Asianet Suvarna News Asianet Suvarna News

ದೇಶದಲ್ಲೇ ಅತಿ ಹೆಚ್ಚು ಬಂಡವಾಳ ಹೂಡಿಕೆಗೆ ಆಕರ್ಷಿಸಿದ ಕರ್ನಾಟಕ

ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿದ್ದು, ರಾಜ್ಯದಲ್ಲಿ ಹೂಡಿಕೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಯಮ ಸಂಸ್ಥೆಗಳಲ್ಲಿ ಮನವಿ ಮಾಡಿದ್ದಾರೆ.

CM BS Yediyurappa Holds Video Conference  with investors snr
Author
Bengaluru, First Published Oct 23, 2020, 1:32 PM IST

ಬೆಂಗಳೂರು (ಅ.23) : ಕರೊನಾ ಲಾಕ್ಡೌನ್ ನಡುವೆಯೂ ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಸರ್ಕಾರ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿದ್ದು, ರಾಜ್ಯದಲ್ಲಿ ಹೂಡಿಕೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಯಮ ಸಂಸ್ಥೆಗಳಲ್ಲಿ ಮನವಿ ಮಾಡಿದ್ದಾರೆ.

ಪಬ್ಲಿಕ್ ಅಫೇರ್ ಆಫ್ ಇಂಡಿಯಾ (ಪಾಫಿ) ಸಹಯೋಗದಲ್ಲಿ ರಾಜ್ಯ ಸರ್ಕಾರ ಬುಧವಾರ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡು  ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ವಿವರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಇದರ ಆಧಾರದ ಮೇಲೆ ಉದ್ಯಮ ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ  ಬಂಡವಾಳ ಆಕರ್ಷಣೆಗೆ ಸಹಕರಿಸಬೇಕು ಎಂದು ದೇಶದ ವಿವಿಧ ಕಂಪನಿಗಳ ಉದ್ದಿಮೆ ನಾಯಕರಿಗೆ ಮನವಿ ಮಾಡಿದರು.

ಫೈನಾನ್ಸ್‌ ಸಂಸ್ಥೆಗಳಿಗೆ ಬ್ರೇಕ್‌ : ಕಠಿಣ ಕ್ರಮ ..

ಐಟಿ, ಐಟಿಇಎಸ್‌ ಸೇವೆಗಳು, ಮೆಷಿನ್‌ ಟೂಲಿಂಗ್‌, ಉತ್ಪಾದನೆ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ ಹಾಗೂ ಎಂಜನಿಯರಿಂಗ್‌ ವಿನ್ಯಾಸ ಸೇರಿಂದತೆ ಕರ್ನಾಟಕದಲ್ಲಿ ಹೂಡಿಕೆಗೆ ಅವಕಾಶ ಇರುವ ಉದ್ಯಮಗಳ ಬಗ್ಗೆ ವಿವರಿಸಿದ ಮುಖ್ಯಮಂತ್ರಿ, “ಫಾರ್ಚೂನ್ 500 ಕಂಪನಿಗಳ ಪೈಕಿ 400 ಕಂಪನಿಗಳು ಜತೆಗೆ ಸುಮಾರು 400 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ರಾಜ್ಯ ನೆಲೆಯಾಗಿದೆ. 2020 ಜೂನ್ನಲ್ಲಿ ಕೊನೆಗೊಂಡ ಅವಧಿಯಲ್ಲಿ ರಾಜ್ಯ ವಿದೇಶಿ ನೇರ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಉದ್ದಿಮೆದಾರರ ನೆಚ್ಚಿನ ತಾಣ ಎನಿಸಿಕೊಂಡಿದೆ,"ಎಂದು ತಿಳಿಸಿದರು.

“ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಲಯಗಳಲ್ಲಿ ಪ್ರಬಲ ಸಾಮರ್ಥ್ಯ ಹೊಂದಿರುವ ರಾಜ್ಯ, ಜೈವಿಕ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸೆಮಿಕಂಡಕ್ಟರ್‌, ಕೃಷಿ, ವಾಹನ ಮುಂತಾದ ನಾನಾ ಕ್ಷೇತ್ರಗಳನ್ನು ಉತ್ತೇಜಿಸಲು 'ಉದ್ಯಮ ನಿರ್ದಿಷ್ಟ ನೀತಿ' ಜಾರಿ ತರುವ ಮೂಲಕ ಉದ್ಯಮ ಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸಿದೆ," ಎಂದರು.

