ನ.5ರೊಳಗೆ ಸಾಲಗಾರರ ಖಾತೆಗೆ ಚಕ್ರಬಡ್ಡಿ ವಾಪಸ್‌| ಸುಪ್ರೀಂಕೋರ್ಟ್‌ಗೆ ಕೇಂದ್ರ ಮಾಹಿತಿ

ನವದೆಹಲಿ(ಅ.28): ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಇಎಂಐ ಪಾವತಿ ಮುಂದೂಡಿಕೆ ಅವಕಾಶ ಬಳಸಿಕೊಂಡಿದ್ದ ಸಣ್ಣ ಸಾಲಗಾರರ ಖಾತೆಗೆ ಚಕ್ರಬಡ್ಡಿಯನ್ನು ನ.5ರೊಳಗೆ ಮರಳಿಸುವಂತೆ ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Add Asianetnews Kannada as a Preferred SourcegooglePreferred

ಸಾಲಗಾರರ ಖಾತೆಗೆ ಚಕ್ರಬಡ್ಡಿ ಮೊತ್ತವನ್ನು ಮರಳಿಸಿದ ಬಳಿಕ ಕೇಂದ್ರ ಸರ್ಕಾರದಿಂದ ಆ ಹಣವನ್ನು ಬ್ಯಾಂಕುಗಳು ಪಡೆದುಕೊಳ್ಳಬಹುದು ಎಂಬ ಮಾಹಿತಿಯುಳ್ಳ ಅಫಿಡವಿಟ್‌ ಅನ್ನು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ನಡುವೆ, ನ.5ರೊಳಗೆ ಚಕ್ರಬಡ್ಡಿ ಮನ್ನಾ ಮಾಡುವಂತೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಕೂಡ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ಗೃಹ, ಶಿಕ್ಷಣ, ಕ್ರೆಡಿಟ್‌ ಕಾರ್ಡ್‌ ಬಾಕಿ, ವಾಹನ, ಎಂಎಸ್‌ಎಂಇ ಸಾಲ, ಗೃಹೋಪಯೋಗಿ ವಸ್ತುಗಳ ಖರೀದಿ, ಇನ್ನಿತರೆ 2 ಕೋಟಿ ರು.ವರೆಗಿನ ಸಾಲಕ್ಕೆ ಚಕ್ರಬಡ್ಡಿ ಮನ್ನಾ ಅನ್ವಯವಾಗಲಿದೆ.

2 ಕೋಟಿ ರು.ವರೆಗಿನ ಸಾಲಗಾರರು ಇಎಂಐ ಪಾವತಿ ಮುಂದೂಡಿಕೆ ಸೌಲಭ್ಯವನ್ನು ಸಂಪೂರ್ಣ ಅಥವಾ ಭಾಗಶಃ ಪಡೆದಿದ್ದರೂ ಅಥವಾ ಪಡೆಯದೇ ಇದ್ದರೂ ಅವರಿಗೆ 2020ರ ಮಾ.27ರಿಂದ 2020ರ ಮೇ 23ರವರೆಗಿನ ಅವಧಿಯ ಚಕ್ರಬಡ್ಡಿಯನ್ನು ಮರಳಿಸಬೇಕು ಎಂದು ಕೇಂದ್ರ ಸರ್ಕಾರದ ಅಫಿಡವಿಟ್‌ ಹೇಳುತ್ತದೆ.