ಮುಂಬೈ(ಜ.08): ಇರಾನ್-ಅಮೆರಿಕ ಯುದ್ಧೋನ್ಮಾದ ಜಗತ್ತನ್ನು ಆತಂಕಕ್ಕೀಡು ಮಾಡಿದೆ. ಈ ಎರಡು ರಾಷ್ಟ್ರಗಳ ನಡುವಿನ ವೈಮನಸ್ಸು ಬೇರೆ ದೇಶಗಳಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದೆ.

ಅದರಂತೆ  ಇರಾನ್-ಅಮೆರಿಕ ನಡುವಿನ ಯುದ್ಧ ಭೀತಿಯ ಪರಿಣಾಮ ಕರೆನ್ಸಿ ವಿನಿಮಯ ಮಾರುಕಟ್ಟಿಯಲ್ಲಿ ಭಾರತದ ರೂಪಾಯಿ ದುರ್ಬಲ ವಹಿವಾಟು ಆರಂಭಿಸಿದೆ.

ಮಂಗಳವಾರದ ಅಂತ್ಯದಲ್ಲಿ ಡಾಲರ್ ಎದುರು 71.82 ಕ್ಕೆ ವಿನಿಮಯಗೊಂಡಿದ್ದ ರೂಪಾಯಿ, ಇಂದು 72ರ ಮಟ್ಟಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ರೂಪಾಯಿ ಮೌಲ್ಯ 20 ಪೈಸೆ ಪತನಗೊಂಡು 72.02ಕ್ಕೆ ಇಳಿದಿದೆ.  

ಯುದ್ಧ ಭೀತಿ ತಂದ ಫಜೀತಿ: ಪೆಟ್ರೋಲ್ ಬೆಲೆ ದಿಢೀರ್ ಏರಿಕೆ!

ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕೂಡ ಗಗನಕ್ಕೇರಿದ್ದು, ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ಕಚ್ಚಾ ತೈಲ ಬೆಲೆ  ಬ್ಯಾರಲ್ ಗೆ 70 ಡಾಲರ್ ಗಳಿಗೆ ಏರಿಕೆ ಕಂಡಿದೆ.

ಈ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಭಾರೀ ಏರಿಕೆಯ ಆತಂಕ ಎದುರಾಗಿದ್ದು, ಇದರಿಂದ ಜನಸಾಮಾನ್ಯ ಚಿಂತಾಕ್ರಾಂತನಾಗಿರುವುದು ಸ್ಪಷ್ಟವಾಗಿದೆ.

ಷೇರು ಮಾರುಕಟ್ಟೆ ಕುಸಿತ:

ಇನ್ನು ಷೇರು ಮಾರುಕಟ್ಟೆ ಕೂಡ ನಷ್ಟ ಅನುಭವಿಸುಂತಾಗಿದ್ದು, ಅಂತಾರಾಷ್ಟ್ರೀಯ ಪ್ರತಿಕೂಲ ಸನ್ನಿವೇಶಗಳ ಜೊತೆಗೆ, ಜಿಡಿಪಿ ಮೇಲಿನ ಸರ್ಕಾರದ ಅಂದಾಜುಗಳು ಹೂಡಿಕೆದಾರರಿಗೆ ಹೊಡೆತ ನೀಡಿವೆ. 

ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 350 ಅಂಕಗಳಷ್ಟು ಕುಸಿತ ಕಂಡಿದ್ದು, ನಿಫ್ಟಿ ಕೂಡ 12 ಸಾವಿರ ಮಟ್ಟದಿಂದ ಕೆಳಗೆ ಇಳಿದಿದೆ. 

ಬ್ಯಾಂಕಿಂಗ್, ಆಟೋಮೊಬೈಲ್ ಕ್ಷೇತ್ರದ ಷೇರುಗಳ ಮೌಲ್ಯ ಕುಸಿದಿದ್ದು, ಯುದ್ಧ ಭೀತಿ ಭಾರತದ ವಾಣಿಜ್ಯ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುವುದು ಖಚಿತ ಎಂಬಂತಾಗಿದೆ.