ನವದೆಹಲಿ(ಅ.19): ಕೊರೋನಾ ವೈರಸ್‌ ಹಾವಳಿಯಿಂದಾಗಿ ಚಿನ್ನದ ಬೇಡಿಕೆ ಕಡಿಮೆ ಆದ ಪರಿಣಾಮವಾಗಿ ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಿನ್ನದ ಆಮದು ಪ್ರಮಾಣ ಶೇ.57ರಷ್ಟುಇಳಿಕೆ ಆಗಿದ್ದು, ಚಿನ್ನ ಅಮದು ಮೌಲ್ಯ 50,658 ಕೋಟಿ ರು.ಗೆ ತಗ್ಗಿದೆ.

ಕಳೆದ ವರ್ಷದ ಮೊದಲಾರ್ಧದಲ್ಲಿ ಭಾರತ 1,10,259 ಕೋಟಿ ರು. ಮೊತ್ತದ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಅದೇ ರೀತಿ ಬೆಳ್ಳಿಯ ಆಮದು ಪ್ರಮಾಣ ಶೇ.63.4ರಷ್ಟುಇಳಿಕೆ ಕಂಡಿದ್ದು, ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ 5,543 ಕೋಟಿ ರು. ಮೊತ್ತದ ಬೆಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಚಿನ್ನದ ಆಮದು ಹೆಚ್ಚಾದಂತೆ ರಪ್ತು ಪ್ರಮಾಣ ಕಡಿಮೆ ಆಗಿ ವಿತ್ತೀಯ ಕೊರತೆಗೆ ಕಾರಣವಾಗುತ್ತದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಚಿನ್ನ ಮತ್ತು ಬೆಳ್ಳಿ ಆಮದು ಕಡಿಮೆ ಆಗಿರುವುದರಿಂದ ದೇಶದ ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಆಮದು ಮತ್ತು ರಪ್ತಿನ ನಡುವಿನ ವ್ಯತ್ಯಾಸ ಒಂದು ವರ್ಷದ ಹಿಂದೆ ಇದ್ದ 6.58 ಲಕ್ಷ ಕೋಟಿ ರು.ಗೆ ಹೋಲಿಸಿದರೆ ಏಪ್ರಿಲ್‌- ಸೆಪ್ಟೆಂಬರ್‌ ಅವಧಿಯಲ್ಲಿ 1.73 ಲಕ್ಷ ಕೋಟಿ ರು.ಗೆ ಇಳಿಕೆ ಆಗಿದೆ.

ಭಾರತ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶವಾಗಿದ್ದು, ಪ್ರತಿ ವರ್ಷ ಸುಮಾರು 800 ರಿಂದ 900 ಟನ್‌ನಷ್ಟುಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ.