ಎಲೆಕ್ಟ್ರಿಷಿಯನ್‌ ಪುತ್ರನಿಗೆ ಒಂದು ಲಕ್ಷ ಡಾಲರ್‌ ವೇತನ! ಡಿಪ್ಲೋಮಾ ವಿದ್ಯಾರ್ಥಿ ಮೊಹ್ಮದ್ ಆಮಿರ್ ಅಲಿ! ಅಲಿಯ ಬ್ಯಾಟರಿ ಚಾಲಿತ ವಾಹನದ ಯೋಜನೆ! ಅಲಿಗೆ ಕೆಲಸ ಕೊಡಲು ದುಂಬಾಲು ಬಿದ್ದ ಅಮೆರಿಕ ಕಂಪನಿ

ನವದೆಹಲಿ(ಆ.22): ಭಾರತದ ವಿದ್ವತ್ತಿಗೆ ಜಗತ್ತು ತಲೆದೂಗುತ್ತಲೇ ಬಂದಿದೆ. ಇಲ್ಲಿನ ಜ್ಞಾನ ಸಂಪತ್ತು ಎಂದಿಗೂ ಬತ್ತುವುದಿಲ್ಲ ಎಂಬುದನ್ನು ಅರಿತೇ ಎಲ್ಲಾ ದೇಶಗಳು ಭಾರತದತ್ತ ದೃಷ್ಟಿ ಬೀರುತ್ತವೆ.

ಸಾಧಿಸುವ ಛಲ ಹಾಗೂ ಆಸಕ್ತಿ ಇದ್ದರೆ ಜಗತ್ತೇ ನಿಮ್ಮ ಮುಂದೆ ತಲೆಬಾಗಲಿದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಎಲೆಕ್ಟ್ರಿಷಿಯನ್‌ ಪುತ್ರನೋರ್ವನಿಗೆ ಅಮೆರಿಕದ ಕಂಪನಿಯೊಂದು ವಾರ್ಷಿಕ ಒಂದು ಲಕ್ಷ ಡಾಲರ್‌ ವೇತನದ ಪ್ಯಾಕೇಜ್‌ ನೀಡಿ ಕೆಲಸಕ್ಕೆ ಆಹ್ವಾನಿಸಿದೆ. 

ಅಂತದ್ದೇನಪ್ಪಾ ಈತ ಮಾಡಿರೋ ಸಾಧನೆ ಅಂತೀರಾ?. ನವದೆಹಲಿಯ ಸೆಂಟ್ರಲ್‌ ವಿಶ್ವವಿದ್ಯಾಲಯದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಡಿಪ್ಲೊಮಾ ವಿದ್ಯಾರ್ಥಿ ಮೊಹ್ಮದ್ ಆಮಿರ್‌ ಅಲಿ ತಯಾರಿಸಿದ ಬ್ಯಾಟರಿ ಚಾಲಿತ ವಾಹನದ ಯೋಜನೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. 

ಇದೇ ಕಾರಣಕ್ಕೆ ಅಮೆರಿಕದ ಆಟೋಮೊಬೈಲ್ ಕಂಪನಿಗಳು ಅಲಿಗೆ ಕೆಲಸ ನೀಡಲು ನಾ ಮುಂದು. ನೀ ಮುಂದು ಎಂದು ದುಂಬಾಲು ಬಿದ್ದಿವೆ. ಅದರಂತೆ ಅಲಿಗೆ ಕೆಲಸ ನೀಡಲು ಮುಂದೆ ಬಂದ ಸಂಸ್ಥೆಯೊಂದು ಅತ್ಯುತ್ತಮ ವೇತನಕ್ಕೆ ನೌಕರಿ ನೀಡುವುದಾಗಿ ಹೇಳಿದೆ. ಅಲ್ಲದೆ ಈಗಾಗಲೇ ಆಫರ್‌ ಲೆಟರ್‌ ಕೂಡ ಕಳಿಸಿದೆ. 

ಭಾರತದಲ್ಲಿ ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್‌ ಮಾಡುವುದೇ ಸವಾಲಿನ ಕೆಲಸ. ಇದಕ್ಕೆ ಪ್ರೊಟೋಟೈಪ್‌ ಬ್ಯಾಟರಿಗಳನ್ನು ಬಳಕೆ ಮಾಡಲು, ಕಡಿಮೆ ಚಾರ್ಜಿಂಗ್‌ನಲ್ಲಿ ಅತಿ ಹೆಚ್ಚು ದೂರ ಚಲಿಸಬಲ್ಲ ವ್ಯವಸ್ಥೆ ರಚಿಸುವ ಸಂಬಂಧ ಸಂಶೋಧನಾ ವಿವರಗಳನ್ನು ಅಲಿ ಮಂಡಿಸಿದ್ದ.