ಬೆಂಗಳೂರಿಗಿದ್ದ ಸಿಲಿಕಾನ್ ಸಿಟಿ ಹೆಸರನ್ನು ಗಟ್ಟಿಗೊಳಿಸಿದ ರತನ್ ಟಾಟಾ!
ಮಾಹಿತಿ ತಂತ್ರಜ್ಞಾನ, ಆಟೋ ಮೊಬೈಲ್, ಆತಿಥ್ಯ ಸೇರಿದಂತೆ ಸರಿಸುಮಾರು 20ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಟಾಟಾ ಸಮೂಹ ಸಂಸ್ಥೆ ತನ್ನ ಛಾಪು ಮೂಡಿಸಿದೆ. ಅಲ್ಲದೆ, ಅಷ್ಟೂ ಉದ್ಯಮವನ್ನೂ ಬೆಂಗಳೂರಿನಲ್ಲಿ ಆರಂಭಿಸಿದ ಶ್ರೇಯಸ್ಸು ರತನ್ ಟಾಟಾ ಅವರದ್ದಾಗಿದೆ.
ಬೆಂಗಳೂರು (ಅ.11): ದೇಶದ ಅತಿದೊಡ್ಡ ಸಂಸ್ಥೆ ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಅವರು ಬೆಂಗಳೂರಿಗಿದ್ದ ಸಿಲಿಕಾನ್ ಸಿಟಿಯ ಹೆಸರನ್ನು ಗಟ್ಟಿಗೊಳಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ, ಆಟೋ ಮೊಬೈಲ್, ಆತಿಥ್ಯ ಸೇರಿದಂತೆ ಸರಿಸುಮಾರು 20ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಟಾಟಾ ಸಮೂಹ ಸಂಸ್ಥೆ ತನ್ನ ಛಾಪು ಮೂಡಿಸಿದೆ.
ಅಲ್ಲದೆ, ಅಷ್ಟೂ ಉದ್ಯಮವನ್ನೂ ಬೆಂಗಳೂರಿನಲ್ಲಿ ಆರಂಭಿಸಿದ ಶ್ರೇಯಸ್ಸು ರತನ್ ಟಾಟಾ ಅವರದ್ದಾಗಿದೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಸ್ಥಾನ ಹೊಂದಿರುವ 1968ರಲ್ಲಿ ಮುಂಬೈ (ಆಗಿನ ಬಾಂಬೆ)ನಲ್ಲಿ ಆರಂಭವಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್)ನ್ನು ನಂತರ ಬೆಂಗಳೂರಿಗೆ ವರ್ಗಾಯಿಸಿದ ಕೀರ್ತಿ ರತನ್ ಟಾಟಾ ಅವರದ್ದಾಗಿದೆ.
ಅದರ ಜತೆಗೆ ಟಾಟಾ ಟೀ ಉತ್ಪಾದನಾ ಘಟಕಗಳು ರಾಜ್ಯದಲ್ಲಿವೆ. ಕೊಡಗು, ಚಿಕ್ಕಮಗಳೂರಿನಲ್ಲಿ ಟಾಟಾ ಸಂಸ್ಥೆಯ ನಿರ್ವಹಣೆಯಲ್ಲಿರುವ ಟೀ ಎಸ್ಟೇಟ್ ಇದ್ದು, ಅವುಗಳು ಟಾಟಾ ಟೀ ಉತ್ಪನ್ನಕ್ಕೆ ಬಹುಮುಖ್ಯ ಕಚ್ಛಾ ವಸ್ತು ಪೂರೈಕೆ ಪ್ರದೇಶವಾಗಿದೆ. ಹಾಗೆಯೇ, ಕೊಡಗಿನಲ್ಲಿ ಕಾಫಿ ಎಸ್ಟೇಟ್‌ನ್ನು ಕೂಡ ಟಾಟಾ ಸಂಸ್ಥೆ ಹೊಂದಿದೆ. ಅದರ ಜತೆಗೆ ಬೆಂಗಳೂರಿನಲ್ಲಿ ಸ್ಟಾರ್ ಬಜಾರ್, ಇಂಡಿಯನ್ ಹೋಟೆಲ್ಸ್ ಸಂಸ್ಥೆ ಅಡಿಯಲ್ಲಿ ತಾಜ್ ಹೋಟೆಲ್‌ಗಳು, ಟಾಟಾ ಮೋಟಾರ್ಸ್ ಹೀಗೆ ಹಲವು ಉದ್ಯಮಗಳನ್ನು ಆರಂಭಿಸಿದ ಕೀರ್ತಿ ರತನ್ ಟಾಟಾ ಅವರದ್ದಾಗಿದೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ 6 ಸಾವಿರ ಕೋಟಿ ರು.ಗೂ ಹೆಚ್ಚಿನ ಹೂಡಿಕೆಯನ್ನು ಟಾಟಾ ಸಮೂಹ ಸಂಸ್ಥೆ ಹೂಡಿಕೆ ಮಾಡಿದೆ.
ರತನ್ ಟಾಟಾ ಅವರ ಕೊಡುಗೆ ಕುರಿತು ವಿವರಿಸಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)ನ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಅವರು, ರತನ್ ಟಾಟಾ ಅವರು ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಟಾಟಾ ಸಮೂಹ ಸಂಸ್ಥೆಯ ಪ್ರತಿಯೊಂದು ಉದ್ಯಮವೂ ಬೆಂಗಳೂರು ಹಾಗೂ ರಾಜ್ಯದಲ್ಲಿವೆ. ಪ್ರಮುಖವಾಗಿ ಟಾಟಾ ಮೋಟಾರ್ಸ್, ಟಾಟಾ ಟೀ, ಟಾಟಾ ಸ್ಟೀಲ್, ಟಿಸಿಎಸ್‌ನಂತಹ ಸಂಸ್ಥೆಗಳು ನಗರದಲ್ಲಿ ಕಚೇರಿಗಳನ್ನು ಹೊಂದಿವೆ. ರತನ್ ಟಾಟಾ ಅವರ ದೂರದೃಷ್ಟಿತ್ವದಿಂದಾಗಿ ಬೆಂಗಳೂರಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ ಎಂದಿದ್ದಾರೆ.