ಮುಂಬೈ [ಮಾ.14]:  ವಿಶ್ವಾದ್ಯಂತ ವ್ಯಾಪಿಸಿರುವ ಕೊರೋನಾ ವೈರಸ್‌ ಹಾಗೂ ಅದರಿಂದ ಆರ್ಥಿಕತೆ ಮೇಲಾಗುತ್ತಿರುವ ಘೋರ ಪರಿಣಾಮಗಳಿಗೆ ಷೇರುಪೇಟೆ ಶುಕ್ರವಾರವೂ ಬೆಚ್ಚಿಬಿದ್ದಿದೆ. ಗುರುವಾರ ಐತಿಹಾಸಿಕ ದಾಖಲೆಯ 2919 ಅಂಕ ಕುಸಿದಿದ್ದ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, ಶುಕ್ರವಾರ ಆರಂಭದಲ್ಲೇ ಮಹಾಕುಸಿತ ಅನುಭವಿಸಿದೆ. ವಹಿವಾಟು ಆರಂಭವಾದ 15 ನಿಮಿಷಗಳಲ್ಲಿ 3389 ಅಂಕಗಳಷ್ಟುಇಳಿಕೆಯನ್ನು ಸೆನ್ಸೆಕ್ಸ್‌ ಕಾಣುತ್ತಿದ್ದಂತೆ, ‘ಸರ್ಕಿಟ್‌ ಬ್ರೇಕ್‌’ ಆಗಿ ಷೇರು ವಹಿವಾಟು 45 ನಿಮಿಷ ಸ್ಥಗಿತಗೊಂಡಿದೆ. ಬಳಿಕ ಮಾರುಕಟ್ಟೆಪುನಾರಂಭವಾಗಿ, ಅಚ್ಚರಿಯ ರೀತಿಯಲ್ಲಿ ಸೆನ್ಸೆಕ್ಸ್‌ ಮೇಲೆದ್ದು 1325 ಅಂಕಗಳಷ್ಟುಏರಿಕೆ ದಾಖಲಿಸಿದೆ.

ಸೆನ್ಸೆಕ್ಸ್‌ ಮಾತ್ರವೇ ಅಲ್ಲದೆ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಯಲ್ಲೂ ಸರ್ಕಿಟ್‌ ಬ್ರೇಕ್‌ ಆಗಿದೆ. ಈ ರೀತಿ ಆಗುತ್ತಿರುವುದು 12 ವರ್ಷಗಳಲ್ಲಿ ಇದೇ ಮೊದಲು. 2008ರ ಜ.22ರಂದು ಸರ್ಕಿಟ್‌ ಬ್ರೇಕ್‌ ಆಗಿತ್ತು.

ಶುಕ್ರವಾರ ವಹಿವಾಟಿನ ಆರಂಭದಲ್ಲೇ ಸೆನ್ಸೆಕ್ಸ್‌ 3389 ಅಂಕ ಕುಸಿದಿದ್ದರಿಂದ ಹೂಡಿಕೆದಾರರಿಗೆ 13 ಲಕ್ಷ ಕೋಟಿ ರು. ನಷ್ಟವಾಗಿತ್ತು. ಬಳಿಕ ಚೇತರಿಸಿಕೊಂಡಿದ್ದರಿಂದ ನಷ್ಟದ ಬದಲು ಹೂಡಿಕೆದಾರರಿಗೆ 3.55 ಲಕ್ಷ ಕೋಟಿ ರು. ಲಾಭವಾಗಿದೆ. ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್‌ 3389 ಅಂಕ ಕುಸಿದಿದ್ದು ಇತಿಹಾಸದಲ್ಲಿ ಇದೇ ಮೊದಲು.

ಕರ್ನಾಟಕ ಬ್ಯಾಂಕ್ ಸೇಫ್, ಗ್ರಾಹಕರಲ್ಲಿ ಆತಂಕ ಬೇಡ; MD ಮಹಬಲೇಶ್ವರ್!

ಶುಕ್ರವಾರ ಬೆಳಗ್ಗೆ ಷೇರುಪೇಟೆ ಆರಂಭವಾಗುತ್ತಿದ್ದಂತೆ ಷೇರು ಸೂಚ್ಯಂಕಗಳು ಶೇ.10ರಷ್ಟುಇಳಿಕೆ ಕಂಡವು. ಹೀಗಾಗಿ ತನ್ನಿಂತಾನೆ 45 ನಿಮಿಷಗಳ ಕಾಲ ಪೇಟೆ ಸ್ತಬ್ಧವಾಯಿತು. ಒಂದು ಹಂತದಲ್ಲಿ ಸೆನ್ಸೆಕ್ಸ್‌ 29,388ಕ್ಕೆ ಇಳಿಕೆಯಾಗಿತ್ತು. ದಿನದಂತ್ಯಕ್ಕೆ 1325.34 ಅಂಕಗಳೊಂದಿಗೆ 34,103.48 ಅಂಕಗಳಲ್ಲಿ ವಹಿವಾಟು ಮುಗಿಸಿತು. ಒಟ್ಟಾರೆ ದಿನವಿಡೀ ಸೆನ್ಸೆಕ್ಸ್‌ 5380 ಅಂಕಗಳಷ್ಟುಹೊಯ್ದಾಡಿತು. ನಿಫ್ಟಿ365.05 ಅಂಕ ಏರಿಕೆ ಕಂಡು 9955ರಲ್ಲಿ ದಿನವನ್ನು ಮುಗಿಸಿತು. ಒಂದು ಹಂತದಲ್ಲಿ 8,555ಕ್ಕೆ ಇಳಿಕೆಯಾಗಿತ್ತು.

