ನವದೆಹಲಿ(ಜೂ.25): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್‌ಗಿಂತಲೂ ಡೀಸೆಲ್‌ ದುಬಾರಿಯಾಗಿದೆ.

ಸತತ 17 ದಿನಗಳ ಏರಿಕೆಯ ಬಳಿಕ ತೈಲ ಕಂಪನಿಗಳು ಪೆಟ್ರೋಲ್‌ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಆದರೆ, ಸತತ 18ನೇ ದಿನ ಪ್ರತಿ ಲೀಟರ್‌ ಡೀಸೆಲ್‌ ದರವನ್ನು 48 ಪೈಸೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ಡೀಸೆಲ್‌ 79.88 ರು. ಮತ್ತು ಪೆಟ್ರೋಲ್‌ 79.76 ರು. ಆಗಿದೆ. ಕಳೆದ 18 ದಿನಗಳ ಅಂತರದಲ್ಲಿ ಡೀಸೆಲ್‌ 10.49 ರು. ಹಾಗೂ ಪೆಟ್ರೋಲ್‌ 8.5 ರು. ಏರಿಕೆಯಾಗಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 82.35 ಹಾಗೂ ಡೀಸೆಲ್‌ 75.96 ರು. ಆಗಿದೆ.

ಭಾರತದಲ್ಲಿ ರೆನಾಲ್ಟ್ ಕ್ಯಾಪ್ಚರ್ ಕಾರು ಸ್ಥಗಿತ; ಬಿಡುಗಡೆಯಾಗಲಿದೆ ನೂತನ ಕಾರು!

ರಾಹುಲ್‌ ಅಣಕ:

ಇದೇ ವೇಳೆ ತೈಲ ದರ ಏರಿಕೆಯನ್ನು ಖಂಡಿಸಿರುವ ಕಾಂಗ್ರೆಸ ನಾಯಕ ರಾಹುಲ್‌ ಗಾಂಧಿ, ಮೋದಿ ಸರ್ಕಾರ ಕೊರೋನಾ ವೈರಸ್‌ ಮಹಾಮಾರಿಯನ್ನು ಅನ್‌ಲಾಕ್‌ ಮಾಡಿದಂತೆ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನೂ ಅನ್‌ಲಾಕ್‌ ಮಾಡಿದೆ ಎಂದು ಅಣಕ ಮಾಡಿದ್ದಾರೆ.

ಡೀಸೆಲ್‌ ದುಬಾರಿ ಆಗಿದ್ದು ಏಕೆ?:

ಕೆಲ ವರ್ಷಗಳ ಹಿಂದೆ ಪೆಟ್ರೋಲ್‌ ಮತ್ತು ಡೀಸೆಲ್‌ ಮಧ್ಯೆ 18​ರಿಂದ 20 ರು. ವ್ಯತ್ಯಾಸ ಇರುತ್ತಿತ್ತು. ಆದರೆ, ಹಂತ ಹಂತವಾಗಿ ಡೀಸೆಲ್‌ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದ್ದರಿಂದ ಡೀಸೆಲ್‌ ದುಬಾರಿ ಆಗಲು ಕಾರಣವಾಗಿದೆ. ಗಮನಾರ್ಹ ಸಂಗತಿಯೆಂದರೆ ಪೆಟ್ರೋಲ್‌ ಮತ್ತು ಡೀಸೆಲ್‌ಗೆ ನೀಡುತ್ತಿರುವ ಹಣದಲ್ಲಿ ಶೇ.70ರಷ್ಟುತೆರಿಗೆಯೇ ಇದೆ. ಮೇ ತಿಂಗಳಿನಲ್ಲಿ ಡೀಸೆಲ್‌ನ ಮೂಲ ದರ 18.78 ರು. ಇತ್ತು.

ದೆಹಲಿ ಸರ್ಕಾರ ಮೇ 5ರಂದು ಡೀಸೆಲ್‌ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನು 16.75 ರು. ಅಥವಾ ಶೇ.30ರಷ್ಟುಏರಿಕೆ ಮಾಡಿದೆ. ಅದರ ಜೊತೆಗೆ ಕೇಂದ್ರ ಸರ್ಕಾರ ಡೀಸೆಲ್‌ ಮೇಲೆ 31. 83 ರು. ಉತ್ಪಾದನಾ ಸುಂಕ ವಿಧಿಸುತ್ತಿದೆ. ಜೊತೆಗೆ 2.52 ರು. ಡೀಲರ್ಸ್‌ ಕಮಿಷನ್‌ ನೀಡಲಾಗುತ್ತದೆ.

ಬೆಂಗಳೂರಲ್ಲಿ ಲೀಟರ್‌ಗೆ 80 ರುಪಾಯಿ ಗಡಿ ದಾಟಿದ ಪೆಟ್ರೋಲ್‌..!

ಜೂ.7ರಿಂದ ದೈನಂದಿನ ತೈಲ ಪರಿಷ್ಕರಣೆ ಆರಂಭವಾದ ಬಳಿಕ ಪೆಟ್ರೋಲ್‌ಗಿಂತ ಡೀಸೆಲ್‌ ದರದಲ್ಲಿ 2 ರು.ನಷ್ಟುಹೆಚ್ಚಿನ ಏರಿಕೆ ಮಾಡಲಾಗಿದೆ. ಈ ತೆರಿಗೆ ದರ ಇತರ ರಾಜ್ಯಗಳಲ್ಲಿ ವ್ಯತ್ಯಾಸ ಇರುವುದರಿಂದ ಅಲ್ಲಿ ಪೆಟ್ರೋಲ್‌ಗಿಂತಲೂ ಡೀಸೆಲ್‌ ಅಗ್ಗವಾಗಿದೆ.