ಕೇಂದ್ರ ಸರ್ಕಾರ, ಆರ್‌ಬಿಐ ಕೈಗೊಂಡ ಕ್ರಮಕ್ಕೆ ಫಲ: ಚೇತರಿಕೆ ಹೊಸ್ತಿಲಲ್ಲಿ ಆರ್ಥಿಕತೆ!

"ಕೈಗಾರಿಕೆಯಲ್ಲಿ ಮುಂದುವರಿದ ರಾಜ್ಯಗಳ ಪೈಕಿ ಒಂದಾಗಿರುವ ಕರ್ನಾಟಕ, ಉದ್ಯಮಿಗಳ ಆಕರ್ಷಕ ಹೂಡಿಕೆ ತಾಣವಾಗಿದೆ. ಸುಮಾರು 250 ಶತಕೋಟಿ ಡಾಲರ್ ಆರ್ಥಿಕತೆಯ ರಾಜ್ಯ ಪ್ರಬಲ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಹಲವು ವಲಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಯಂತ್ರೋಪಕರಣಗಳು, ಬೃಹತ್‌ ಯಂತ್ರೋಪಕರಣಗಳು, ವಾಹನಗಳು, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ಡಿಫೆನ್ಸ್‌, ಜೈವಿಕ ತಂತ್ರಜ್ಞಾನದಂತಹ ಕೈಗಾರಿಕೆಗಳಲ್ಲಿ ಪ್ರಾಬಲ್ಯ ಸಾಧಿಸಿದೆ," ಎಂದರು.

"ನೀತಿ ಆಯೋಗ ಬಿಡುಗಡೆ ಮಾಡುವ ಹೊಸ ಆವಿಷ್ಕಾರಗಳ ಸೂಚಿ 2019ರ ಪಟ್ಟಿಯಲ್ಲಿ ನಮ್ಮ ರಾಜ್ಯ ಅಗ್ರ ಸ್ಥಾನ ಪಡೆದಿದೆ. ನುರಿತ ಮಾನವ ಸಂಪನ್ಮೂ ಲಭ್ಯತೆ, ಹೆಸರಾಂತ ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾವರಣದಿಂದಾಗಿ ರಾಜ್ಯ ಅಗ್ರ ಸ್ಥಾನ ಪಡೆಯಲು ಸಾಧ್ಯವಾಗಿದೆ,"ಎಂದು ಮುಖ್ಯಮಂತ್ರಿ ಹೇಳಿದರು.

ಕೈಗಾರಿಕಾ ಅಭಿವೃದ್ಧಿ ಸರ್ಕಾರದ ಆದ್ಯತೆ: ಶೆಟ್ಟರ್

"ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ಹೊಸ ಕೈಗಾರಿಕಾ ನೀತಿ 2020-2025 ಪರಿಚಯಿಸಿದೆ ರಾಜ್ಯವನ್ನು ಪ್ರಗತಿ ಪಥದಲ್ಲಿ . ಕೊಂಡೊಯ್ಯುವ ಜತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ನೀತಿ ನೆರವಾಗಲಿದೆ. ಉದ್ದಿಮೆಗೆ ಪೂರಕವಾದ ಭತ್ಯೆ ಸೇರಿದಂತೆ ಭೂ ಲಭ್ಯತೆ, ಕಾರ್ಮಿಕ ಕಾನೂನಿನ ಸುಧಾರಣೆ ಹಲವು ನಿಯಂತ್ರಕ ಸುಧಾರಣೆಗಳನ್ನು ಈ ನೀತಿ ಒಳಗೊಂಡಿದೆ. ಈ ಎಲ್ಲ ಪೂರಕ ಕ್ರಮಗಳ ಮೂಲಕ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ," ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.  

