ಈ ಜಗತ್ತಿನಲ್ಲಿ ಎಲ್ಲ ಬಿಲಿಯನೇರ್‌ಗಳಿಗೂ ಅವರಪ್ಪ, ಅಜ್ಜ ಆಸ್ತಿ  ಮಾಡಿಟ್ಟಿದ್ದಲ್ಲ. ತಾವೇ ಸ್ವತಃ ಕಷ್ಟ ಪಟ್ಟು, ಹೊಸತನ್ನು ಹುಡುಕಿ, ಎಕ್ಸಲೆನ್ಸ್ ಸಾಧಿಸಿ ಬಿಲಿಯನೇರ್ ಆಗಿ ಜಗತ್ತಿಗೇ ಸ್ಪೂರ್ತಿಯಾದ  ಹಲವರಿದ್ದಾರೆ. ಪೇಪರ್ ಹಾಕುತ್ತಿದ್ದವರು ಸೂಪರ್ ಸ್ಟಾರ್ ಆಗಿದ್ದಾರೆ, ಹೋಟೆಲ್ ಮಾಣಿಯಾಗಿದ್ದವರು ನೂರಾರು ಹೋಟೆಲ್‌ಗಳ ದಣಿಯಾಗಿದ್ದಾರೆ, ಜಾಹಿರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು ಸಾವಿರಾರು ಸ್ವಂತ ಬ್ರ್ಯಾಂಡ್‌ಗಳ ಜಾಹಿರಾತು ಕೊಡುವಷ್ಟು ದೊಡ್ಡವರಾಗಿದ್ದಾರೆ. ಅಂಥ ಕೆಲ ಸಾಧಕರ  ಮೊದಲ ಉದ್ಯೋಗ ಏನೇನಾಗಿತ್ತು ನೋಡೋಣ ಬನ್ನಿ.

ಜೆಫ್ ಬೆಝೋಸ್

ಅಮೇಜಾನ್ ಸಂಸ್ಥಾಪಕ ಜೆಫ್ ಬೆಝೋಸ್ 16ನೇ ವರ್ಷದಲ್ಲಿದ್ದಾಗ ಮ್ಯಾಕ್ ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಆದರೆ ಕಲಿಯಲು ಎಲ್ಲಿದ್ದರೇನು, ಏನು ಕೆಲಸ ಮಾಡುತ್ತಿದ್ದರೇನು? ಜೆಫ್ ಪ್ರಕಾರ, ಕಸ್ಟಮರ್ ಸರ್ವೀಸ್, ಆಟೋಮೇಶನ್ ಹಾಗೂ ಜವಾಬ್ದಾರಿಯುತವಾಗಿರುವುದರ ಮೌಲ್ಯವನ್ನು ಅವರು ಕಲಿತದ್ದೇ ಮ್ಯಾಕ್‌ಡಿಯಲ್ಲಂತೆ. 

ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!

ಎಲಾನ್ ಮಸ್ಕ್

ಸ್ಪೇಸ್ ಎಕ್ಸ್‌ನ ಸಿಇಒ ಎಲಾನ್ ಮಸ್ಕ್ ಬಾಲ್ಯದಿಂದಲೇ ತಂತ್ರಜ್ಞಾನ ಹಾಗೂ ಸ್ಪೇಸ್ ಕುರಿತು ವಿಪರೀತ ಆಸಕ್ತಿಯಿದ್ದ ಬಾಲಕ. 12ನೇ ವರ್ಷದಲ್ಲಿರುವಾಗಲೇ ಸ್ಪೇಸ್ ಥೀಮ್ ಇಟ್ಟುಕೊಂಡು ತನ್ನದೇ ಆದ ವಿಡಿಯೋ ಗೇಮ್ 'ಬಾಲ್‌ಸ್ಟಾರ್‌'ಗೆ ಕೋಡ್ ಬರೆದ ಮಹಾ ಪ್ರತಿಭಾನ್ವಿತ. ನಂತರ ಆತ ಆ ಕೋಡನ್ನು ಟೆಕ್ನಾಲಜಿ ಮ್ಯಾಗಜೀನ್‌ಗೆ 500 ಡಾಲರ್‌ಗೆ ಮಾರಿದ್ದ. 