ಸೆನ್ಸೆಕ್ಸ್‌ ಸೂಚ್ಯಂಕದಲ್ಲಿನ ಬಹುತೇಕ ಷೇರುಗಳು ಏರಿಕೆ ಕಂಡವು. ಅತಿ ಹೆಚ್ಚು ಏರಿಕೆಯಾದ ಷೇರು ಎಸ್‌ಬಿಐನದ್ದಾಗಿತ್ತು. ಗುರುವಾರ ಶೇ.13ರಷ್ಟುಕುಸಿದಿದ್ದ ಎಸ್‌ಬಿಐ ಶುಕ್ರವಾರ ಅಷ್ಟೇ ಏರಿಕೆ ದಾಖಲಿಸಿತು.

ಸರ್ಕಿಟ್‌ ಬ್ರೇಕ್‌ ಏಕೆ?

ಷೇರು ಸೂಚ್ಯಂಕಗಳು ಭಾರಿ ಪ್ರಮಾಣದಲ್ಲಿ ಕುಸಿಯುವುದನ್ನು ತಡೆಯಲೆಂದೇ ಷೇರುಪೇಟೆಯಲ್ಲಿ ಸರ್ಕಿಟ್‌ ಬ್ರೇಕ್‌ ವ್ಯವಸ್ಥೆ ಇದೆ. ಸೂಚ್ಯಂಕದಲ್ಲಿ ಶೇ.10, ಶೇ.15 ಹಾಗೂ ಶೇ.20ರಷ್ಟುಹೊಯ್ದಾಟ ಕಂಡುಬಂದಾಗ ಇವು ತನ್ನಿಂತಾನೆ ಚಾಲೂ ಆಗುತ್ತವೆ.

ಮಧ್ಯಾಹ್ನ 1ಕ್ಕಿಂತ ಮೊದಲು ಷೇರು ಸೂಚ್ಯಂಕ ಶೇ.10ರಷ್ಟುಕುಸಿದರೆ, ವಹಿವಾಟು 45 ನಿಮಿಷ ಸ್ತಬ್ಧವಾಗುತ್ತದೆ. ಮಧ್ಯಾಹ್ನ 1ರಿಂದ 2.30ರ ಅವಧಿಯಲ್ಲಿ ಶೇ.10ರಷ್ಟುಕುಸಿತ ಕಂಡುಬಂದರೆ 15 ನಿಮಿಷ ವಹಿವಾಟು ನಿಲ್ಲುತ್ತದೆ. ಮಧ್ಯಾಹ್ನ 2.30 ನಂತರ ಎಷ್ಟೇ ಕುಸಿದರೂ ಸರ್ಕಿಟ್‌ ಬ್ರೇಕ್‌ ಇರುವುದಿಲ್ಲ.

ಅದೇ ರೀತಿ, ಮಧ್ಯಾಹ್ನ 1ರೊಳಗೆ ಸೂಚ್ಯಂಕ ಶೇ.15ರಷ್ಟುಕುಸಿತ ಅನುಭವಿಸಿದರೆ 1.45 ತಾಸು ಕಾಲ ವಹಿವಾಟು ನಿಲ್ಲಿಸಲಾಗುತ್ತದೆ. ಮಧ್ಯಾಹ್ನ 1ರಿಂದ 2ರೊಳಗೆ ಕುಸಿತ ಉಂಟಾದರೆ 45 ನಿಮಿಷ ಹಾಗೂ ಮಧ್ಯಾಹ್ನ 2ರ ನಂತರವಾದರೆ ವಹಿವಾಟನ್ನು ಸಂಪೂರ್ಣ ನಿಲ್ಲಿಸಲಾಗುತ್ತದೆ.

ಯಾವುದೇ ಹಂತದಲ್ಲಿ ಶೇ.20ರಷ್ಟುಕುಸಿತ ಕಂಡುಬಂದರೆ ಇಡೀ ದಿನದ ವಹಿವಾಟು ನಿಲ್ಲಿಸಲಾಗುತ್ತದೆ.