* ಡಿಐಸಿಜಿಸಿ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು* ಇದೇ ಅಧಿವೇಶನದಲ್ಲೇ ಮಂಡನೆ ಸಾಧ್ಯತೆ* ಬ್ಯಾಂಕ್‌ ಮುಚ್ಚಿದರೆ 90 ದಿನದಲ್ಲಿ .5 ಲಕ್ಷ ಠೇವಣಿ ಹಣ ವಾಪಸ್‌

ನವದೆಹಲಿ(ಜು.29): ಯಾವುದೇ ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡು, ಆರ್‌ಬಿಐನಿಂದ ವಹಿವಾಟು ನಿಷೇಧಕ್ಕೆ ಒಳಪಟ್ಟಸಂದರ್ಭದಲ್ಲಿ ಗ್ರಾಹಕರನ್ನು ಆರ್ಥಿಕ ಸಮಸ್ಯೆಯಿಂದ ಕಾಪಾಡುವ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದಾಗಿ ಯಾವುದೇ ಬ್ಯಾಂಕ್‌ ಆರ್ಥಿಕ ಸಂಕಷ್ಟದಿಂದ ಮುಚ್ಚಿದರೆ ಅಲ್ಲಿನ ಠೇವಣಿದಾರರಿಗೆ 5 ಲಕ್ಷ ರು.ವರೆಗಿನ ಠೇವಣಿಗೆ ರಕ್ಷಣೆ ಸಿಗಲಿದೆ. ವಿಮಾ ರೂಪದಲ್ಲಿ 90 ದಿನದೊಳಗೆ 5 ಲಕ್ಷ ರು.ವರೆಗಿನ ಹಣ ಗ್ರಾಹಕರಿಗೇ ವಾಪಸು ಬರಲಿದೆ.

ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲವೆ? ಹಾಗಾದ್ರೆ ಈ 5 ವಿಷಯ ತಿಳಿದಿರಲಿ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಐಸಿಜಿಸಿ (ಡೆಪಾಸಿಟ್‌ ಇನ್ಷೂರೆನ್ಸ್‌ ಆ್ಯಂಡ್‌ ಕ್ರೆಡಿಟ್‌ ಗ್ಯಾರಂಟಿ ಕಾರ್ಪೊರೇಷನ್‌) ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಲಾಯಿತು. ಈ ಕುರಿತ ಮಸೂದೆಯನ್ನು ಮುಂಗಾರು ಅಧಿವೇಶನದಲ್ಲೇ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ.

ಏನು ಲಾಭ?:

ಪಿಎಂಸಿ ಸೇರಿದಂತೆ ಹಲವು ಬ್ಯಾಂಕ್‌ಗಳು ಇತ್ತೀಚೆಗೆ ನಾನಾ ಕಾರಣದಿಂದ ಸಂಕಷ್ಟಕ್ಕೆ ಸಿಕ್ಕಿದ್ದವು. ಪರಿಣಾಮ ಅವುಗಳ ವಹಿವಾಟಿನ ಮೇಲೆ ಆರ್‌ಬಿಐ ನಿಷೇಧ ಹೇರಿತ್ತು. ಹಾಲಿ ಕಾಯ್ದೆಗಳ ಅನ್ವಯ, ಇಂಥ ಬ್ಯಾಂಕ್‌ಗಳ ಲೈಸೆನ್ಸ್‌ ರದ್ದಾಗಿ, ಅವುಗಳ ಆಸ್ತಿ ನಗದೀಕರಣದವರೆಗೂ ಗ್ರಾಹಕರಿಗೆ ಠೇವಣಿ ಹಣ ಹಿಂದಕ್ಕೆ ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಗ್ರಾಹಕರು ಭಾರೀ ಸಂಕಷ್ಟಪಡಬೇಕಾಗಿತ್ತು.

ಕರ್ಣಾಟಕ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕದಲ್ಲಿ 106.08 ಕೋಟಿ ರು. ಲಾಭ

ಈ ಹಿನ್ನೆಲೆಯಲ್ಲಿ ಇದೀಗ ಕಾಯ್ದೆಗೆ ತಿದ್ದುಪಡಿ ತಂದು, ಸಂಕಷ್ಟಕ್ಕೆ ಒಳಗಾದ ಬ್ಯಾಂಕ್‌ಗಳು, ಆರ್‌ಬಿಐನಿಂದ ಮಾರಟೋರಿಯಂಗೆ ಒಳಪಟ್ಟ90 ದಿನಗಳ ಒಳಗೇ 5 ಲಕ್ಷ ರು.ವರೆಗೆ ಹಣ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

ಕಳೆದ ವರ್ಷ ಬ್ಯಾಂಕ್‌ಗಳು ನಷ್ಟಕ್ಕೆ ಗುರಿಯಾದ ಸಂದರ್ಭದಲ್ಲಿ ಗ್ರಾಹಕರ ಠೇವಣಿಗೆ ನೀಡುವ ವಿಮಾ ಮೊತ್ತವನ್ನು ಕೇಂದ್ರ ಸರ್ಕಾರ 5 ಪಟ್ಟು ಹೆಚ್ಚಿಸುವ ಮೂಲಕ 5 ಲಕ್ಷಕ್ಕೆ ಏರಿಸಿತ್ತು.