ಇನ್ಫೋಸಿಸ್ ಮಾಜಿ ಅಧ್ಯಕ್ಷ ರವಿಕುಮಾರ್ ಕಾಗ್ನಿಜೆಂಟ್ ನೂತನ ಸಿಇಒ
ಕಾಗ್ನಿಜೆಂಟ್ ಸಂಸ್ಥೆ ಹೂಡಿಕೆದಾರರ ಒತ್ತಡಕ್ಕೆ ಮಣಿದು ಹೊಸ ಸಿಇಒ ನೇಮಕ ಮಾಡಿದೆ. ಇನ್ಫೋಸಿಸ್ ಮಾಜಿ ಅಧ್ಯಕ್ಷ ರವಿಕುಮಾರ್ ಅವರನ್ನು ಕಾಗ್ನಿಜೆಂಟ್ ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.
ನವದೆಹಲಿ (ಜ.13): ಕಾಗ್ನಿಜೆಂಟ್ ಸಂಸ್ಥೆಯ ನೂತನಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (CEO)ಇನ್ಫೋಸಿಸ್ ಮಾಜಿ ಅಧ್ಯಕ್ಷ ರವಿ ಕುಮಾರ್ ಅವರನ್ನು ನೇಮಿಸಲಾಗಿದೆ. ಈ ಕುರಿತು ಕಾಗ್ನಿಜೆಂಟ್ ಜ.12ರಂದು ಮಾಹಿತಿ ನೀಡಿದ್ದು, ರವಿ ಕುಮಾರ್ ಅವರ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಕಾಗ್ನಿಜಿಂಟ್ ಸಿಇಒ ಹುದ್ದೆಯಿಂದ ನಿರ್ಗಮಿಸುತ್ತಿರುವ ಬ್ರೈನ್ ಹಮ್ಫ್ರೀಸ್ ಅವರ ಸ್ಥಾನವನ್ನು ರವಿ ಕುಮಾರ್ ಅಲಂಕರಿಸಲಿದ್ದಾರೆ. ಬ್ರೈನ್ ಮಾ.15ರಂದು ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಹೂಡಿಕೆದಾರರ ಒತ್ತಡಕ್ಕೆ ಮಣಿದಿರುವ ಕಾಗ್ನಿಜೆಂಟ್ ಆಡಳಿತ ಮಂಡಳಿ ಬ್ರೈನ್ ಅವರ ಸ್ಥಾನಕ್ಕೆ ರವಿ ಕುಮಾರ್ ಅವರನ್ನು ನೇಮಕ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಕಾಗ್ನಿಜೆಂಟ್ ನಿರ್ವಹಣೆ ಉತ್ತಮವಾಗಿರಲಿಲ್ಲ. ಹೀಗಾಗಿ ನಾಯಕತ್ವದ ಬದಲಾವಣೆಗೆ ಹೂಡಿಕೆದಾರರು ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದರು. ಈ ಹಿಂದೆ ಕಾಗ್ನಿಜೆಂಟ್ ರವಿ ಕುಮಾರ್ ಅವರನ್ನು ಕಾಗ್ನಿಜೆಂಟ್ ಅಮೆರಿಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಅವರು ಈ ಹುದ್ದೆ ವಹಿಸಿಕೊಳ್ಳಲು ಇನ್ನು ಮೂರ್ನಾಲ್ಕು ದಿನಗಳು ಬಾಕಿಯಿರುವಂತೆ ಸಿಇಒ ಆಗಿ ನೇಮಕ ಮಾಡಲಾಗಿದೆ. ರವಿ ಕುಮಾರ್ ನೇಮಕ ಘೋಷಣೆಯಾಗುತ್ತಿದ್ದಂತೆ ಕಾಗ್ನಿಜೆಂಟ್ ಷೇರುಗಳ ಬೆಲೆಗಳಲ್ಲಿ ಶೇ.8ರಷ್ಟು ಏರಿಕೆ ಕಂಡುಬಂದಿದೆ.
ರವಿ ಕುಮಾರ್ ಇನ್ಫೋಸಿಸ್ (Infosys) ಅಧ್ಯಕ್ಷರಾಗಿ ( President) ಸೇವೆ ಸಲ್ಲಿಸಿರುವ ಜೊತೆಗೆ ಸಂಸ್ಥೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಕ್ಟೋಬರ್ ನಲ್ಲೇ ಅವರು ಕಾಗ್ನಿಜೆಂಟ್ (Cognizant) ಸೇರೋದಾಗಿ ಘೋಷಿಸಿದ್ದರು. 'ಕಾಗ್ನಿಜೆಂಟ್ ಸೇರ್ಪಡೆಗೊಳ್ಳಲು ನನಗೆ ಹೆಮ್ಮೆ ಆಗುತ್ತಿದೆ. ಗ್ರಾಹಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಂಸ್ಥೆಯ ಗುಣವನ್ನು ನಾನು ದೀರ್ಘ ಸಮಯದಿಂದ ಮೆಚ್ಚಿಕೊಂಡಿದ್ದೇವೆ. ಹಾಗೆಯೇ ಆವಿಷ್ಕಾರದ ಹಾದಿಯನ್ನು ಕೂಡ' ಎಂದು ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಸಂಬಳ ಸಿಕ್ಕಾಪಟ್ಟೆ ಹೆಚ್ಚು ಎಂದಿದ್ದ ಟಿಮ್ ಕುಕ್‌ಗೆ ಶೇ.50ರಷ್ಟು ವೇತನ ಕಡಿತ ಮಾಡಿದ ಆಪಲ್!
ಇನ್ನು ಕಂಪನಿ ಬಗ್ಗೆ ಮಾತನಾಡಿರುವ ನಿರ್ಗಮನ ಸಿಇಒ (CEO) ಹಮ್ಫ್ರಿಸ್ 'ನಾನು ಸಿಇಒ ಆಗಿರುವ ಅವಧಿಯಲ್ಲಿ ನಮ್ಮ ಟೀಮ್ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮ ಬ್ರ್ಯಾಂಡ್ ಸಾಕಷ್ಟು ಗುರುತಿಸಿಕೊಂಡಿದ್ದು, ನಮ್ಮ ಸಂಸ್ಥೆ ಕೂಡ ಬಲಿಷ್ಠಗೊಂಡಿದೆ. ನಮ್ಮ ಗ್ರಾಹಕರೊಂದಿಗಿನ ಸಂಬಂಧ ಇನ್ನಷ್ಟು ಪರಿಣಾಮಕಾರಿಯಾಗಿ ರೂಪುಗೊಂಡಿದೆ. ನಮ್ಮ ಮಾರುಕಟ್ಟೆ ಮಿತಿಯಲ್ಲಿ ನಾವು ಅಧಿಕ ಬೆಳವಣಿಗೆ ದಾಖಲಿಸಿದ್ದೇವೆ. ಯಶಸ್ಸು ಗಳಿಸಲು ಕಂಪನಿ ಉತ್ತಮ ಸ್ಥಾನದಲ್ಲೇ ಇದೆ. ಪ್ರತಿಭಾವಂತರ ತಂಡವನ್ನು ಮುನ್ನಡೆಸಲು ಅವಕಾಶ ಸಿಕ್ಕಿರೋದು ನನಗೆ ಹೆಮ್ಮೆ. ರವಿ ಹಾಗೂ ಇಡೀ ಆಡಳಿತ ತಂಡಕ್ಕೆ ನಾನು ಶುಭ ಹಾರೈಸುತ್ತೇನೆ' ಎಂದು ಹೇಳಿದ್ದಾರೆ.
ಹಮ್ಫ್ರಿಸ್ ಅವಧಿಯಲ್ಲಿ ಕಾಂಗ್ನಿಜೆಂಟ್ (Cognizant) ಆದಾಯ (Income) ಗಳಿಕೆಯಲ್ಲಿ ತೀವ್ರ ಇಳಿಕೆ ಕಂಡುಬಂದಿತ್ತು. 2022ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ಗಣನೀಯ ಇಳಿಕೆಯಾಗಿತ್ತು. ಕಳೆದ ಒಂದು ವರ್ಷದಲ್ಲಿ ಕಾಗ್ನಿಜೆಂಟ್ ಷೇರುಗಳು ಶೇ.24ರಷ್ಟು ಇಳಿಕೆ ದಾಖಲಿಸಿದ್ದವು. ಈ ಅವಧಿಯಲ್ಲಿ ಕಂಪನಿಯ ಒಂದು ಷೇರಿನ ಬೆಲೆ 88 ಡಾಲರ್ ನಿಂದ 67 ಡಾಲರ್ ಗೆ ಇಳಿಕೆಯಾಗಿತ್ತು. ಇದ್ರಿಂದ ಹೂಡಿಕೆದಾರರು ಸಿಇಒ ಬದಲಾಯಿಸುವಂತೆ ಆಡಳಿತ ಮಂಡಳಿಯ ಮೇಲೆ ಒತ್ತಡ ಹೆಚ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಗ್ನಿಜೆಂಟ್ ಹೊಸ ಸಿಇಒ ನೇಮಕವನ್ನುದಿಢೀರ್ ಆಗಿ ಘೋಷಿಸಿದೆ.
ಶಾರ್ಕ್ ಟ್ಯಾಂಕ್ ಇಂಡಿಯಾದಿಂದ ಖುಲಾಯಿಸಿತು ಅದೃಷ್ಟ; ನಷ್ಟದಲ್ಲಿದ್ದ ಸ್ಟಾರ್ಟ್ ಅಪ್ ಸ್ಟಾಕ್ ಎರಡೇ ದಿನದಲ್ಲಿ ಖಾಲಿ!
ಕುಮಾರ್ ಅವರನ್ನು ಕಾಗ್ನಿಜೆಂಟ್ ಸಿಇಒ ಆಗಿ ನೇಮಕ ಮಾಡಿರೋದನ್ನು ತಜ್ಞರು ಸಕಾರಾತ್ಮಕ ನಡೆ ಎಂದೇ ಹೇಳಿದ್ದಾರೆ. ಐಟಿ ಕ್ಷೇತ್ರದಲ್ಲಿ ಸಾಕಷ್ಟು ಹಿರಿತನ ಹೊಂದಿರುವ ಹಾಗೂ ಉದ್ಯೋಗಿಗಳು, ಗ್ರಾಹಕರನ್ನು ನಿರ್ವಹಣೆ ಮಾಡುವಲ್ಲಿ ಸಾಕಷ್ಟು ಜ್ಞಾನವನ್ನು ಕುಮಾರ್ ಹೊಂದಿದ್ದಾರೆ. ಹೀಗಾಗಿ ಕಂಪನಿಯ ಉದ್ಯಮದ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗಿದೆ.