ಇಂಜಿನಿಯರಿಂಗ್ ಪದವೀಧರೆ ಮಯೂರಿ ನಿತಿನ್ ಕಾಳೆ, ಕುಟುಂಬಕ್ಕಾಗಿ 5 ಲಕ್ಷದ ಉದ್ಯೋಗವನ್ನು ನಿರಾಕರಿಸಿ,  ಸಣ್ಣ ಜ್ಯೂಸ್ ಸೆಂಟರ್ ಆರಂಭಿಸಿದರು. ಇದೀಗ ವಾರ್ಷಿಕವಾಗಿ 50 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇಂದಿನ ಮಹಿಳೆಯರಿಗೆ ಕೆಲಸನಾ? ಕುಟುಂಬನಾ? ಅನ್ನೋ ಪ್ರಶ್ನೆ ಎದುರಾದಾಗ ಹಲವರು ಗೊಂದಲಕ್ಕೆ ಒಳಗಾಗುತ್ತಾರೆ. ಏಕೆಂದರೆ ಇದೊಂದು ಕಠಿಣ ನಿರ್ಧಾರ ಆಗಿರುತ್ತದೆ. ಅನಿವಾರ್ಯವಾಗಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕಾದ ಸ್ಥಿತಿ ಎದುರಾದಾಗ ತಮ್ಮ ಸ್ಥಿತಿಯನ್ನು ನೆನೆದು ದಿನದೂಡುತ್ತಾರೆ. ಆದರೆ ಇಂತಹ ಸ್ಥಿತಿಯನ್ನೇ ಎದುರಿಸಿದ ಮಹಿಳೆಯೊಬ್ಬರು ಸವಾಲಾಗಿ ಸ್ವೀಕಾರ ಮಾಡಿ, ದೊಡ್ಡ ಉದ್ಯಮವನ್ನೇ ನಿರ್ಮಿಸಿದ್ದಾರೆ. ಅಸಲಿಗೆ ಏನಿದು ಸ್ಟೋರಿ? ಮಹಿಳೆಯ ಯಶಸ್ಸಿನ ಹಿಂದಿನ ಸೀಕ್ರೆಟ್ ಏನು ಅಂತ ತಿಳಿಯಲು ಈ ಸ್ಟೋರಿ ಓದಿ.

ಕಡಿಮೆ ಬಂಡವಾಳ

ಎಂಜಿನಿರಿಂಗ್ ಪದವಿ ಪಡೆದುಕೊಂಡಿದ್ದ ಮಯೂರಿ ನಿತಿನ್ ಕಾಲೆ ಅವರಿಗೆ ಶಿಕ್ಷಣದ ಬಳಿಕ ವಾರ್ಷಿಕವಾಗಿ 5 ಲಕ್ಷ ರೂಪಾಯಿ ಪ್ಯಾಕೇಜ್ ಇರುವ ಕೆಲಸ ಸಿಕ್ಕಿತ್ತು. ಇದಕ್ಕಾಗಿ ಅವರು ಪುಣೆಗೆ ಶಿಫ್ಟ್ ಆಗಿ, ಚಿಕ್ಕ ಮಗುವಿನಿಂದ ದೂರ ಉಳಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಆ ಆಫರ್ ನಿರಾಕರಿಸಿದ್ದ ಮಯೂರಿ, ನಾಸಿಕ್ ನಲ್ಲಿಯೇ ಉಳಿದುಕೊಳ್ಳುವ ತೀರ್ಮಾನ ಮಾಡಿದ್ದರು. ಇದರಿಂದ ನಿರುಸ್ಸಾಹಕ್ಕೆ ಒಳಗಾಗದ ಅವರು ತಾವು ಏನಾದರೂ ಮಾಡಲೇಬೇಕು ಎಂದು ನಿರ್ಧಾರ ಮಾಡಿ, ಜ್ಯೂಸ್ ಸೆಂಟರ್ ಒಂದನ್ನು ಆರಂಭ ಮಾಡಿದ್ದರು. ಸದ್ಯ ಈ ಉದ್ಯಮದಿಂದ ಮಯೂರಿ ಅವರು ವಾರ್ಷಿಕವಾಗಿ 50 ಲಕ್ಷ ರೂಪಾಯಿ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಕೆಲಸ ಕಾರ್ಪೊರೇಟ್ ಕೆಲಸವಷ್ಟೇ ಜೀವನ ಆರ್ಥಿಕ ಯಶಸ್ಸಿಗೆ ಆಯ್ಕೆಯಲ್ಲ ಎಂದು ಸಾಬೀತುಪಡಿಸಿದ್ದಾರೆ.

