ಬ್ಯಾಂಕ್‌ಗಳ ತವರೂರು ದ. ಕನ್ನಡ ಜಿಲ್ಲೆ: ದಶಮಿಯಂದು ಆರಂಭವಾಗಿತ್ತು ವಿಜಯಾ ಬ್ಯಾಂಕ್
ವಿಜಯದಶಮಿಯಂದು ಆರಂಭವಾಗಿತ್ತು ವಿಜಯಾ ಬ್ಯಾಂಕ್ ಯುಗಾಂತ್ಯ| ಬ್ಯಾಂಕ್‌ಗಳ ತವರೂರು ದ. ಕನ್ನಡ ಜಿಲ್ಲೆ:
ನವದೆಹಲಿ[ಏ.01]: ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಗೊಳ್ಳುವ ಮೂಲಕ ವಿಜಯಾ ಬ್ಯಾಂಕ್ ಯುಗಾಂತ್ಯ ವಾಗಿದೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂ ರು,ಎಸ್‌ಬಿಐನಲ್ಲಿ ವಿಲೀನಗೊಂಡಿತ್ತು. ಇದೀಗ ವಿಜಯಾ ಬ್ಯಾಂಕ್ ಬಿಒಬಿಯಲ್ಲಿ ವಿಲೀನಗೊಂಡು ಕರ್ನಾಟಕದಲ್ಲಿ ಜನ್ಮತಾಳಿದ್ದ ಮತ್ತೊಂದು ಬ್ಯಾಂಕ್ ಇತಿಹಾಸದ ಪುಟ ಸೇರಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ವಿಜಯಾ ಬ್ಯಾಂಕ್ 1931 ಅ.23ರಂದು ಸ್ಥಾಪನೆಗೊಂಡಿತ್ತು. ಅತ್ತಾವರ ಬಾಲಕೃಷ್ಣ ಶೆಟ್ಟಿ ನೇತೃತ್ವದ ರೈತರ ಗುಂಪು ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಬ್ಯಾಂಕ್ ಸ್ಥಾಪಿಸಿತು. ವಿಜಯ ದಶಮಿಯ ದಿನ ಸ್ಥಾಪನೆ ಆಗಿದ್ದರಿಂದ ವಿಜಯಾ ಬ್ಯಾಂಕ್ ಎಂದು ಹೆಸರಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ರೈತರ ಅವಶ್ಯಕತೆಗಳಿಗೆ ಸುಲಭ ಹಣಕಾಸಿನ ಲಭ್ಯತೆ ದೃಷ್ಟಿಯಿಂದ ಸ್ಥಾಪನೆ ಆಗಿತ್ತು. 1958ರಲ್ಲಿ ಶೆಡ್ಯೂಲ್ಡ್ ಬ್ಯಾಂಕ್ ಆಗಿ, 1980ರ ಏ.15ರಂದು ರಾಷ್ಟ್ರೀಕರಣಗೊಂಡಿತು. 1960-1968ರ ಅವಧಿಯಲ್ಲಿ ಇದು 9 ಸಣ್ಣ ಬ್ಯಾಂಕ್‌ಗಳನ್ನು ತನ್ನೊಳಗೆ ವಿಲೀನ ಮಾಡಿಕೊಂಡು ಅಖಿಲ ಭಾರತ ಮಟ್ಟದ ಬ್ಯಾಂಕಾಗಿದ್ದು, ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿ 2031 ಶಾಖೆಗಳನ್ನು ಹೊಂದಿದೆ
ಬ್ಯಾಂಕ್‌ಗಳ ತವರೂರು ದಕ್ಷಿಣ ಕನ್ನಡ ಜಿಲ್ಲೆ
ದೇಶದ ಅಗ್ರಗಣ್ಯ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕ್ (1906), ಕಾರ್ಪೋರೇಷನ್ ಬ್ಯಾಂಕ್ (1906), ಕರ್ನಾಟಕ ಬ್ಯಾಂಕ್ (1924), ಸಿಂಡಿಕೇಟ್ ಬ್ಯಾಂಕ್ (1925), ವಿಜಯಾ ಬ್ಯಾಂಕ್ (1931)ಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮತಾಳಿದ ಬ್ಯಾಂಕ್‌ಗಳಾಗಿವೆ.