ನವದೆಹಲಿ(ಜ.09): ಇತ್ತೀಚೆಗಷ್ಟೇ ಜೊಮ್ಯಾಟೋ ತನ್ನ ಮಹಿಳಾ ಹಾಗೂ ತೃತೀಯ ಲಿಂಗಿ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ಪರಿಚಯಿಸಿತ್ತು. ಈ ವಿಚಾರ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು, ಅಲ್ಲದೇ ಈ ಕುರಿತಾಗಿ ಸೋಶಿಯಲ್ ಮಿಡಿಯಾದಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಆದರೆ ನಿಮಗೆ ಗೊತ್ತಾ ಈ ಮುಟ್ಟಿನ ರಜೆ ಎಂಬ ಕಾನ್ಸೆಪ್ಟ್ ಭಾರತಕ್ಕೆ ಹೊಸತಲ್ಲ...!, ಹೌದು ಕಳೆದ 28 ವರ್ಷಗಳ ಹಿಂದೆಯೇ ಬಿಹಾರ ಸರ್ಕಾರ ಈ ಬಗೆಯ ರಜೆಯನ್ನು ಜಾರಿಗೊಳಿಸಿತ್ತು. ಅಂದು ಮಹಿಳಾ ಉದ್ಯೋಗಿಗಳಿಗೆ ಬಿಹಾರ ಸರ್ಕಾರ ಎರಡು ದಿನದ ಮುಟ್ಟಿನ ರಜೆ ನೀಡಲಾರಂಭಿಸಿತ್ತು. 

1992ರ ಜನವರಿ 2 ರಂದು ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಜೈವಿಕ ಕಾರಣಗಳಿಂದಾಗಿ ನಿಯಮಿತ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಎರಡು ದಿನ ಸಾಮಾನ್ಯ ರಜೆ ನೀಡಬೇಕೆಂದು ತಿಳಿಸಲಾಗಿತ್ತು. 

ಇಷ್ಟೇ ಅಲ್ಲದೇ ಕಳೆದ ಕೆಲ ವರ್ಷಗಳ ಹಿಂದೆ ಜೊಮ್ಯಾಟೋ ಇಂತಹ ರಜೆ ನೀಡುವುದಕ್ಕೂ ಮೊದಲೇ, ವೆಬ್‌ಸೈಟ್ ಕಲ್ಚರ್ ಮಷೀನ್, ಗೋಝೂಪ್, ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಫರ್ಮ್ ಫ್ಲೈಮೈಬಿಜ್ ಕೂಡಾ ತಮ್ಮ ಮಹಿಖಾ ಉದ್ಯೋಗಿಗಳಿಗೆ ಇಂತಹುದ್ದೊಂದು ರಜೆ ಆರಂಭಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ ಮುಟ್ಟಿನ ರಜೆ ಎಂಬ ಕಾನ್ಸೆಪ್ಟ್ ನಮ್ಮ ದೇಶದಲ್ಲೇ ಆರಂಭವಾಗಿದ್ದು, ಹೊರಗಿನ ಪರಿಕಲ್ಪನೆಯಲ್ಲ ಎಂಬುವುದು ಸ್ಪಷ್ಟ.