ಸ್ವತಃ ಉದ್ಯಮದಿಂದ ಭರ್ಜರಿ ಲಾಭ!

ಕೆಲಸ ಬಿಟ್ಟದ್ದನ್ನು ಕೈತಪ್ಪಿದ ದೊಡ್ಡ ಅವಕಾಶ ಎಂದು ಭಾವಿಸದೆ, ಆರ್ಥಿಕ ಸ್ವಾತಂತ್ರ್ಯ ಪಡೆದುಕೊಳ್ಳಲು ಒಂದು ಅವಕಾಶ ಎಂಬುವುದಕ್ಕೆ ಪ್ರೇರಣೆಯಾಗಿದ್ದಾರೆ. ಏಕೆಂದರೆ ಪದವಿ ಮುಗಿಸಿ ಉದ್ಯೋಗ ಸಿಗುವ ಸಮಯಕ್ಕೆ ಮಯೂರಿಗೆ ಮದುವೆಯಾಗಿ ಒಂದು ಮಗುವಿಗೆ ತಾಯಿ ಕೂಡ ಆಗಿದ್ದಳು. ಆದರೆ ಸಿಕ್ಕ ಅವಕಾಶ ಬಳಸಿಕೊಳ್ಳಲು ಪುಣೆಗೆ ಶಿಫ್ಟ್ ಆಗಬೇಕಿತ್ತು. ಅಲ್ಲದೇ ಶಿಫ್ಟ್ ಗಳಲ್ಲಿ ಕೆಲಸ ಮಾಡಬೇಕಿತ್ತು. ಇದರಿಂದ ಕೆಲಸಕ್ಕೆ ನೋ ಎಂದಿದ್ದ ಮಯೂರಿ ನಾಸಿಕ್ ನಲ್ಲಿಯೇ ಉಳಿದುಕೊಂಡು ಸ್ವತಃ ಉದ್ಯಮ ಆರಂಭಿಸುವ ಚಿಂತನೆ ಮಾಡಿದ್ದರು.

ಯಶಸ್ಸಿನ ಹಿಂದಿನ ಸೀಕ್ರೆಟ್ ಏನು?

ಯಾವುದೇ ಬ್ಯುಸಿನೆಸ್ ಮಾಡಿ ಅನುಭವ ಇಲ್ಲದ ಮಯೂರಿ ಅವರು, ನಾಸಿಕ್ ನಲ್ಲಿ ಸಣ್ಣ ಫ್ರೆಶ್ ಜ್ಯೂಸ್ ಸೆಂಟರ್ ಆರಂಭ ಮಾಡಿದ್ದರು. ಆದರೆ ಸ್ಥಳೀಯರಿಂದ ಉತ್ತಮ ಸ್ಪಂದನೆ ಸಿಕ್ಕಿ, ಬೇಡಿಕೆ ಹೆಚ್ಚಾಗಿತ್ತು. ನಿರಂತರವಾಗಿ ಗ್ರಾಹಕರಿಗೆ ಸೇವೆ ಮಾಡಿದ ಕಾರಣ ಸಣ್ಣ ಉದ್ಯಮ ಭಾರೀ ಲಾಭ ತಂದುಕೊಟ್ಟಿತ್ತಂತೆ. ಆದರೆ ಅವರ ಈ ಕೆಲಸ ಅಷ್ಟು ಸುಲಭವಾಗಿ ಏನು ಯಶಸ್ವಿಯಾಗಿರಲಿಲ್ಲ. ಇದರ ಹಿಂದೆ ಅವರ ಛಲ ಹಾಗೂ ನಿರಂತರ ಶ್ರಮ ಇತ್ತು. ಬ್ಯುಸಿನೆಸ್ ನಲ್ಲಿ ಅನಿಶ್ಚಿತತೆ ಮತ್ತು ಆರ್ಥಿಕ ಅಪಾಯ ಇದ್ದರೂ, ಗ್ರಾಹಕರ ನಂಬಿಕೆ ಮತ್ತು ಸ್ಥಿರ ಪ್ರಯತ್ನದಿಂದ ಯಶಸ್ವಿಯಾಗಿದ್ದಾರೆ. ಸದ್ಯ ಮಯೂರಿ ಅವರು ತಮ್ಮ ಫ್ರೆಶ್ ಜ್ಯೂಸ್ ಸೆಂಟರ್ ನಿಂದ ತಿಂಗಳಿಗೆ 80 ಸಾವಿರ ರೂಪಾಯಿ ಆದಾಯ ಮಾಡುತ್ತಿದ್ದು, ವರ್ಷಕ್ಕೆ ಸರಿ ಸುಮಾರು 50 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.