ಕಾರ್ಮಿಕರಿಗೆ ಗುಡ್‌ನ್ಯೂಸ್: ಆಧಾರ್ ಪಾವತಿ ವ್ಯವಸ್ಥೆಗೆ ಗಡುವು ವಿಸ್ತರಣೆ
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆ ಅಡಿಯಲ್ಲಿ ಕಾರ್ಮಿಕರಿಗೆ ಕೂಲಿ ಪಾವತಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಅಳವಡಿಕೆಗೆ ಸೆಪ್ಟೆಂಬರ್ 1ರ ಗಡುವು ನೀಡಲಾಗಿತ್ತು.ಆದರೆ, ಇದನ್ನು ಕೇಂದ್ರ ಸರ್ಕಾರ ಡಿಸೆಂಬರ್ 31ರ ತನಕ ವಿಸ್ತರಿಸಿದೆ.
ನವದೆಹಲಿ (ಆ.31): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಎಂಜಿಎನ್ ಆರ್ ಇಜಿಎ) ಕೂಲಿಯನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ಮೂಲಕ ಪಾವತಿಸಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ಬುಧವಾರ ಮತ್ತೆ ವಿಸ್ತರಣೆ ಮಾಡಿದೆ. ಎಂಜಿಎನ್ ಆರ್ ಇಜಿಎ ಫಲಾನುಭವಿಗಳಿಗೆ ಕೂಲಿ ಪಾವತಿಗೆ ಈ ವ್ಯವಸ್ಥೆ ಅಳವಡಿಕೆಗೆ ಡಿಸೆಂಬರ್ 31ರ ತನಕ ಕಾಲಾವಕಾಶ ನೀಡಿದೆ. ಈ ಹಿಂದೆ ಸೆಪ್ಟೆಂಬರ್ 1ರ ಗಡುವು ನೀಡಲಾಗಿತ್ತು. ಕೇಂದ್ರ ಸರ್ಕಾರ ಈ ರೀತಿ ಗಡುವು ವಿಸ್ತರಣೆ ಮಾಡುತ್ತಿರೋದು ಇದು 5ನೇ ಬಾರಿಯಾಗಿದೆ. ಎಂಜಿಎನ್ ಆರ್ ಇಜಿಎ ಅಡಿ ನೋಂದಣಿಯಾಗಿರುವ ಶೇ.42ರಷ್ಟು ಕಾರ್ಮಿಕರು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್ ) ಬಳಕೆಗೆ ಇನ್ನೂ ಆರ್ಹತೆ ಗಳಿಸಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ. ಬ್ಯಾಂಕ್ ಖಾತೆಯನ್ನು ಮಾಹಿತಿ ಸಮರ್ಪಕವಾಗಿರದ ಕಾರಣ ಕೂಲಿ ಪಾವತಿಯ ಅನೇಕ ವಹಿವಾಟುಗಳು ತಿರಸ್ಕೃತಗೊಂಡಿವೆ. ಫಲಾನುಭವಿಗಳು ನಿರಂತರವಾಗಿ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಬದಲಾಯಿಸುತ್ತಿರೋದು ಹಾಗೂ ಹೊಸ ಖಾತೆ ಸಂಖ್ಯೆಯನ್ನು ಅಪ್ಡೇಟ್ ಮಾಡದ ಕಾರಣ ಎಬಿಪಿಎಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎಂದು ಸರ್ಕಾರ ತಿಳಿಸಿದೆ.
ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್ ) ಪ್ರಗತಿಯನ್ನು ಪರಿಶೀಲಿಸಲಾಗಿದೆ. ಹಾಗೆಯೇ ಕೂಲಿ ಪಾವತಿಗೆ ಎನ್ ಎಸಿಎಚ್ ಹಾಗೂ ಎಬಿಪಿಎಸ್ ಮಾರ್ಗಗಳು ಸೇರಿದಂತೆ ಮಿಶ್ರ ವಿಧಾನಗಳನ್ನು ಅನುಸರಿಸುವ ಕ್ರಮವನ್ನು 2023ರ ಡಿಸೆಂಬರ್ 31ರ ತನಕ ಅಥವಾ ಮುಂದಿನ ಆದೇಶದ ತನಕ ಅನುಸರಿಸಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ. ಒಂದು ವೇಳೆ ಸೆಪ್ಟೆಂಬರ್ 1ರಿಂದ ಎಂಜಿಎನ್ ಆರ್ ಇಜಿ ಕಾರ್ಮಿಕರಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಕಡ್ಡಾಯ ಮಾಡಿದ್ರೆ ಶೇ.57.75 ಮಂದಿ ಮಾತ್ರ ಇದರಡಿ ಪಾವತಿ ಸ್ವೀಕರಿಸಲು ಅರ್ಹತೆ ಗಳಿಸಿದ್ದಾರೆ.