ಪ್ರಸ್ತುತ ಸನ್ನಿವೇಶ ಸದೃಢ ವ್ಯವಸ್ಥೆ ನಿರ್ಮಾಣದ ಮಹತ್ವ ತಿಳಿಸಿಕೊಟ್ಟಿದೆ. ಕೈಗಾರಿಕೆಯಲ್ಲಿ ಮುಂಚೂಣಿ ಸಾಧಿಸಿರುವ ಕರ್ನಾಟಕ, ಸ್ಥಳೀಯ ಪೂರೈಕೆ ಸರಪಳಿಯನ್ನು ಬಲಪಡಿಸುವ ಜತೆಗೆ, ಸುಲಲಿತ ಕಾರ್ಯಾಚರಣೆಗೆ ಅನುವುಮಾಡಿಕೊಟ್ಟಿದೆ. ಕಡಿಮೆ ವೆಚ್ಚದಲ್ಲಿ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಸ್ಥಳೀಯ ಉದ್ದಿಮೆ ವ್ಯವಸ್ಥೆಗೆ ಒತ್ತು ನೀಡಲಾಗುವುದು.

-ಗೌರವ ಗುಪ್ತ - ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ

ವೀಡಿಯೋ ಸಂವಾದಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್‌,  ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಹೆಚ್. ಎಂ. ರೇವಣ್ಣಗೌಡ,  ಜ್ಯುಬ್ಲಿಯಂಟ್ ಭಾರತೀಯಾ ಗ್ರೂಪ್ನ ಅಜಯ್ ಖನ್ನಾ, ಪಾಫಿ ಅಧ್ಯಕ್ಷ ಇಶ್ತೇಯಾಕ್ ಅಮ್ಜಾದ್, ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್, ಯುಎಸ್ಐಬಿಸಿ ಅಧ್ಯಕ್ಷೆ ನಿಶಾ ಬಿಸ್ವಾಲ್ , ಕೋಟಕ್ ಮಹೀಂದ್ರಾದ ಉದಯ್ ಕೋಟಕ್, ಪಾಫಿ ಉಪಾಧ್ಯಕ್ಷ ಸುಭೋ ರಾಯ್, ಆಪ್ಕೋ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರ್ಮ ಉಪಸ್ಥಿತರಿದ್ದರು. 

ಏನಿದು ಪಾಫಿ?

ಸಾರ್ವಜನಿಕ ವ್ಯವಹಾರಗಳ ವೇದಿಕೆ- ಪಬ್ಲಿಕ್ ಅಫೇರ್ ಆಫ್ ಇಂಡಿಯಾ- ಪಿಎಎಫ್‌ಐ (ಪಾಫಿ)  ದೇಶದ ಕಾರ್ಪೊರೇಟ್  ವ್ಯವಹಾರಗಳ ನಾಯಕರನ್ನು ಬೆಸೆಯಲು ಇರುವ ಏಕೈಕ ವೇದಿಕೆ. ಪಾಫಿ (www.pafi.in),  ಬೃಹತ್ ಮತ್ತು ಮಧ್ಯಮ ಗಾತ್ರದ ಅಂತಾರಾಷ್ಟ್ರೀಯ ಮಟ್ಟದ ಭಾರತೀಯ ಮತ್ತು ವಿದೇಶಿ ಕಂಪನಿಗಳಿಂದ ಪ್ರಾತಿನಿಧ್ಯ ಹೊಂದಿದೆ.  ಉದ್ದಿಮೆ ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಉದ್ದಿಮೆದಾರರ ನಡುವಿನ  ಸಂಬಂಧ ಬೆಸೆಯುವುದು ಇದರ ಮೂಲ ಉದ್ದೇಶ.   ಸಾರ್ವಜನಿಕ ವ್ಯವಹಾರಗಳು, ಸಾರ್ವಜನಿಕ ನೀತಿ ಮಾನದಂಡ ವೃದ್ಧಿ, ನಿರ್ವಹಣೆ, ಉದ್ಯಮಗಳ ಮಾನ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಬದ್ಧವಾಗಿರುವ ಪಾಫಿ, ಕಳೆದ 11 ವರ್ಷಗಳಿಂದ ಈ ಕಾರ್ಯದಲ್ಲಿ ಸಕ್ರಿಯವಾಗಿದೆ.

Follow Us:
Download App:
  • android
  • ios