ಅಧಿಕಾರಿಗಳ ನಕಾರಕ್ಕೂ ಮಣಿಯದೆ ಹೊಸ ಯೋಜನೆಗಳನ್ನು ಘೋಷಿಸಿದ ಬೊಮ್ಮಾಯಿ

ಕೆಲವು ಜನಪರ ಯೋಜನೆಗಳಿಗೆ ಅಧಿಕಾರಿಗಳ ವಿರೋಧ, ಆದರೂ ಪಟ್ಟು ಹಿಡಿದು ಬಜೆಟ್‌ಗೆ ಸೇರಿಸಿದ ಸಿಎಂ, ಆದಾಯ ಹೊಂದಿಸುವುದು ನನಗೆ ಬಿಡಿ ಎಂದು ಅಧಿಕಾರಿಗಳಿಗೆ ತಾಕೀತು

CM Basavaraj Bommai Announced New Plans Despite the Refusal of the Officers in Budget grg

ಬೆಂಗಳೂರು(ಫೆ.19): ತಮ್ಮ ಎರಡನೇ ಬಜೆಟ್‌ ಮಂಡನೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲವು ಜನಪರ ಯೋಜನೆಗಳ ಘೋಷಣೆಗೆ ಅಧಿಕಾರಿಗಳಿಂದ ಆಕ್ಷೇಪ ವ್ಯಕ್ತವಾಗಿದ್ದರೂ ಮುತುವರ್ಜಿ ವಹಿಸಿ ಪ್ರಕಟಿಸಿದ್ದಾರೆ.

ಮಕ್ಕಳ ಬಸ್ಸು, ಗೃಹಿಣಿ ಶಕ್ತಿ, ಶ್ರಮಶಕ್ತಿ, ನಮ್ಮ ನೆಲೆ, ಪೌರ ಆಸರೆ, ಹಳ್ಳಿ ಮುತ್ತು ಸೇರಿದಂತೆ ಹಲವು ಯೋಜನೆಗಳನ್ನು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಆದರೆ, ಕೆಲವು ಜನಪರ ಯೋಜನೆಗಳನ್ನು ಘೋಷಿಸಲು ಅಧಿಕಾರಿಗಳ ವರ್ಗವು ವಿರೋಧ ವ್ಯಕ್ತಪಡಿಸಿತ್ತು. ರಾಜ್ಯದ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡಿರಬಹುದು ಅಥವಾ ಬೇರೆಯದೇ ಕಾರಣಗಳಿರಬಹುದು. ಒಟ್ಟಾರೆ ಅಧಿಕಾರಿಗಳು ಕೆಲವು ಯೋಜನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.

ಸಾಲ, ಸುಲಿಗೆಯ ಬಜೆಟ್‌: ಯು.ಟಿ. ಖಾದರ್‌ ಟೀಕೆ

ಬಜೆಟ್‌ ಮಂಡನೆಗೂ ಮುನ್ನ ಬಸವರಾಜ ಬೊಮ್ಮಾಯಿ ಅವರು ಇಲಾಖಾವಾರು ಸಭೆಗಳನ್ನು ನಡೆಸಿದರು. ಈ ವೇಳೆ ಜನಪರ ಯೋಜನೆಗಳ ಕುರಿತು ಪ್ರಸ್ತಾಪಿಸಿ ಬಜೆಟ್‌ನಲ್ಲಿ ಸೇರಿಸುವಂತೆ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು. ಇದಕ್ಕೆಲ್ಲಾ ಸೊಪ್ಪು ಹಾಕದ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಿ ಅವುಗಳನ್ನು ಘೋಷಣೆ ಮಾಡಲೇಬೇಕು ಎಂದು ಹೇಳಿ ಬಜೆಟ್‌ನಲ್ಲಿ ಸೇರಿಸಿದ್ದಾರೆ. ಯೋಜನೆಗಳಿಗೆ ಆದಾಯ ಹೊಂದಿಸುವುದು ಸೇರಿದಂತೆ ಇತರೆ ಕಾರ್ಯಗಳನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬುದು ತಿಳಿದಿದೆ. ಅದನ್ನೆಲ್ಲಾ ಸರಿ ಮಾಡೋಣ ಎಂದು ಅಧಿಕಾರಿಗಳ ಮನವೊಲಿಕೆ ಮಾಡಿ ಜನಪರ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಿ ಘೋಷಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲ್ಲರ ಶ್ರೇಯೋಭಿವೃದ್ಧಿಯ ಬಜೆಟ್‌: ಯಡಿಯೂರಪ್ಪ

ಬಸವರಾಜ ಬೊಮ್ಮಾಯಿ ಅವರು ಹಲವು ವರ್ಷಗಳ ಕಾಲ ರಾಜಕಾರಣದಲ್ಲಿದ್ದು, ಬಡವರು, ಮಧ್ಯಮವರ್ಗದವರು, ರೈತರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರ ಬಗ್ಗೆ ಸಮಸ್ಯೆಗಳನ್ನು ಅರಿತವರು. ಅವರ ತಂದೆ ಎಸ್‌.ಆರ್‌.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಅವರ ಆಡಳಿತ ವೈಖರಿಯನ್ನು ಗಮನಿಸಿದವರು. ರಾಜಕಾರಣದಲ್ಲಿನ ಅನುಭವದಿಂದಾಗಿ ಜನರ ಪರವಾಗಿ ಹೇಗೆ ಕೆಲಸ ಮಾಡಬೇಕು ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಬಲ್ಲವರಾಗಿದ್ದಾರೆ. ಕೆಲವು ಅಧಿಕಾರಿಗಳು ಸರ್ಕಾರ ಯೋಜನೆಗಳ ಜಾರಿಗೆ ಹೇಗೆಲ್ಲಾ ಹಿಂದೇಟು ಹಾಕುತ್ತಾರೆ ಎಂಬುದನ್ನು ಸಹ ಹತ್ತಿರದಿಂದ ಗಮನಿಸಿದ್ದಾರೆ. ಹೀಗಾಗಿ ಅಧಿಕಾರಿಗಳ ಸಬೂಬಿಗೆ ಸೊಪ್ಪು ಹಾಕದೆ ಯೋಜನೆಗಳನ್ನು ಹೇಗೆಲ್ಲಾ ಜಾರಿ ಮಾಡಬೇಕು ಎಂಬುದು ಗೊತ್ತಿದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಯೋಜನೆಗಳನ್ನು ಜಾರಿಗೊಳಿಸಿ ಜನಪರ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು ಎನ್ನಲಾಗಿದೆ.

ಬೊಮ್ಮಾಯಿ ಜನಪರ ನಿಲುವು

- 30 ಹೊಸ ಯೋಜನೆಗಳನ್ನು ತಮ್ಮ 2ನೇ ಬಜೆಟ್‌ನಲ್ಲಿ ಘೋಷಿಸಿರುವ ಬೊಮ್ಮಾಯಿ
- ಬಜೆಟ್‌ ಸಿದ್ಧಪಡಿಸುವ ವೇಳೆ ಕೆಲವು ಜನಪರ ಯೋಜನೆಗೆ ಅಧಿಕಾರಿ ವರ್ಗ ವಿರೋಧ
- ರಾಜ್ಯದ ಆರ್ಥಿಕ ಪರಿಸ್ಥಿತಿ, ಮತ್ತಿತರೆ ಕಾರಣಗಳಿಂದ ಬೇಡ ಎಂದು ಸಲಹೆ ನೀಡಿದ್ದರು
- ಆದರೆ ಅದಕ್ಕೆ ಸೊಪ್ಪು ಹಾಕದ ಸಿಎಂ. ಬಜೆಟ್‌ನಲ್ಲಿ ಸೇರಿಸುವಂತೆ ಅಧಿಕಾರಿಗಳಿಗೆ ತಾಕೀತು
- ಹಲವು ವರ್ಷಗಳಿಂದ ರಾಜಕಾರಣದಲ್ಲಿರುವ ಬೊಮ್ಮಾಯಿಗೆ ಜನರ ಸಮಸ್ಯೆಯ ಅರಿವು
- ಹೀಗಾಗಿ ಅಧಿಕಾರಿಗಳ ಸಬೂಬಿಗೆ ಮಣಿಯದೆ ಆರ್ಥಿಕ ಪರಿಸ್ಥಿತಿ ಸರಿದೂಗಿಸಿ ಯೋಜನೆ ಪ್ರಕಟ

Latest Videos
Follow Us:
Download App:
  • android
  • ios