ಬಿಜಿಂಗ್(ಜು.13): ಅಮೆರಿಕ-ಚೀನಾ ನಡುವಿನ  ವೈಮನಸ್ಸು ತಣ್ಣಗಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಈ ಎರಡೂ ದೈತ್ಯ ರಾಷ್ಟ್ರಗಳು ಕಾಲು ಕೆದರಿ ಜಗಳಕ್ಕೆ ನಿಲ್ಲುತ್ತಿವೆ.

ಜಿ-20 ಶೃಂಗಸಭೆಯಲ್ಲಿ ಪರಸ್ಪರ ಭೇಟಿಯಾಗುವ ಮೂಲಕ ಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್’ಪಿಂಗ್ ವಾಣಿಜ್ಯ ಸಮರಕ್ಕೆ ಇತಿಶ್ರೀ ಹಾಡಿದಂತೆ ಭಾಸವಾಗಿತ್ತು. 

ಆದರೆ ಇದೀಗ ಇರಾನ್ ವಿಚಾರದಲ್ಲಿ ಎರಡೂ ದೇಶಗಳು ಮತ್ತೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತಿವೆ. ಇರಾನ್ ವಿರುದ್ಧ ಅಮೆರಿಕದ ಕಾನೂನು ಬಾಹಿರ ಮತ್ತು ಏಕಪಕ್ಷೀಯ ನಿರ್ಬಂಧಗಳನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ.

ಈ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನಗಳು ಅಮಾನವೀಯ ಎಂದು ಹೇಳಿದ್ದಾರೆ. 

ಇರಾನ್ ಸೇರಿದಂತೆ ಜಾಗತಿಕ ಸಮುದಾಯದೊಂದಿಗೆ ಚೀನಾದ ವ್ಯಾಪಾರ ಸಂಬಂಧಗಳು ಅಂತಾರಾಷ್ಟ್ರೀಯ ನಿಯಮಗಳ ಚೌಕಟ್ಟಿನಲ್ಲಿಯೇ ಇವೆ ಎಂದೂ ಶುವಾಂಗ್ ಸ್ಪಷ್ಟಪಡಿಸಿದ್ದಾರೆ.