ನವದೆಹಲಿ [ಮಾ.02]: ಚೀನಾದಾದ್ಯಂತ ವ್ಯಾಪಿಸಿರುವ ಕೊರೋನಾ ಪರಿಣಾಮ ಉದ್ದಿಮೆಗಳೆಲ್ಲವೂ ಬಂದ್‌ ಆಗಿರುವುದರಿಂದ, ಸಿದ್ಧ ವಸ್ತುಗಳಿಗಾಗಿ ಚೀನಾದ ಕಚ್ಚಾವಸ್ತುಗಳ ಮೇಲೆ ಅವಲಂಬಿತವಾಗಿದ್ದ ಭಾರತದ ಉದ್ದಿಮೆಗಳು ಸಂಕಷ್ಟಕ್ಕೀಡಾಗಿವೆ. ಈ ಹಿನ್ನೆಲೆಯಲ್ಲಿ ಚೀನಾದಿಂದ ತರಿಸಿಕೊಳ್ಳಲಾಗುತ್ತಿದ್ದ ರೋಗ ನಿರೋಧಕ ಔಷಧಿಗಳು ಹಾಗೂ ಔಷಧಿ ತಯಾರಿಕೆಯ ಕಚ್ಚಾ ಸಾಮಗ್ರಿಗಳು, ರೆಫ್ರಿಜರೇಟರ್‌, ಟೆಕ್ಸ್‌ಟೈಲ್‌ಗಳು, ಸೆಮಿಕಂಡಕ್ಟರ್‌ ಸಾಧನಗಳು, ಉಕ್ಕು ಹಾಗೂ ಅಲ್ಯುಮಿನಿಯಂ ಸೇರಿದಂತೆ 1050ಕ್ಕೂ ಹೆಚ್ಚು ವಸ್ತುಗಳನ್ನು ಇತರೆ ರಾಷ್ಟ್ರಗಳಿಂದ ಅಮದು ಮಾಡಿಕೊಳ್ಳಲು ಸರ್ಕಾರ ಶೋಧ ಆರಂಭಿಸಿದೆ.

ಅಲ್ಲದೆ, ಭಾರತಕ್ಕೆ ಅಗತ್ಯವಿರುವ ಕೆಲ ವಸ್ತುಗಳನ್ನು ದೇಶೀಯವಾಗಿಯೇ ಉತ್ಪಾದಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ವಾಣಿಜ್ಯ ಹಾಗೂ ಉದ್ಯಮ ಸಚಿವ ಪಿಯೂಷ್‌ ಗೋಯೆಲ್‌ ಅವರು ಮುಂದಿನ ವಾರ ಮಹತ್ವದ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ವಿಶ್ವದ ಶೇ.70ರಷ್ಟು ಜನರಿಗೆ ಕೊರೋನಾ ಭೀತಿ : ಹೊರಬಿತ್ತು ಮತ್ತೊಂದು ಆತಂಕದ ವಿಚಾರ.

ಈ ಸಂಬಂಧ ಈಗಾಗಲೇ ಒಂದು ಸುತ್ತಿನ ಸುದೀರ್ಘ ಮಾತುಕತೆ ನಡೆಸಿರುವ ವಾಣಿಜ್ಯ ಸಚಿವಾಲಯ, ಈ ವಸ್ತುಗಳ ಪೂರೈಕೆ ಮಾಡುವ ಸಾಮರ್ಥ್ಯವಿರುವ ಉದ್ಯಮಗಳ ರಾಷ್ಟ್ರಗಳ ಶೋಧ ನಡೆಸುವಂತೆ ಎಲ್ಲಾ ರಾಷ್ಟ್ರಗಳ ಭಾರತೀಯ ರಾಯಭಾರಿಗಳಿಗೆ ಪತ್ರ ಬರೆದಿದೆ. ಭಾರತಕ್ಕೆ ಅಗತ್ಯವಿರುವ ಔಷಧಗಳನ್ನು ಪೂರೈಸುವ ಸಾಮರ್ಥ್ಯವಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ವಿಜರ್ಲೆಂಡ್‌ ಹಾಗೂ ಇರಾನ್‌ ರಾಷ್ಟ್ರಗಳನ್ನು ಗುರುತಿಸಲಾಗಿದೆ. ಇನ್ನು ಎಲೆಕ್ಟ್ರಾನಿಕ್ಸ್‌ ಹಾಗೂ ಮೊಬೈಲ್‌ ಫೋನ್‌ಗಳ ಪೂರೈಕೆಗೆ ಕೆಲ ರಾಷ್ಟ್ರಗಳು ಉತ್ಸುಕತೆ ತೋರಿವೆ.

ರೋಗ ನಿರೋಧಕ ಔಷಧಿಗಳಾದ ಆ್ಯಮಕ್ಸಿಸಿಲ್ಲಿನ್‌, ಎರಿಥ್ರಾಮಿಸಿನ್‌, ಮೆಟ್ರೋನಿಡಾಝೋಲ್‌ ಇನ್ನಿತರ ವಿಟಮಿನ್‌ ಸೇರಿದಂತೆ ಒಟ್ಟಾರೆ ಶೇ.50ಕ್ಕಿಂತ ಹೆಚ್ಚು ಔಷಧಿಗಳು ಚೀನಾದಿಂದ ಭಾರತಕ್ಕೆ ಪೂರೈಕೆಯಾಗುತ್ತಿದ್ದವು.

ಇನ್ನು ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದ ಸಾವಯವ ರಾಸಾಯನಿಕಗಳು, ಜವಳಿ ಹಾಗೂ ಚಿನ್ನಾಭರಣಗಳನ್ನು ಚೀನಾ ಮತ್ತು ಹಾಂಕಾಂಗ್‌ ಅತಿಯಾಗಿ ಖರೀದಿಸುತ್ತಿದ್ದವು. ಆದರೆ, ಕೊರೋನಾ ವೈರಸ್‌ ಈ ಕ್ಷೇತ್ರಗಳ ಮೇಲೆಯೂ ಪರಿಣಾಮ ಬೀರಿದೆ ಎಂದು ಉದ್ಯಮಪತಿಗಳು ಅಲವತ್ತುಕೊಂಡಿದ್ದಾರೆ.