ಬಂದಿದೆ ನೋಡಿ ತೆಂಗಿನ ಗರಿ ಸ್ಟ್ರಾ: ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶ ಕಂಡ ಯುವೋದ್ಯಮಿಗಳು
ಬೆಂಗಳೂರಿನ ಉದ್ಯಮಿಯೊಬ್ಬರು ಈ ಪ್ಲಾಸ್ಟಿಕ್ ಸ್ಟ್ರಾಗೆ ಮುಕ್ತಿ ನೀಡಲು ಮುಂದಾಗಿದ್ದು, ಅವರು ಪತ್ತೆ ಮಾಡಿದ ಪರಿಸರ ಸ್ನೇಹಿ ಪ್ರಯೋಗವೊಂದನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಅದುವೇ ತೆಂಗಿನ ಗರಿಯ ಸ್ಟ್ರಾ.
ಬೆಂಗಳೂರು: ಪ್ಲಾಸ್ಟಿಕ್ ಗಳ ನಿರಂತರ ಬಳಕೆ ಹಾಗೂ ಅದರ ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮ ನಮ್ಮ ಭೂಮಿ ದಿನದಿಂದ ದಿನಕ್ಕೆ ಪ್ಲಾಸ್ಟಿಕ್ ಮಯವಾಗುತ್ತಿದೆ. ಎಲ್ಲಿ ಭೂಮಿ ಅಗೆದರೂ ಬೇಡವಾದ ಪ್ಲಾಸ್ಟಿಕ್ ತುಂಡುಗಳು ಸಿಗುತ್ತಿವೆ. ಮಹಾನಗರಗಳಲ್ಲಿ ಪ್ಲಾಸ್ಟಿಕ್‌ಗಳ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಪ್ಲಾಸ್ಟಿಕ್‌ಗಳನ್ನು ಬಳಸಿ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಪರಿಸರಕ್ಕೆ ಮಾರಕವಾಗುತ್ತಿವೆ. ಅಂತಹ ಪರಿಸರವನ್ನು ಹದಗೆಡಿಸುವ ಪ್ಲಾಸ್ಟಿಕ್‌ಗಳಲ್ಲಿ ನಾವು ಜ್ಯೂಸ್ ಕುಡಿಯಲು ಬಳಸುವ ಸ್ಟ್ರಾ ಕೂಡ ಒಂದು ಜ್ಯೂಸ್, ತಂಪು ಪಾನೀಯ ಎಳನೀರನ್ನು ಕುಡಿಯಲು ಸ್ಟ್ರಾ ಬಳಸುವ ನಾವು ಅದನ್ನು ಸಿಕ್ಕಸಿಕ್ಕಲ್ಲಿ ಎಸೆದು ಮಣ್ಣಿಗೆ ಸೇರಿಸಿ ಬಿಡುತ್ತೇವೆ. ಮಣ್ಣಿನಲ್ಲಿ ಕರಗದೇ ಪ್ರತ್ಯೇಕವಾಗಿ ಉಳಿಯುವ ಈ ಪ್ಲಾಸ್ಟಿಕ್ಗಳಿಂದ ಮಣ್ಣಿನ ಆರೋಗ್ಯವೂ ಹದಗೆಡುವುದರ ಜೊತೆ ನಾವು ಮುಂದಿನ ತಲೆಮಾರಿಗೆ ಬರೀ ಹಾಳಾದ ಭೂಮಿಯನ್ನು ಬಿಟ್ಟು ಹೋಗುತ್ತಿದ್ದೇವೆ. ಆದರೆ ಈಗ ಪ್ಲಾಸ್ಟಿಕ್ ಸ್ಟ್ರಾಗಳ (Plastic straw) ಬದಲು ಪೇಪರ್ ಸ್ಟ್ರಾಗಳು ಕೂಡ ಬಂದಿವೆ. ಆದರೆ ಬೆಂಗಳೂರಿನ ಉದ್ಯಮಿಯೊಬ್ಬರು ಈ ಪ್ಲಾಸ್ಟಿಕ್ ಸ್ಟ್ರಾಗೆ ಮುಕ್ತಿ ನೀಡಲು ಮುಂದಾಗಿದ್ದು, ಅವರು ಪತ್ತೆ ಮಾಡಿದ ಪರಿಸರ ಸ್ನೇಹಿ ಪ್ರಯೋಗವೊಂದನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಅದುವೇ ತೆಂಗಿನ ಗರಿಯ ಸ್ಟ್ರಾ.
