ಮಂಗಳೂರು[ಜ.27]: ಡಿಜಿಟಲ್‌ ತಂತ್ರಜ್ಞಾನಕ್ಕೆ ಗ್ರಾಮೀಣ ಭಾರತವೂ ಈಗ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮಾಂತರ ಪ್ರದೇಶ ಬೊಂಡಾಲದಲ್ಲಿ ಆನ್‌ಲೈನ್‌ ರೈತಸಂತೆಯೊಂದು ಕಳೆದ ನಾಲ್ಕು ತಿಂಗಳಿಂದ ಸದ್ದಿಲ್ಲದೇ ನಡೆಯುತ್ತಿದೆ. ಉದ್ಯೋಗ ಬಿಟ್ಟು ಕೃಷಿಗೆ ಮರಳಿದ ಯುವ ಟೆಕ್ಕಿಗಳ ಸಾರಥ್ಯದಲ್ಲಿ ವೆಬ್‌ಸೈಟ್‌ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಮಾರುತ್ತಿದ್ದಾರೆ.

ಮಧ್ಯವರ್ತಿಗಳ ಕಾಟವಿಲ್ಲದೇ ರೈತರು ತಮ್ಮ ಉತ್ಪನ್ನಗಳನ್ನು https://www.localfarmers.in/ ವೆಬ್‌ಸೈಟ್‌ ಮೂಲಕ ಮಾರಾಟ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ರೈತರು ಮತ್ತು ಗ್ರಾಹಕರ ನಡುವೆ ಆನ್‌ಲೈನ್‌ ಸಂತೆ ಏರ್ಪಟ್ಟಿದ್ದು, ರೈತರಿಗೆ ಆರ್ಥಿಕ ಮತ್ತು ನೈತಿಕ ಬೆಂಬಲ ನೀಡುವ ಮೂಲಕ ಉತ್ಪನ್ನಗಳಿಗೆ ಆನ್‌ಲೈನ್‌ ವೇದಿಕೆ ಕಲ್ಪಿಸಲಾಗಿದೆ. ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ ಈ ವೇದಿಕೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದರಿಂದ ಪ್ರೇರಿತರಾಗಿ ಮುಂದೆ ಆ್ಯಪ್‌ ಆಧಾರಿತ ಮಾರುಕಟ್ಟೆಜಾರಿಗೆ ತರಲು ಈ ಯುವ ಪಡೆ ಸಿದ್ಧವಾಗುತ್ತಿದೆ.

ಕೆಲಸ ಬಿಟ್ಟು ಕೃಷಿಗೆ ಬಂದರು:

ಬೊಂಡಾಲ ಯತೀಶ್‌ ಶೆಟ್ಟಿ ಹಾಗೂ ಇವರ ಪತ್ನಿ ಶ್ರೀದೇವಿ ಡಿ.ಎನ್‌., ರಜತ್‌ ಶೆಟ್ಟಿಈ ಮೂವರು ಈ ವೆಬ್‌ಸೈಟ್‌ನ ರೂವಾರಿಗಳು. ಮೂವರು ಬೇರೆ ಬೇರೆ ಐಟಿ ಕಂಪನಿಗಳಲ್ಲಿ ಹಲವು ವರ್ಷ ಕೆಲಸ ನಿರ್ವಹಿಸಿ ಕೃಷಿಗೆ ಮರಳಿದವರು. ಮಧ್ಯವರ್ತಿಗಳ ಕಾಟದಿಂದ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗದೇ ತಮ್ಮನ್ನೂ ಸೇರಿ ಕೃಷಿಕರಿಗೆ ಆಗುತ್ತಿರುವ ಅನ್ಯಾಯ ಅರಿವಿಗೆ ಬಂದು ಈ ಸಾಹಸಕ್ಕೆ ಇಳಿದಿದ್ದಾರೆ. ತಂತ್ರಜ್ಞಾನದ ಬಗ್ಗೆ ಸ್ವತಃ ತಿಳಿದುಕೊಂಡಿರುವುದರಿಂದ ಯಾಕೆ ರೈತರಿಗೊಂದು ವ್ಯಾಪಾರ ವೇದಿಕೆ ಕಲ್ಪಿಸಬಾರದು ಎಂದು ಆರಂಭಿಸಿದ್ದೇ ಆನ್‌ಲೈನ್‌ ರೈತಸಂತೆ. ಸದ್ಯ ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನ ಕೆಲವು ಪರಿಸರದಲ್ಲಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಬೇರೆಬೇರೆ ಭಾಗದ ರೈತರನ್ನು ಸಂಪರ್ಕಿಸಿ ಕ್ಷೇತ್ರವನ್ನು ಇನ್ನೂ ವಿಸ್ತರಿಸುವ ಉದ್ದೇಶ ಇದೆ ಎಂದು ಹೇಳುತ್ತಾರೆ ವೆಬ್‌ಸೈಟ್‌ ರೂವಾರಿ ಬೊಂಡಾಲ ಯತೀಶ್‌ ಶೆಟ್ಟಿ.

