ಚೀನಾ ಭಾರತಕ್ಕೆ ಅಪರೂಪದ ಅಯಸ್ಕಾಂತ, ರಸಗೊಬ್ಬರ ಮತ್ತು ಯಂತ್ರೋಪಕರಣಗಳ ರಫ್ತನ್ನು ನಿಲ್ಲಿಸಿ ವ್ಯಾಪಾರ ಯುದ್ಧಕ್ಕೆ ಮುಂದಾಗಿದೆ. ಈ ನಿರ್ಧಾರ ಭಾರತದ ಆರ್ಥಿಕತೆ, ಕೃಷಿ ಮತ್ತು ಮೂಲಸೌಕರ್ಯ ಯೋಜನೆಗಳ ಮೇಲೆ ಪರಿಣಾಮ ಬೀರಲಿದ್ದು, ಭಾರತ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.

ನವದೆಹಲಿ: ಚೀನಾ ಮತ್ತು ಭಾರತದ ನಡುವೆ ಹಲವು ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದೆ. ಚೀನಾ ತೆಗೆದುಕೊಳ್ಳುತ್ತಿರುವ ಕೆಲವು ಪ್ರಚೋದನಕಾರಿ ನಿರ್ಧಾರಗಳು ಭಾರತದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಈಗಾಗಲೇ ಭಾರತಕ್ಕೆ ಅಪರೂಪದ ಅಯಸ್ಕಾಂತ ರಫ್ತು ಮಾಡೋದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಚೀನಾದ ವಿಶೇಷ ರಸಗೊಬ್ಬರ ಮತ್ತು ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್‌ಗಾಗಿ ಸುರಂಗ ಕೊರೆಯುವ ಯಂತ್ರಗಳನ್ನು (TBM) ರಫ್ತು ಮಾಡೋದನ್ನು ಚೀನಾ ವಿಳಂಬ ಮಾಡುತ್ತಿದೆ ಎಂಬ ವರದಿಗಳು ಬರುತ್ತಿವೆ. ಕೆಲವು ಸರಕುಗಳ ರಫ್ತು ಸ್ಥಗಿತ ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆಯನ್ನು ಚೀನಾ ಅನುಸರಿಸುತ್ತಿದೆ. ಚೀನಾ ತೆಗೆದುಕೊಳ್ಳುತ್ತಿರುವ ಈ ನಿರ್ಧಾರಗಳು ಭಾರತದ ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತಿವೆ.

ಚೀನಾ ತೆಗೆದುಕೊಳ್ಳುತ್ತಿರುವ ಈ ನಿರ್ಧಾರಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವ್ಯಾಪಾರದ ಮೇಲೆ ನಿಷೇಧ ವಿಧಿಸುವ ಮೂಲಕ ಚೀನಾ ತನ್ನ ಏಕಸ್ವಾಮ್ಯ ಮಾರುಕಟ್ಟೆ ಸ್ಥಾಪನೆ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಕಾರ್ಯತಂತ್ರಗಳನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ವ್ಯಾಪಾರದ ಮೂಲಕ ಬೇರೆ ದೇಶಗಳ ಮೇಲೆ ಹಿಡಿತ ಸಾಧಿಸುವ ಪ್ರಯತ್ನಿಸುತ್ತಿರಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಾರೆ.

ಹಲವು ಅಗತ್ಯ ಸರಕುಗಳ ಉತ್ಪಾದನೆಯಲ್ಲಿ ಚೀನಾ ಮುಂದಿದೆ. ಅಪರೂಪದ ಭೂಮಿಯ ಖನಿಜಗಳ ಉತ್ಪಾದನೆಯಲ್ಲಿ ಚೀನಾ ಆತ್ಮನಿರ್ಭರವಾಗಿದ್ದು, ಇದರ ರಫ್ತನ್ನು ನಿಷೇಧಿಸಿದೆ. ವಿದೇಶಗಳಿಂದ ಬಂದಿರುವ ಆರ್ಡರ್‌ಗಳನ್ನು ಚೀನಾ ನಿರಂತರವಾಗಿ ತಿರಸ್ಕರಿಸುತ್ತಿದೆ. ಅಪರೂಪದ ಭೂಮಿಯ ಖನಿಜದ ಜೊತೆಯಲ್ಲಿ ರಸಗೊಬ್ಬರಗಳು ಮತ್ತು ಕೈಗಾರಿಕಾ ಯಂತ್ರೋಪಕರಣಗಳನ್ನು ಚೀನಾ ರಫ್ತು ಮಾಡುತ್ತದೆ. ಚೀನಾ ತೆಗೆದುಕೊಳ್ಳುತ್ತಿರುವ ಈ ನಿರ್ಧಾರಗಳು ಒಂದೇ ದಿನ ಪ್ರಭಾವ ಬೀರದಿದ್ದರೂ, ಭವಿಷ್ಯದಲ್ಲಿ ಚೀನಾದ ಶಕ್ತಿ ಎಷ್ಟು ಎಂಬುದನ್ನು ಖಂಡಿತವಾಗಿ ತೋರಿಸಲಿದೆ.

ಭಾರತದ ಮೇಲೆ ಯಾವೆಲ್ಲಾ ಪರಿಣಾಮ?

ಚೀನಾದಲ್ಲಿ ಲಭ್ಯವಾಗುವ ಅಪರೂಪದ ಭೂಮಿಯ ಆಯಸ್ಕಾಂತ ಆಧುನಿಕ ಎಲೆಕ್ಟ್ರಾನಿಕ್ಸ್, ವಿದ್ಯುತ್ ವಾಹನಗಳು, ಗಾಳಿ ಟರ್ಬೈನ್‌ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುತ್ತದೆ. ಸದ್ಯ ಟಾಟಾ ಸಂಸ್ಥೆ ಪರ್ಯಾಯ ಆಯ್ಕೆಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪರ್ಯಾಯ ಮಾರ್ಗದಿಂದ ಎಷ್ಟು ಲಾಭ ಸಿಗಲಿದೆ ಎಂಬುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಅಪರೂಪದ ಭೂಮಿಯ ಆಯಸ್ಕಾಂತ ಕೊರತೆ ಭಾರತದ ಹೈಟೆಕ್ ಉತ್ಪಾದನೆಯ ಯೋಜನೆಗಳ ವೇಗವನ್ನು ನಿಧಾನಗೊಳಿಸಲಿದೆ. ಚೀನಾದ ಈ ಒಂದು ನಿರ್ಧಾರ ಮೇಕ್ ಇನ್ ಇಂಡಿಯಾ' ಮತ್ತು ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ನಂತಹ ಯೋಜನೆಗಳಿಗೆ ದೊಡ್ಡ ಹೊಡೆತವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ವಿಶೇಷ ರಸಗೊಬ್ಬರ ರಫ್ತಿನ ಮೇಲೆ ನಿಷೇಧ ಅಥವಾ ವಿಳಂಬ ನೀತಿ ಭಾರತದ ಕೃಷಿ ಮೇಲೆಯೂ ಪರಿಣಾಮ ಬೀರುತ್ತದೆ. ಮತ್ತೊಂದೆಡೆ ಸುರಂಗ ಕೊರೆಯುವ ಯಂತ್ರಗಳ ಕೊರತೆಯುಂಟಾದ್ರೆ ಬುಲೆಟ್ ರೈಲಿನ ಯೋಜನೆಗೆ ಸಮಸ್ಯೆಯಾಗಲಿದೆ. ಈ ಯೋಜನೆಗೆ ಜಪಾನ್ ಹಣಕಾಸಿನ ಸಹಾಯ ಮಾಡುತ್ತಿದೆ. ಚೀನಾದ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಹಲವು ರಾಜತಾಂತ್ರಿಕ ಯೋಜನೆಗಳಿಗೆ ತೊಂದರೆಯನ್ನುಂಟು ಮಾಡಲಿದೆ ಎಂಬ ಆತಂಕವನ್ನುಂಟು ಮಾಡುತ್ತಿದೆ.

ಚೀನಾ ಯಾವ ಸಂದೇಶ ನೀಡುತ್ತಿದೆ?

ಈ ರೀತಿಯ ಕಠಿಣ ನಿರ್ಧಾರಗಳಿಂದ ವಿಶ್ವದಲ್ಲಿ ನಾನು ಎಷ್ಟು ಮುಖ್ಯ? ವಿಶ್ವದ ಕೈಗಾರಿಕೆಗಳಲ್ಲಿ ತನ್ನ ಆದ್ಯತೆ ಎಷ್ಟಿದೆ ಎಂದು ನೆನಪಿಸಲು ಬಯಸುತ್ತಿದೆ. ಈ ಹಿಂದೆಯೂ ಚೀನಾ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಜಾಗತೀಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತ್ತು. ಭಾರತ ಸೇರಿದಂತೆ ಇನ್ನುಳಿದ ದೇಶಗಳು ತನ್ನೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳದಿದ್ದರೆ ಅದು ಎಷ್ಟು ಹಾನಿಯನ್ನು ಅನುಭವಿಸಬಹುದು ಎಂಬುದನ್ನು ಸಹ ಅದು ಹೇಳಲು ಬಯಸುತ್ತದೆ. ರಸಗೊಬ್ಬರಗಳ ನಿರ್ಯಾತ ಮಾಡುವ ವಿಷಯದಲ್ಲಿ ಚೀನಾ, ಪ್ರವೇಶ-ನಿರ್ಗಮನ ತಪಾಸಣೆ ಮತ್ತು ಕ್ವಾರಂಟೈನ್ (CIQ) ಪ್ರೋಟೋಕಾಲ್ ಅಡಿಯಲ್ಲಿ ತಪಾಸಣೆ ನಡೆಸುತ್ತಿದೆ. ದೇಶಿಯ ಕೃಷಿ ಅಗತ್ಯಗಳನ್ನು ಪೂರೈಸಲು ಮತ್ತು ಹಣದುಬ್ಬರ ನಿಯಂತ್ರಣಕ್ಕಾಗಿ ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಚೀನಾ ಹೇಳಿಕೊಂಡಿದೆ.

ರಫ್ತನ್ನು ನಿಧಾನಗೊಳಿಸುವ ಮೂಲಕ ಚೀನಾ ವ್ಯಾಪಾರವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಭಾರತಕ್ಕೆ ರಫ್ತು ಮಾಡುವ ಸರಕುಗಳ ಪಟ್ಟಿಯನ್ನು ಪರಿಶೀಲಿಸುತ್ತಿಲ್ಲ. ಯಾವುದೇ ಕಾರಣಗಳು ಇಲ್ಲದಿದ್ದರೂ, ರಫ್ತಿನ ಮೇಲೆ ನಿಷೇಧಿಸುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಕಳೆದ ನಾಲ್ಕೈದು ವರ್ಷಗಳಿಂದ ಭಾರತಕ್ಕೆ ವಿಶೇಷ ರಸಗೊಬ್ಬರಗಳ ಸರಬರಾಜಿಗೆ ಚೀನಾ ಅಡ್ಡಿಯಾಗುತ್ತಿದೆ. ಆದರೆ ಈ ಬಾರಿ ಅದನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಎಂದು ರಸಗೊಬ್ಬರ ಉದ್ಯಮ ಸಂಘದ (SFIA) ಅಧ್ಯಕ್ಷ ರಾಜೀಬ್ ಚಕ್ರವರ್ತಿ ET ಗೆ ತಿಳಿಸಿದ್ದಾರೆ. ಅಧಿಕೃತವಾಗಿ ವ್ಯಾಪಾರವನ್ನು ನಿಷೇಧಿಸದೆ ಒತ್ತಡ ಹೇರಲು ಚೀನಾ ಸರ್ಕಾರಿ ವಿಧಾನಗಳನ್ನು ಬಳಸುತ್ತಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಚೀನಾ ಮತ್ತು ಭಾರತ ಸಂಘರ್ಷ

ಗಡಿಯಲ್ಲಿ ಚೀನಾ ಮತ್ತು ಭಾರತದ ನಡುವೆ ಸಂಘರ್ಷಗಳು ನಡೆಯುತ್ತಲಿವೆ. ತನ್ನ ಆರ್ಥಿಕತೆ ಮೇಲೆ ಚೀನಾದ ಪ್ರಭಾವ ಕಡಿಮೆ ಮಾಡಿಕೊಳ್ಳಲು ಭಾರತ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ, ಟಿಕ್‌ಟಾಕ್ ಸೇರಿದಂತೆ 200ಕ್ಕೂ ಅಧಿಕ ಚೀನಾ ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ನಿಷೇಧ ವಿಧಿಸಿದೆ. ಭಾರತ ಮತ್ತು ಚೀನಾ ನಡುವಿನ ನೇರ ವಿಮಾನಗಳು ಇನ್ನೂ ಪ್ರಾರಂಭವಾಗಿಲ್ಲ.

ಇನ್ನು ನವೀಕರಿಸಿದ ಎಫ್‌ಡಿಐ ನಿಯಮಗಳ ಅಡಿಯಲ್ಲಿ ಚೀನಾದಿಂದ ಬರುವ ಹೂಡಿಕೆಗೆ ಈಗ ಸರ್ಕಾರದ ಅನುಮೋದನೆ ಅಗತ್ಯವಿದೆ. ಭಾರತದ ಈ ನಿರ್ಬಂಧಗಳು ಸಹ ಚೀನಾ ಮಾರುಕಟ್ಟೆ ಮೇಲೆ ಪರಿಣಾಮವನ್ನು ಬೀರುತ್ತಿವೆ. ನವೀಕರಿಸಿದ ಎಫ್‌ಡಿಐ ನಿಯಮಗಳಿಂದಾಗಿ ಚೀನಾದಿಂದ ಬರುವ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಭಾರತದ ಈ ಕ್ರಮಗಳಿಂದ ಸಿಟ್ಟಾಗಿರುವ ಚೀನಾ, ಖನಿಜ ಮತ್ತು ವಿಶೇಷ ರಸಗೊಬ್ಬರದ ಮೇಲೆ ನಿಷೇಧ ಹಾಕ್ತಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಅಗತ್ಯ ವಸ್ತುಗಳ ಪೂರೈಕೆ ನಿಲ್ಲಿಸುವ ಮೂಲಕ ಭಾರತದ ಆರ್ಥಿಕತೆ ಮೇಲೆ ಚೀನಾದ ಅವಶ್ಯಕತೆ ಎಷ್ಟಿದೆ ಎಂಬುದನ್ನು ನೆನಪು ಮಾಡುತ್ತಿರಬಹುದು.

ಭಾರತದ ಮುಂದಿರುವ ಆಯ್ಕೆಗಳೇನು?

ಚೀನಾದ ಪ್ರಚೋದನಕಾರಿ ನಿರ್ಧಾರದ ಬಳಿಕ ಭಾರತ ಪರ್ಯಾಯ ಮಾರ್ಗಗಳನ್ನು ಕಂಢುಕೊಳ್ಳುತ್ತಿದೆ. ಭಾರತ ಈಗಾಗಲೇ ಇತರ ದೇಶಗಳಿಂದ ಸರಕುಗಳನ್ನು ಖರೀದಿಸಲು ಪ್ರಾರಂಭಿಸಿದೆ. ರಷ್ಯಾ ಭಾರತಕ್ಕೆ ರಸಗೊಬ್ಬರಗಳ ಅತಿದೊಡ್ಡ ಪೂರೈಕೆದಾರನಾಗಿದ್ದಾನೆ. ಅದು ಚೀನಾವನ್ನು ಹಿಂದಿಕ್ಕಿದೆ. ಅಪರೂಪದ ಭೂಮಿಯ ಅಂಶಗಳಿಗಾಗಿ ಭಾರತ ಆಸ್ಟ್ರೇಲಿಯಾ, ಅಮೆರಿಕ ಮತ್ತು ಜಪಾನ್‌ ಜೊತೆ ವ್ಯಾಪಾರ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಿದೆ. ಮತ್ತೊಂದೆಡೆ ಮೇಕ್ ಇನ್ ಇಂಡಿಯಾ ಅಡಿ ದೇಶಿಯ ಉತ್ಪಾದನೆಗೆ ಭಾರತ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಭವಿಷ್ಯದಲ್ಲಿ ಅಗತ್ಯ ವಸ್ತುಗಳ ಹೆಚ್ಚು ವಿಶ್ವಾಸಾರ್ಹ ಪೂರೈಕೆದಾರರನ್ನು ಹುಡುಕಿಕೊಳ್ಳಬೇಕಾಗುತ್ತದೆ.