ರಿಚರ್ಡ್ ಬ್ರಾನ್ಸನ್

ಸುಮಾರು 400 ಬೇರೆ ಬೇರೆ ಕಂಪನಿಗಳನ್ನು ಹೊಂದಿರುವ ವರ್ಜಿನ್ ಗ್ರೂಪ್‌ನ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಶಾಲೆಯಲ್ಲಿ ಫೇಲ್ ಆಗಿ ಹೊರಬಿದ್ದಿದ್ದರು. ನಂತರ ತಮ್ಮದೇ ಆದ 'ಸ್ಟೂಡೆಂಟ್' ಎಂಬ ಸಾಂಸ್ಕೃತಿಕ ಮ್ಯಾಗಜೀನ್ ಹೊರತಂದರು. ನಂತರ ವರ್ಜಿನ್ ರೆಕಾರ್ಡ್ ಎಂಬ ಮೇಲ್ ಆರ್ಡರ್ ರೆಕಾರ್ಡ್ ಬ್ಯುಸಿನೆಸ್‌ಗೆ ಕೈ ಹಾಕಿದವರು ಹಿಂದಿರುಗಿ ನೋಡಿದ್ದೇ ಇಲ್ಲ. 

ವಾರೆನ್ ಬಫೆಟ್

ಉದ್ಯಮ ಲೋಕದಲ್ಲಿ ವಾರೆನ್ ಬಫೆಟ್ ಹೆಸರಿಗೆ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ. ಈಗಿನ ಅವರ ಒಟ್ಟು ಆಸ್ತಿ 82 ಶತಕೋಟಿ ಅಮೆರಿಕನ್ ಡಾಲರ್ಸ್! ಜಗತ್ತಿನ ಅತಿ ಯಶಸ್ವೀ ಹೂಡಿಕೆದಾರ ಇವರೆಂದರೂ ತಪ್ಪಿಲ್ಲ. ಬರ್ಕ್‌ಶೈರ್ ಹಾಥ್‌ವೇಯ ಸಿಇಒ ಆಗಿರುವ ಈ ಪುಣ್ಯಾತ್ಮನ ಮೊದಲ ಉದ್ಯೋಗ ಮನೆಮನೆಗೆ ಪೇಪರ್ ಹಾಕುತ್ತಿದ್ದುದು ಎಂದರೆ ನಂಬಲಾಗುತ್ತದೆಯೇ?