ರೈತರು ಬೆಳೆದ ಬೆಳೆಗೆ ಲಾಭ ಕಡಿಮೆ. ನೇರ ಮಾರುಕಟ್ಟೆಇದ್ದರೆ ಸುಲಭವೆಂದು ಮೊದಲು ವಾಟ್ಸಾಪ್‌ ಗ್ರೂಪ್‌ ಮಾಡಿಕೊಂಡೆವು. ಈಗ ವೆಬ್‌ಸೈಟ್‌ ಮೂಲಕ ಮಾರಾಟಕ್ಕೆ ರೈತರಿಗೆ ವೇದಿಕೆ ಕಲ್ಪಿಸಿದ್ದೇವೆ. ಮುಂದೆ ಆ್ಯಪ್‌ ಮೂಲಕ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ದೂರ ದೂರದ ರೈತರನ್ನು ಸಂಪರ್ಕಿಸಿ ವೆಬ್‌ಸೈಟ್‌ಗೆ ನೋಂದಾಯಿಸಿ, ಅಲ್ಲಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಮಾಡಲು ಯೋಚಿಸಲಾಗುತ್ತಿದೆ.

-ಯತೀಶ್‌ ಶೆಟ್ಟಿ, ವೆಬ್‌ಸೈಟ್‌ನ ರೂವಾರಿ.

ವೆಬ್‌ಸೈಟ್‌ನಲ್ಲಿ ಏನಿದೆ?

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 25ಕ್ಕೂ ಅಧಿಕ ರೈತರು ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿಕೊಂಡ ರೈತರ ಪರಿಚಯ, ಅವರು ಏನೆಲ್ಲಾ ಬೆಳೆಯುತ್ತಾರೆ ಎಂಬ ಮಾಹಿತಿ, ದೂರವಾಣಿ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ವಿವರವಾಗಿ ಪ್ರದರ್ಶಿಸಲಾಗಿದೆ. ಗ್ರಾಹಕರು ರೈತರನ್ನು ನೇರವಾಗಿ ಸಂಪರ್ಕಿಸಬಹುದು, ಉತ್ಪನ್ನಗಳನ್ನು ಖರೀದಿಸಬಹುದು. ವಸ್ತುಗಳನ್ನು ಕೊಂಡ ಗ್ರಾಹಕರು ವೆಬ್‌ಸೈಟ್‌ ಮೂಲಕವೇ ಫೀಡ್‌ಬ್ಯಾಕ್‌ಗಳನ್ನು ನಮೂದಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ರೈತರಿಗೆ ಇನ್ನೊಂದು ಲಾಭವೆಂದರೆ, ವೆಬ್‌ಸೈಟ್‌ ಮೂಲಕ ಆರ್ಡರ್‌ ಬಂದ ಮೇಲೆ ಬೆಳೆಗಳನ್ನು ಕೊಯ್ಲು ಮಾಡಿ ಕಳುಹಿಸುವ ಅವಕಾಶವಿದೆ. ರೈತರಿಗೆ ಇಲ್ಲಿ ಯಾವುದೇ ನೋಂದಣಿ ಶುಲ್ಕವಿಲ್ಲ, ನೇರವಾಗಿ ಮಾರಾಟ ಮಾಡಿದರೆ ಶೇ.2.5ರಿಂದ 5ರಷ್ಟುಹಣ ನೀಡಿದರೆ ಮುಗಿಯಿತು.

ರೈತರಿಗೆ ತುಂಬಾ ಅನುಕೂಲವಾಗಿದೆ. ರೈತರು ತಾವು ಬೆಳೆದದ್ದನ್ನು ತಾವೇ ಮಾರಾಟ ಮಾಡಲು ಸಾಧ್ಯವಾಗಿದೆ. ವೆಬ್‌ಸೈಟ್‌ ಮೂಲಕ ಸಾಮಾನ್ಯ ರೈತರನ್ನೂ ತಲುಪಲು ಸಾಧ್ಯವಾಗಿದೆ. ಒಂದೆಲಗ, ನುಗ್ಗೆಸೊಪ್ಪಿನಂತಹ ಸಣ್ಣ ಸಣ್ಣ ಉತ್ಪನ್ನಗಳೂ ಬೇಡಿಕೆ ಪಡೆದುಕೊಳ್ಳುತ್ತಿವೆ.

- ಪ್ರವೀಣ್‌ ಸರಳಾಯ, ಕೃಷಿಕರು

ಏನೆಲ್ಲಾ ಮಾರಾಟ?

ಕರಾವಳಿಯ ರೈತರು ಬೆಳೆಯುವ ತರಕಾರಿ, ಹಣ್ಣು ಹಂಪಲಗಳು ಹೈನು ಉತ್ಪನ್ನಗಳು ಇಲ್ಲಿ ಮಾರಾಟಗೊಳ್ಳುತ್ತಿವೆ. ನರ್ಸರಿ ಗಿಡಗಳು, ಬಾಳೆಕಾಯಿ, ಹಲಸು ಚಿಫ್ಸ್‌ ಸೇರಿದಂತೆ ಹಲವು ಗೃಹೋತ್ಪನ್ನಗಳು, ತುಪ್ಪ, ಜೇನುತುಪ್ಪ, ಕೊಬ್ಬರಿ ಎಣ್ಣೆ ಮೊದಲಾದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ತುಳುನಾಡ ಸಾವಯವ ಉತ್ಪಾದಕರು

ಆನ್‌ಲೈನ್‌ ಮಾರುಕಟ್ಟೆಹೊರತಾಗಿ ನೇರ ಮಾರುಕಟ್ಟೆಯಲ್ಲಿಯೂ ಇವರು ಭಾಗಿಯಾಗುತ್ತಾರೆ. ತುಳುನಾಡ ಸಾವಯವ ಉತ್ಪಾದಕರು ಎಂಬ ಹೆಸರಿನಲ್ಲಿ ಸಾವಯವ ಉತ್ಪನ್ನಗಳನ್ನು ಸ್ಟಾಲ್‌ ಮೂಲಕ ಮಾರಾಟ ಮಾಡುತ್ತಾರೆ. ಇವರೇ ಬೆಳೆದ ಬೆಳೆಗಳ ಉತ್ಪನ್ನ ಹಾಗೂ ರೈತರಿಂದ ಖರೀದಿಸಿದ ಉತ್ಪನ್ನಗಳನ್ನು ಮಂಗಳೂರಿನ ಕದ್ರಿ ಪಾರ್ಕ್ ಸೇರಿದಂತೆ ವಿವಿಧೆಡೆ ಮಾರಾಟ ಮಾಡುತ್ತಿದ್ದಾರೆ.

-ರಾಘವೇಂದ್ರ ಅಗ್ನಿಹೋತ್ರಿ