ಮುಂಬೈ [ಜ.25]:  2020ರ ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ (ಕಾರ್ಪೋರೆಟ್‌ ಮತ್ತು ಆದಾಯ ತೆರಿಗೆ) ಸಂಗ್ರಹದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. 

ಬಹುತೇಕ ನಿಶ್ಚಿತ ಎನ್ನಲಾದ ಈ ಬೆಳವಣಿಗೆ ಖಚಿತಪಟ್ಟಲ್ಲಿ ಅದು ಕಳೆದ 2 ದಶಕಗಳಲ್ಲೇ ಮೊದಲ ಬಾರಿಗೆ ನೇರ ತೆರಿಗೆ ಸಂಗ್ರಹದಲ್ಲಿನ ಇಳಿಕೆಯಾಗಲಿದೆ ಎಂದು ವರದಿಯೊಂದು ಹೇಳಿದೆ. ಸರ್ಕಾರದ ವಾರ್ಷಿಕ ಆದಾಯ ನಿರೀಕ್ಷೆಯಲ್ಲಿ ಶೇ.80ರಷ್ಟುಪಾಲು ನೇರ ತೆರಿಗೆಯದ್ದೇ ಆಗಿರುವ ಕಾರಣ, ಸಹಜವಾಗಿಯೇ ಈ ಬೆಳವಣಿಗೆ ವಿವಿಧ ಯೋಜನೆಗಳ ಜಾರಿಗೆ ತೆರಿಗೆ ಸಂಗ್ರಹವನ್ನೇ ನಂಬಿಕೊಂಡಿರುವ ಕೇಂದ್ರ ಸರ್ಕಾರಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ತೆರಿಗೆ ಇಲಾಖೆಯ 10ಕ್ಕೂ ಹೆಚ್ಚು ಅಧಿಕಾರಿಗಳನ್ನು ಸಂದರ್ಶಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂಶಗಳಿವೆ.

ವಾಸ್ತವವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 13.5 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹದ ಗುರಿ ಹಾಕಿಕೊಂಡಿತ್ತು. ಇದು ಹಿಂದಿನ ಹಣಕಾಸು ವರ್ಷದಲ್ಲಿನ ನೇರ ತೆರಿಗೆ ಸಂಗ್ರಹಕ್ಕಿಂತ ಶೇ.17ರಷ್ಟುಹೆಚ್ಚಾಗಿತ್ತು. ಆದರೆ ಆರ್ಥಿಕ ಹಿಂಜರಿಕೆಯ ಪರಿಣಾಮ ಬೇಡಿಕೆ ಕಡಿಮೆಯಾಗಿರುವುದು ಉದ್ಯಮ ವಲಯದ ಮೇಲೆ ಪರಿಣಾಮ ಬೀರಿದೆ. ಇದು ಪರೋಕ್ಷವಾಗಿ ಹೊಸ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿಯೇ ಪ್ರಸಕ್ತ ವರ್ಷದ ಜಿಡಿಪಿ ದರ ಶೇ.5ರಷ್ಟಿರಬಹುದು. ಇದು ಕಳೆದ 11 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಗತಿ ದರ ಎಂದು ಇತ್ತೀಚೆಗಷ್ಟೇ ಸರ್ಕಾರದ ವರದಿ ಹೇಳಿತ್ತು.

ಈ ಎಲ್ಲಾ ಬೆಳವಣಿಗೆ ಸಹಜವಾಗಿಯೇ ಇದು ನೇರ ತೆರಿಗೆ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. 2020ರ ಜ.23ರವರೆಗೆ ಕೇವಲ 7.3 ಲಕ್ಷ ಕೋಟಿ ರು.ನಷ್ಟುಮಾತ್ರವೇ ನೇರ ತೆರಿಗೆ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ತೆರಿಗೆಗಿಂತ ಶೇ.5.5ರಷ್ಟುಕಡಿಮೆ ಎಂದು ವರದಿ ಹೇಳಿದೆ.

ಕೇಂದ್ರ ಬಜೆಟ್ 2020: ಆದಾಯ ತೆರಿಗೆ ಸ್ತರದಲ್ಲಿ ಬದಲಾವಣೆ?...

ಹೀಗಾಗಿ ಹೊಸ ಗುರಿ ಮುಟ್ಟುವುದು ದೂರದ ಮಾತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಳೆದ ಸಾಲಿಗಿಂತಲೂ ಕಡಿಮೆ ನೇರ ತೆರಿಗೆ ಸಂಗ್ರಹವಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 11.5 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹವಾಗಿತ್ತು. ಪ್ರಸಕ್ತ ವರ್ಷ ನೇರ ತೆರಿಗೆ ಸಂಗ್ರಹ ಕಳೆದ ವರ್ಷಕ್ಕಿಂತಲೂ ಶೇ.10ರಷ್ಟುಕಡಿಮೆಯಾಗುವ ಸಾಧ್ಯತೆ ಇದೆ ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಆರ್ಥಿಕ ಹಿಂಜರಿತದ ಜೊತೆಗೆ ಆರ್ಥಿಕತೆಗೆ ಚೇತರಿಕೆ ನೀಡಲು ಕೆಲ ತಿಂಗಳ ಹಿಂದೆ ಕೇಂದ್ರ ಸರ್ಕಾರ ಕಾರ್ಪೊರೆಟ್‌ ತೆರಿಗೆಯಲ್ಲಿ ಇಳಿಕೆ ಮಾಡಿದ್ದು ಕೂಡಾ ನೇರ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಲು ಕಾರಣವಾಗಿದೆ ಎಂದು ವರದಿ ಹೇಳಿದೆ.