ಹೌದು ಉದ್ಯಮಿ ಹಾಗೂ ಆರು ಉತ್ಸಾಹಿಗಳ ತಂಡ ಈ ಹೊಸ ಪ್ರಯೋಗವನ್ನು ಮಾಡಿದ್ದು, ಇದರೊಂದಿಗೆ ನೂರಾರು ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಇದೊಂದು ವಿಭಿನ್ನವಾದ ಪ್ರಯೋಗವಾಗಿದ್ದು ಇದರಲ್ಲಿ ಅವರು ಯಶಸ್ಸನ್ನು ಕೂಡ ಕಂಡಿದ್ದಾರೆ. Evlogia Eco Care Pvt. Ltd. ಎಂಬ ಸಂಸ್ಥೆ ಈ ಹೊಸ ಪ್ರಯೋಗವನ್ನು ಆರಂಭಿಸಿದ್ದು, ಆರು ಜನರ ತಂಡ ಇವರದಾಗಿದೆ. ಮಣಿಕಂಡನ್ (Manikandan) ಎಂಬುವವರು ಈ ಸಂಸ್ಥೆಯ ಸಿಇಒ ಆಗಿದ್ದು, ಜೋಶಿ, ಲಿಯೋ, ರಾಧಾ, ಡೇವಿಡ್ (David) ಎಂಬ ಐದು ಜನ ಸೇರಿ ಈ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ಈಗ ವಿದೇಶಕ್ಕೂ ಈ ಸ್ಟ್ರಾಗಳು ರಫ್ತಾಗುತ್ತಿವೆ. ಬೆಂಗಳೂರಿನ ಬನಶಂಕರಿಯಲ್ಲಿ ಈ ಸಂಸ್ಥೆಯ ಕಚೇರಿ ಇದೆ.
ತೆಂಗಿನ ಗರಿಯ ಪೊರಕೆ ಮಾಡುವ ಸುಲಭ ವಿಧಾನ: ಅಜ್ಜಿಯ ವೀಡಿಯೋ ಸಖತ್ ವೈರಲ್
ಇಂಗ್ಲೆಂಡ್ (UK) ಹಾಗೂ ಯುನೈಟೆಡ್ ಸ್ಟೇಟ್ಸ್‌ಗೆ (USA) ಈ ಸ್ಟ್ರಾಗಳು ಪೂರೈಕೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಇದರಿಂದ ನೂರಾರು ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ಸ್ವ ಅಭಿವೃದ್ಧಿಯ ಜೊತೆ ಸಮುದಾಯದ ಅಭಿವೃದ್ಧಿಗೆ ಈ ತಂಡ ಮುಂದಾಗಿದ್ದು, ಈ ಸಾಧನೆಯಿಂದಾಗಿ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಬರೀ ಸ್ಟ್ರಾ ಮಾತ್ರವಲ್ಲದೆ ತೆಂಗಿನ ನಾರಿನಿಂದ ತಯಾರಿಸಿದ ಪಾತ್ರೆ ತೊಳೆಯುವ ಬ್ರಶ್, ಅಡಿಕೆ ಹಳೆಯಿಂದ ತಯಾರಿಸಿದ ಚಪ್ಪಲಿ (chappals) ಕೂಡ ಇವರ ಪರಿಸರ ಸ್ನೇಹಿ ಉತ್ಪನ್ನವಾಗಿದೆ, ಆನ್‌ಲೈನ್ ಮಾರುಕಟ್ಟೆಯಲ್ಲಿ ಇವು ಲಭ್ಯವಿದೆ.
ಈ ಸಂಸ್ಥೆಯ ಹೆಸರಾದ Evlogia ಎಂದರೆ ಗ್ರೀಕ್ ಭಾಷೆಯಲ್ಲಿ ಆಶೀರ್ವಾದ ಎಂಬ ಅರ್ಥವಾಗಿದ್ದು, ಭೂಮಿ ನಮ್ಮ ಪಾಲಿಗೆ ಆಶೀರ್ವಾದವಾಗಿ ಸಿಕ್ಕ ಕೊಡುಗೆ, ನಾವು ಅದನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳಬೇಕು. ಭೂಮಿಯನ್ನು ಕಾಳಜಿ ಮಾಡಲು ಅಗತ್ಯವಾದ ಒಂದು ಮಾರ್ಗವೆಂದರೆ ಪ್ಲಾಸ್ಟಿಕ್‌ನಿಂದ ಉಂಟಾಗುವ ಹಾನಿಗೆ ಪರಿಹಾರವನ್ನು ಕಂಡುಹಿಡಿಯುವುದು. ಎಂದು ಸಂಸ್ಥೆ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.
ಬಳ್ಳಾರಿಯಲ್ಲಿ ಹಾವಿನ ಆಕಾರದ ತೆಂಗಿನ ಗರಿ... ಜೆಸಿಬಿಯಿಂದ ಹಾವು ಕೊಂದಿದ್ದರು!
ಸಂಪೂರ್ಣ ಕಸದಿಂದ ರಸ ನಿರ್ಮಿಸುವ ಕ್ರಿಯೆ ಎಂದೇ ಎಂದು ಇದನ್ನು ಹೇಳಬಹುದಾಗಿದೆ. ಒಣಗಿ ಬಿದ್ದ ಬೇಡವಾದ ತೆಂಗಿನ ಗರಿಗಳನ್ನು ಬಳಸಿ ಈ ಸ್ಟ್ರಾಗಳನ್ನು ತಯಾರಿಸಿದ್ದು, ಹಲವು ವರ್ಷಗಳ ಕಾಲ ಬಾಳಿಕೆ ಬರುತ್ತವೆ. ನೀವೆಳೆಯುವ ಪ್ರತಿ ಸಿಪ್‌ನಲ್ಲೂ ಭೂಮಿಯ ರಕ್ಷಣೆ ಮಾಡಿ ಎಂಬ ಧ್ಯೇಯವಾಕ್ಯವನ್ನು ಸಂಸ್ಥೆ ಹೊಂದಿದೆ.
ಒಟ್ಟಿನಲ್ಲಿ ಕಲ್ಪವೃಕ್ಷ ಎಂದು ಕರೆಸಿಕೊಳ್ಳುವ ತೆಂಗಿನಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ. ಇದರ ಜೊತೆಗೆ ತಮ್ಮ ಹೊಟ್ಟೆ ಹೊರೆಯುವುದರ ಜೊತೆಗೆ ಅನೇಕ ಗ್ರಾಮೀಣ ಭಾಗದ ಜನರಿಗೆ ಸ್ವಾಭಿಮಾನದ ಜೀವನಕ್ಕೆ ವ್ಯವಸ್ಥೆ ಕಲ್ಪಿಸಿರುವ ಜೊತೆಗೆ ಭೂಮಿಯನ್ನು ಕಲ್ಮಶಮುಕ್ತವಾಗಿಸಲು ತನ್ನದೇ ಕೊಡುಗೆ ನೀಡುತ್ತಿರುವ ಈ Evlogia ಸಂಸ್ಥೆಗೆ ಎಲ್ಲರೂ ಒಂದು ಸೆಲ್ಯೂಟ್ ಹೊಡೆಯಲೇಬೇಕು.