ನವದೆಹಲಿ[ಫೆ.11]: ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪ್ರಧಾನಮಂತ್ರಿ ಜನಧನ್‌ ಯೋಜನೆಯಡಿ ದೇಶಾದ್ಯಂತ ತೆರೆದ ಬ್ಯಾಂಕ್‌ ಖಾತೆಗಳಲ್ಲಿನ ಠೇವಣಿಯ ಒಟ್ಟು ಮೊತ್ತ ಬಹುತೇಕ 90,000 ಕೋಟಿ ರು.ಗೆ ಏರಿಕೆಯಾಗಿದೆ. ಜನವರಿ 30ಕ್ಕೆ ಈ ಠೇವಣಿಯ ಮೊತ್ತ 89,257.57 ಕೋಟಿ ರು. ಆಗಿದ್ದು, ಠೇವಣಿಯ ಬೆಳವಣಿಗೆ ದರ ಗಮನಿಸಿದರೆ ಫೆ.10ರ ವೇಳೆಗೆ ಅದು 90,000 ಕೋಟಿ ರು. ತಲುಪಿರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಕೇಂದ್ರ ಹಣಕಾಸು ಇಲಾಖೆಯ ಅಂಕಿಅಂಶಗಳ ಪ್ರಕಾರ ಮಾಚ್‌ರ್‍ 2017ರಿಂದ ಜನಧನ್‌ ಖಾತೆಗಳಲ್ಲಿನ ಠೇವಣಿ ಮೊತ್ತ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಮೊದಲು ಜನಧನ್‌ ಖಾತೆಗಿದ್ದ 1 ಲಕ್ಷ ರು. ಅಪಘಾತ ವಿಮೆಯ ಮೊತ್ತವನ್ನು ಈಗ 2 ಲಕ್ಷ ರು.ಗೇರಿಸಿರುವುದು ಹಾಗೂ ಈ ಮೊದಲಿದ್ದ 5000 ರು. ಓವರ್‌ಡ್ರಾಫ್ಟ್‌ ಮೊತ್ತವನ್ನು ಈಗ 10,000 ರು.ಗೇರಿಸಿರುವುದು ಇದಕ್ಕೆ ಕಾರಣ. ಅದೇ ರೀತಿ, ಈ ಹಿಂದೆ ಕುಟುಂಬಕ್ಕೊಂದು ಬ್ಯಾಂಕ್‌ ಖಾತೆ ಎಂಬ ಗುರಿಯೊಂದಿಗೆ ಆರ್ಥಿಕ ಸೇರ್ಪಡೆಯ ಈ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದ ಹಣಕಾಸು ಇಲಾಖೆ ಈಗ ‘ವಯಸ್ಕರಿಗೆ ಒಂದು ಖಾತೆ’ ಎಂಬ ಘೋಷವಾಕ್ಯದಡಿ ಕೆಲಸ ಮಾಡುತ್ತಿದೆ. ಇವೆಲ್ಲ ಉಪಕ್ರಮಗಳಿಂದ ದೇಶದಲ್ಲಿ ಜನಧನ್‌ ಖಾತೆಗಳ ಸಂಖ್ಯೆ 34.14 ಕೋಟಿಗೆ ಏರಿದ್ದು, ಪ್ರತಿ ಖಾತೆಯಲ್ಲಿ ಸರಾಸರಿ 2,615 ರು. ಹಣವಿದೆ. ಇದು 2015ರ ಮಾಚ್‌ರ್‍ನಲ್ಲಿ ಸರಾಸರಿ 1065 ರು. ಇತ್ತು.

ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಜನಧನ್‌ ಖಾತೆದಾರರ ಪೈಕಿ ಶೇ.53ರಷ್ಟುಮಹಿಳೆಯರಿದ್ದಾರೆ. ಶೇ.59ರಷ್ಟುಜನರು ಗ್ರಾಮೀಣ ಹಾಗೂ ಅರೆ-ಪಟ್ಟಣ ವಾಸಿಗಳಿದ್ದಾರೆ. 27.26 ಕೋಟಿ ಖಾತೆದಾರರಿಗೆ ಅಪಘಾತ ವಿಮೆಯಿರುವ ರುಪೇ ಡೆಬಿಟ್‌ ಕಾರ್ಡ್‌ ನೀಡಲಾಗಿದೆ.