ನವದೆಹಲಿ[ಸೆ.17]: ಸೌದಿ ಅರೇಬಿಯಾದಲ್ಲಿನ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಸಂಸ್ಕರಣಾ ಘಟಕದ ಮೇಲೆ ಉಗ್ರರು ಡ್ರೋನ್‌ ದಾಳಿ ನಡೆಸಿರುವುದರಿಂದ ತೈಲೋತ್ಪಾದನೆ ಕುಂಠಿತವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರುಗತಿಯಲ್ಲಿದೆ. ಹೀಗಾಗಿ ಮುಂದಿನ 15 ದಿನಗಳಲ್ಲಿ ದೇಶದಲ್ಲಿ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ 5ರಿಂದ 6 ರು.ನಷ್ಟುಹೆಚ್ಚಾಗಬಹುದು ಎಂದು ಖಾಸಗಿ ಸಂಸ್ಥೆಗಳು ಭವಿಷ್ಯ ನುಡಿದಿವೆ.

ಸೋಮವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 72 ಡಾಲರ್‌ಗೆ ತಲುಪಿದೆ. ಇದು ಹಿಂದಿನ ದರಕ್ಕಿಂತ ಶೇ.20ರಷ್ಟುದುಬಾರಿ.

ಸೌದಿ ಪ್ರಮುಖ ತೈಲ ನಿಕ್ಷೇಪದ ಮೇಲೆ ಡ್ರೋಣ್ ದಾಳಿ!

ಆದರೆ, ಸೌದಿ ಅರೇಬಿಯಾದಲ್ಲಿ ಉತ್ಪಾದನೆ ಕಡಿತವಾಗಿದ್ದರೂ ಅದರಿಂದ ಭಾರತದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ. ಭಾರತ ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ದೇಶ. ನಮಗೆ ಅತಿ ಹೆಚ್ಚು ತೈಲ ಸರಬರಾಜು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾ ನಂ.2 ಸ್ಥಾನದಲ್ಲಿದೆ.

ಸೌದಿ ಸರ್ಕಾರದ ಅರಾಮ್ಕೋ ಅಧಿಕಾರಿಗಳೇ ಭಾರತಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