋಟಿ ರು.ಗಳನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಲೆಕ್ಕಾಚಾರವಿದೆ.