ನ್ಯೂಜೆರ್ಸಿಯ ಟೀನೆಕ್ ಮೂಲದ ಸಾಫ್ಟ್‌ವೇರ್ ದೈತ್ಯ ವಿಶಾಖಪಟ್ಟಣಂನಲ್ಲಿ ₹1,582 ಕೋಟಿ ಮೌಲ್ಯದ ಐಟಿ ಕ್ಯಾಂಪಸ್ ನಿರ್ಮಿಸಲಿದ್ದು, 8000 ಉದ್ಯೋಗಗಳ ಭರವಸೆ ನೀಡಿದೆ. 

ಬೆಂಗಳೂರು (ಜೂ.20): ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸರ್ವೀಸ್‌ ನೀಡುವ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಗೆ 21 ಎಕರೆ ಭೂಮಿಯನ್ನು ತಲಾ 99 ಪೈಸೆಗೆ ಮಾರಾಟ ಮಾಡಿದ ಕೇವಲ ಎರಡು ತಿಂಗಳ ನಂತರ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರವು ನ್ಯೂಜೆರ್ಸಿಯ ಟೀನೆಕ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಾಗ್ನಿಜೆಂಟ್‌ನೊಂದಿಗೆ ಇದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿದೆ.

ಆಂಧ್ರದ ಕರಾವಳಿ ಪ್ರದೇಶ ಕಪುಲೌಪ್ಪಡದಲ್ಲಿ 21.31 ಎಕರೆ ಪ್ರದೇಶವನ್ನುಕೇವಲ 99 ಪೈಸೆಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೀಡಿದ್ದಾರೆ. ಬೆಂಗಳೂರು ಹೊರತುಪಡಿಸಿ, ಭಾರತದ ಎರಡು ದೊಡ್ಡ ಸಾಫ್ಟ್‌ವೇರ್ ಕೇಂದ್ರಗಳಾದ ಹೈದರಾಬಾದ್‌ನಿಂದ ಸುಮಾರು 600 ಕಿಲೋಮೀಟರ್ ಮತ್ತು ಚೆನ್ನೈನಿಂದ 800 ಕಿಲೋಮೀಟರ್ ದೂರದಲ್ಲಿರುವ ಕರಾವಳಿ ನಗರವಾದ ವಿಶಾಖಪಟ್ಟಣದಲ್ಲಿ 8,000 ಉದ್ಯೋಗಗಳನ್ನು ಹೊಂದಿರುವ ಐಟಿ ಕ್ಯಾಂಪಸ್ ಅನ್ನು ಸ್ಥಾಪಿಸಲು ಕಾಗ್ನಿಜೆಂಟ್‌ ಮುಂದಾಗಿದೆ. ಕಂಪನಿಯು ಮುಂದಿನ ಎಂಟು ವರ್ಷಗಳಲ್ಲಿ ₹1,582 ಕೋಟಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದೆ.

ಈ ವರ್ಷದ ಏಪ್ರಿಲ್‌ನಲ್ಲಿ, ಟಿಸಿಎಸ್‌ಗೆ ಭೂಮಿ ಮಾರಾಟವನ್ನು ಘೋಷಿಸಿದ ನಂತರ, ರಾಜ್ಯದ ತಂತ್ರಜ್ಞಾನ ಸಚಿವ ಹಾಗೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್‌ ಮಾತನಾಡಿದ್ದು, "ವಿಶಾಖಪಟ್ಟಣವನ್ನು ಐಟಿ ಹೂಡಿಕೆಗಳಿಗೆ ಹೊಸ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ' ಎಂದಿದ್ದರು. "ಗೋವಾ ಬೆಂಗಳೂರನ್ನು ಮದುವೆಯಾಗಿ ಮಗುವನ್ನು ಹೆತ್ತರೆ, ಅದು ವಿಶಾಖಪಟ್ಟಣವಾಗಬಹುದು ಎಂದು ನಾನು ತಮಾಷೆ ಮಾಡುತ್ತಲೇ ಇರುತ್ತೇನೆ ಮತ್ತು ಜನರಿಗೆ ಹೇಳುತ್ತಲೇ ಇರುತ್ತೇನೆ. ನಮಗೆ ಎಲ್ಲವೂ ಇದೆ, ಮತ್ತು ಇದು ವಿಶಾಖಪಟ್ಟಣಕ್ಕೆ ಬರುವ ದೊಡ್ಡ ಹೂಡಿಕೆಗಳಿಗೆ ಪ್ರಚೋದನೆಯಾಗಬಹುದು ಎಂದು ನಾವು ನಂಬುತ್ತೇವೆ" ಎಂದು ಅವರು ಸಂದರ್ಶನದ ಸಮಯದಲ್ಲಿ ತಮಾಷೆ ಮಾಡಿದ್ದರು. ಕಾಗ್ನಿಜೆಂಟ್ ಮಾರ್ಚ್ 2029 ರ ವೇಳೆಗೆ ವಿಶಾಖಪಟ್ಟಣದಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

"ಕಾಗ್ನಿಜೆಂಟ್ ವಿಶಾಖಪಟ್ಟಣಂ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ವಿಎಂಆರ್‌ಡಿಎ) ಅಡಿಯಲ್ಲಿ ಕಪುಲೌಪ್ಪಡದಲ್ಲಿ 21.31 ಎಕರೆ ಭೂಮಿಯನ್ನು ಕೋರಿತ್ತು. ರಾಜ್ಯ ಸರ್ಕಾರವು ಕೇವಲ 99 ಪೈಸೆಯ ನಾಮಮಾತ್ರ ದರಕ್ಕೆ ಭೂಮಿಯನ್ನು ಮಂಜೂರು ಮಾಡುತ್ತದೆ" ಎಂದು ಮೂಲಗಳು ತಿಳಿಸಿವೆ.

ವಿಶಾಖಪಟ್ಟಣಂ ಉದಯೋನ್ಮುಖ ಐಟಿ ಕೇಂದ್ರವಾಗಿ ಹೊರಹೊಮ್ಮಲು ಎದುರು ನೋಡುತ್ತಿರುವ ಹಿನ್ನೆಲೆಯಲ್ಲಿ ಈ ಹೂಡಿಕೆ ಬಂದಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಲವಾರು ಸಂದರ್ಭಗಳಲ್ಲಿ ವಿಶಾಖಪಟ್ಟಣವನ್ನು ಆಂಧ್ರದ ಆರ್ಥಿಕ ರಾಜಧಾನಿಯನ್ನಾಗಿ ಮಾಡುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.

ಜನವರಿಯಲ್ಲಿ, ಆಂಧ್ರದ ಮಾಹಿತಿ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಸಚಿವ ನಾರಾ ಲೋಕೇಶ್ ಅವರು ಕಾಗ್ನಿಜೆಂಟ್ ರಾಜ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು. ವಿಶ್ವ ಆರ್ಥಿಕ ವೇದಿಕೆ (WEF) ಗಾಗಿ ದಾವೋಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಲೋಕೇಶ್ ಕಾಗ್ನಿಜೆಂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ರವಿ ಕುಮಾರ್ ಅವರನ್ನು ಭೇಟಿ ಮಾಡಿ ವಿಶಾಖಪಟ್ಟಣಂನಂತಹ ಎರಡನೇ ಹಂತದ ನಗರಗಳಲ್ಲಿ ಕಾರ್ಯಾಚರಣೆಗಳನ್ನು ಸ್ಥಾಪಿಸುವುದನ್ನು ಪರಿಗಣಿಸುವಂತೆ ಒತ್ತಾಯಿಸಿದರು.