* ಕೊರೋನಾ ಹಾವಳಿಯಿಂದ ನಲುಗಿರುವ ಜನತೆಗೆ ಮತ್ತೊಂದು ಏಟು* ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ಈಗ LPG ಗ್ಯಾಸ್‌ ಸಿಲಿಂಡರ್‌ ದುಬಾರಿ* ಗೃಹ ಬಳಕೆ ಸಿಲಿಂಡರ್​ ಬೆಲೆ 25 ರೂ.ಹೆಚ್ಚಳ

ನವದೆಹಲಿ(ಜು.01): ಪೆಟ್ರೋಲ್‌, ಡೀಸೆಲ್ ದರ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರ ಹೆಗಲಿಗೆ ಮತ್ತೊಂದು ಭಾರ ಸೇರಿದೆ. ಹೌದು ಇಂದು ತೈಲ ಮಾರುಕಟ್ಟೆ ಕಂಪನಿಗಳು LPG ಗ್ಯಾಸ್​ ಸಿಲಿಂಡರ್​ ಬೆಲೆ ಹೆಚ್ಚಿಸಿದ್ದು, ಅದರ ಅನ್ವಯ ಗೃಹ ಬಳಕೆ ಸಿಲಿಂಡರ್​ ಬೆಲೆ 25 ರೂ.ಹೆಚ್ಚಾಗಿದೆ. ನೂತನ ಪರಿಷ್ಕೃತ ದರ ಜುಲೈ 1ರಿಂದ ಅನ್ವಯಯವಾಗಲಿದೆ.

ಇಂದಿನಿಂದ ಬ್ಯಾಂಕಿಂಗ್, ಹಣಕಾಸು ಸೇವೆಯಲ್ಲಿ ಮಹತ್ವದ ಬದಲಾವಣೆಗಳು!

ಈ ಬೆಲೆ ಏರಿಕೆಯಿಂದ ದೆಹಲಿಯಲ್ಲಿ ಇಂದಿನಿಂದ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್​ ಬೆಲೆ 834.50 ರೂಪಾಯಿಗೇರಿದೆ. ಮುಂಬೈನಲ್ಲಿ 809ರೂ. ಇದ್ದ ಗ್ಯಾಸ್​ ಸಿಲಿಂಡರ್ ಬೆಲೆ 834.50 ರೂ.ಗೇರಿದ್ದು, ಕೋಲ್ಕತ್ತಾದಲ್ಲಿ 835.50 ರೂ. ಆಗಿದೆ. ಇತ್ತ ಚೆನ್ನೈನಲ್ಲಿ ಗ್ಯಾಸ್​ ಸಿಲಿಂಡರ್​ ಬೆಲೆ ದುಬಾರಿಯಾಗಿ 850.50 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ದರ 812 ರೂಪಾಯಿಗೇರಿದೆ. 

ಅಂತಾರಾಷ್ಟ್ರೀಯ ಮಾನದಂಡ ದರ ಮತ್ತು ಯುಎಸ್​ ಡಾಲರ್ ಹಾಗೂ ರೂಪಾಯಿ ವಿನಿಮಯ ದರ ಆಧರಿಸಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬೆಲೆ ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ. ಅದರಂತೆ ಇಂದು ಜುಲೈ 1 ರಂದು ಹೆಚ್ಚಾಗಿದ್ದು, ಅದರ ಅನ್ವಯ ಪ್ರಮುಖ ನಗರಗಳಲ್ಲಿ 14 ಕೆ.ಜಿ ಗೃಹಬಳಕೆ ಗ್ಯಾಸ್ ಸಿಲಿಂಡರ್​ ದರ ಹೀಗಿದೆ.

ನಗರದರ
ಬೆಂಗಳೂರು/ಕರ್ನಾಟಕ812 ರೂ.
ದೆಹಲಿ834.50 ರೂ.
ಕೋಲ್ಕತ್ತ861 ರೂ.
ಮುಂಬೈ834.50 ರೂ.
ಚೆನ್ನೈ850.50 ರೂ.

ಈ ವರ್ಷ ಫೆಬ್ರವರಿ 4ರಂದು ಮೊದಲ ಬಾರಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆ 25 ರೂಪಾಯಿ ಏರಿಸಲಾಗಿತ್ತು. ಬಳಿಕ ಫೆಬ್ರವರಿ 15ರಂದು 50 ರೂಪಾಯಿ ಏರಿಕೆ ಮಾಡಲಾಗಿತ್ತು. ಫೆಬ್ರವರಿ 25 ಮತ್ತು ಮಾರ್ಚ್​ 1ರಂದು ಮತ್ತೆ 25 ರೂ. ಹೆಚ್ಚಿಸಲಾಗಿತ್ತು. ಇದರೊಂದಿಗೆ ಫೆಬ್ರವರಿ ತಿಂಗಳೊಂದರಲ್ಲೇ 3 ಬಾರಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆ ಏರಿಸಲಾಗಿತ್ತು. ಪ್ರತಿ ಗ್ಯಾಸ್​ ಸಿಲಿಂಡರ್​ಗೆ 125 ರೂಪಾಯಿ ಏರಿಕೆಯಾದ ಬಳಿಕ, ಏಪ್ರಿಲ್​ 1ರಂದು ಪ್ರತೀ ಸಿಲಿಂಡರ್​​ಗೆ 10 ರೂಪಾಯಿ ಕಡಿತ ಮಾಡಲಾಗಿತ್ತು.

LPG ಸಿಲಿಂಡರ್‌ ಖರೀ​ದಿ ಸಬ್ಸಿಡಿ ರದ್ದು: ಪರೋಕ್ಷ ಒಪ್ಪಿದ ಕೇಂದ್ರ ಸರ್ಕಾರ

ಕೊರೋನಾ ಹಾವಳಿಯಿಂದ ಕಂಗೆಟ್ಟಿರುವ ಜನರು ಅನೇಕ ಸಂಕಷ್ಟಗಳನ್ನೆದುರಿಸುತ್ತಿದ್ದಾರೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದರೆ, ವಲಸೆ ಕಾರ್ಮಿಕರು ಊರು ಸೇರಿ ಕೆಲಸವಿಲ್ಲದೇ ಒಂದೊತ್ತಿನ ಊಟವಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಲೆ ಏರಿಕರೆ ಗಾಯದ ಮೇಲೆ ಬರೆ ಎಳೆದಂತಾಗಿದೆ.