ಬದುಕಿದರೆ ಹೀಗೆ ಬದುಕಬೇಕು ಎಂದು ಕನಸು ಕಟ್ಟಿಕೊಟ್ಟ ಕಲಾಂ ಜೀ ನಿಮಗಿದೋ ನಮನ

ಮಾರ್ಕ್ ಝುಕರ್‌ಬರ್ಗ್

ಫೇಸ್‌ಬುಕ್ ಹುಟ್ಟು ಹಾಕಿದಾಗ ಮಾರ್ಕ್ ಝುಕರ್‌ಬರ್ಗ್ ಇನ್ನೂ ಕಾಲೇಜು ವಿದ್ಯಾರ್ಥಿ. ಆದರೆ, ಅವರದಕ್ಕಿಂತಾ ಬಹಳ ಮೊದಲೇ ದುಡಿಮೆ ಆರಂಭಿಸಿದ್ದರು. ಹೈಸ್ಕೂಲ್ ದಿನಗಳಲ್ಲಿಯೇ ಅವರು ಮ್ಯಾಸಿಕ್ ರೆಕಮಂಡೇಶನ್ ಮಾಡುವ ಸಾಫ್ಟ್‌ವೇರ್ ಸಿನಾಪ್ಸ್ ಹುಟ್ಟುಹಾಕಿದ್ದರು. ಮೈಕ್ರೋಸಾಫ್ಟ್ ಸೇರಿದಂತೆ ಬಹಳಷ್ಟು ಕಂಪನಿಗಳು ಈ ಸಾಫ್ಟ್‌ವೇರ್ ಕೊಳ್ಳಲು ನಾ ಮುಂದು ತಾ ಮುಂದು ಎಂದು ಬಂದಿದ್ದವು. ಅಷ್ಟೇ ಅಲ್ಲ, ಈ ಪುಟ್ಟ ಬಾಲಕನಿಗೆ ಉದ್ಯೋಗವನ್ನೂ ಆಫರ್ ಮಾಡಿದ್ದವು. ಆದರೆ, ಝುಕರ್‌ಬರ್ಗ್ ತಲೆಯಲ್ಲಾಗಲೇ ಭವಿಷ್ಯದ ಕುರಿತು ಬೇರೆಯೇ ಯೋಜನೆಗಳಿದ್ದವು.

ಮಾರ್ಕ್ ಕ್ಯೂಬನ್

ಉದ್ಯಮಿ ಹಾಗೂ ಹೂಡಿಕೆದಾರ ಮಾರ್ಕ್‌ ಕ್ಯೂಬನ್‌ಗೆ ಬಾಲ್ಯದಿಂದಲೇ ಉದ್ಯಮಿಯ ಮೈಂಡ್‌ಸೆಟ್ ಇತ್ತು. 12ನೇ ವರ್ಷಕ್ಕೆನೇ ಬಾಸ್ಕೆಟ್‌ಬಾಲ್ ಶೂ ಕೊಳ್ಳುವ ಆಸೆಯಲ್ಲಿ ಮನೆಮನೆಗೆ ಹೋಗಿ ಕಸ ಹಾಕುವ ಬ್ಯಾಗ್‌ಗಳನ್ನು ಮಾರುತ್ತಿದ್ದರು. ಇಂದಿನ ಯಶಸ್ಸಿಗೆ ಅವರು ಬಾಲ್ಯದಿಂದಲೇ ಬೆಳೆದು ಬಂದ ತಮ್ಮ ಈ ಆ್ಯಟಿಟ್ಯೂಡೇ ಕಾರಣ ಎನ್ನುತ್ತಾರೆ. 

ಸೋತ ಮನಕ್ಕೆ ಬಾಲಿವುಡ್ ಬಾದ್ ಶಾನ ಸಾಂತ್ವಾನ!

ಟೆಡ್ ಟರ್ನರ್

ಡಾರ್ಮೆಟ್ರಿಗೆ ಯುವತಿಯನ್ನು ಕರೆದುಕೊಂಡು ಬಂದರೆಂದು ಕಾಲೇಜಿನಿಂದ ಡಿಬಾರ್ ಆದ ಭೂಪ ಟೆಡ್ ಟರ್ನರ್. ನಂತರ ತಮ್ಮ ತಂದೆಯ ಜಾಹಿರಾತು ಏಜೆನ್ಸಿಯಲ್ಲಿ ಕೆಲಸ ಮಾಡಲಾರಂಭಿಸಿದರು. ಉದ್ಯಮದ ಆಸಕ್ತಿ ರಕ್ತದಲ್ಲೇ ಇತ್ತು. ಆದರೆ ಕೇಬಲ್ ನ್ಯೂಸ್ ನೆಟ್ವರ್ಕ್(ಸಿಎನ್‌ಎನ್) ಹುಟ್ಟು ಹಾಕಿ ಮಾಧ್ಯಮ ಜಗತ್ತಷ್ಟೇ ಅಲ್ಲ, ಜಗತ್ತಿನಲ್ಲೇ ಅತಿ ದೊಡ್ಡ ಐಕಾನ್ ಆಗುತ್ತಾರೆಂದು ಯಾರು ತಾನೇ ಊಹಿಸಿದ್ದರು?