ಆಧಾರ್ ಅಪ್ಡೇಟ್ ಮಾಡಲು ದಾಖಲೆ ಹಂಚಿಕೊಳ್ಳುವಂತೆ ನಿಮ್ಗೆ ಇ-ಮೇಲ್ ಬಂದಿದೆಯಾ? ಹಾಗಿದ್ರೆ ಎಚ್ಚರ!
ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಅಂದ್ರೆ ಹೊಸತೇನೂ ಅಲ್ಲ, ಹಣವನ್ನು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮೆ ಮಾಡುವುದು. ಇದು ಅತ್ಯಂತ ಯೋಜಿತ ಪ್ರಕ್ರಿಯೆಯಾಗಿದ್ದು, ಫಲಾನುಭವಿಗಳು, ಫೀಲ್ಡ್ ಸಿಬ್ಬಂದಿ ಹಾಗೂ ಎಲ್ಲ ಇತರ ಷೇರುದಾರರು ಇದರಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾರೆ. ಎಬಿಪಿಎಸ್ ಅನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಬಳಸಿಕೊಂಡು ಮಾಡುವ ಅತ್ಯಂತ ಪರಿಣಾಮಕಾರಿ ಪಾವತಿ ವಿಧಾನ ಎಂದು ಪರಿಗಣಿಸಲಾಗಿದೆ. ಈ ವಿಧಾನ ಪಾವತಿ ತಿರಸ್ಕೃತಗೊಳ್ಳುವ ಸಾಧ್ಯತೆಯನ್ನು ತಡೆಯುತ್ತದೆ. ಹಾಗೆಯೇ ಇದು ಫಲಾನುಭವಿಗಳಿಗೆ ಅವರ ಕೂಲಿ ಪಾವತಿ ನಿಗದಿತ ಸಮಯಕ್ಕೆ ಆಗುವಂತೆ ನೋಡಿಕೊಳ್ಳುತ್ತದೆ ಕೂಡ.
ಎಬಿಪಿಎಸ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಎಂಜಿಎನ್ ಆರ್ ಇಜಿ ಡೇಟಾಬೇಸ್ ನಲ್ಲಿ ಒಮ್ಮೆ ಆಧಾರ್ ಅಪ್ಡೇಟ್ ಮಾಡಿದ್ರೆ ಸಾಕು, ಫಲಾನುಭವಿಗಳು ಸ್ಥಳ ಬದಲಾವಣೆ ಅಥವಾ ಬ್ಯಾಂಕ್ ಖಾತೆ ಬದಲಾವಣೆಯನ್ನು ಅಪ್ಡೇಟ್ ಮಾಡಬೇಕಾದ ಅಗತ್ಯವಿಲ್ಲ. ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಒಂದು ವೇಳೆ ಫಲಾನುಭವಿಗಳು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಇಂಥ ಪ್ರಕರಣಗಳು ಎಂಜಿಎನ್ ಆರ್ ಇಯಲ್ಲಿ ಕಡಿಮೆ. ಆದರೂ ಇದ್ದ ಸಂದರ್ಭದಲ್ಲಿ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡುವ ಅವಕಾಶವನ್ನು ಫಲಾನುಭವಿಗಳಿಗೆ ನೀಡಲಾಗಿದೆ.
ಆಧಾರ್ ಜೋಡಣೆ, ತಿದ್ದುಪಡಿಗೆ ಹಣ ವಸೂಲಿ: ಜನಸಾಮಾನ್ಯರ ಆಕ್ರೋಶ..!
ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಹೇಗೆ ನೆರವು ನೀಡುತ್ತೆ?
ಎಬಿಪಿಎಸ್ ವ್ಯವಸ್ಥೆಯಲ್ಲಿ ಹಣ ನೇರವಾಗಿ ಫಲಾನುಭವಿ ಖಾತೆಗೆ ಜಮೆಯಾಗುವ ಕಾರಣ ಭ್ರಷ್ಟಾಚಾರದ ಸಾಧ್ಯತೆ ಕಡಿಮೆ. ಆದರೆ, ಸದ್ಯ ಎಂಜಿಎನ್ ಆರ್ ಇಜಿಎ ಪ್ರಸ್ತುತ ಈ ವ್ಯವಸ್ಥೆಯನ್ನು ಅನುಸರಿಸುತ್ತಿಲ್ಲ. ಬದಲಿಗೆ ಆಧಾರ್ ಆಧಾರಿತ ಪಾವತಿ ಬ್ರಿಜ್ ವ್ಯವಸ್ಥೆ ಅನುಸರಿಸುತ್ತಿದೆ. ಎಬಿಪಿಎಸ್ ಪಾವತಿಗೆ ಅರ್ಹತೆ ಹೊಂದಿಲ್ಲ ಎಂಬ ಕಾರಣಕ್ಕೆ ಯಾವ ಕಾರ್ಮಿಕನಿಗೂ ಕೂಡ ಉದ್ಯೋಗ ನಿರಾಕರಿಸದಂತೆ ಕೇಂದ್ರ ಸರ್ಕಾರ ಈಗಾಗಲೇ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ.