ಚಂದ್ರಯಾನ ಯಶಸ್ಸಿನ ಸಿಹಿ: ಬಾಹ್ಯಾಕಾಶ, ರಕ್ಷಣಾ ಕ್ಷೇತ್ರದ ಷೇರುಗಳೂ ಗಗನಕ್ಕೆ
ಚಂದ್ರಯಾನ-3 ಯಶಸ್ಸಿನ ಸಿಹಿಯನ್ನು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಕಂಪನಿಗಳ ಷೇರುಗಳು ಕೂಡಾ ಅನುಭವಿಸಿವೆ. ಚಂದ್ರಯಾನ-3 ಯಶಸ್ವಿಯಾಗಬಹುದು ಎಂಬ ನಿರೀಕ್ಷೆಗಳ ನಡುವೆಯೇ ಈ ಎರಡು ವಲಯಕ್ಕೆ ಸೇರಿದ ಹಲವು ಕಂಪನಿಗಳ ಷೇರು ಮೌಲ್ಯ ಬುಧವಾರ ಭರ್ಜರಿ ಏರಿಕೆ ಕಂಡವು

ನವದೆಹಲಿ: ಚಂದ್ರಯಾನ-3 ಯಶಸ್ಸಿನ ಸಿಹಿಯನ್ನು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಕಂಪನಿಗಳ ಷೇರುಗಳು ಕೂಡಾ ಅನುಭವಿಸಿವೆ. ಚಂದ್ರಯಾನ-3 ಯಶಸ್ವಿಯಾಗಬಹುದು ಎಂಬ ನಿರೀಕ್ಷೆಗಳ ನಡುವೆಯೇ ಈ ಎರಡು ವಲಯಕ್ಕೆ ಸೇರಿದ ಹಲವು ಕಂಪನಿಗಳ ಷೇರು ಮೌಲ್ಯ ಬುಧವಾರ ಭರ್ಜರಿ ಏರಿಕೆ ಕಂಡವು. ಸೆಂಟಮ್ ಎಲೆಕ್ಟ್ರಾನಿಕ್ಸ್ ಶೇ.15, ಪರಸ್ ಡಿಫೆನ್ಸ್ ಶೇ.5.47, ಎಂಟಿಎಆರ್ ಟೆಕ್ನಾಲಜೀಸ್ ಶೇ.4.84, ಎಚ್‌ಎಎಲ್ ಶೇ.3.57, ಭಾರತ್ ಫೋರ್ಜ್ ಶೇ.2.82, ಅಸ್ತ್ರ ಮೈಕ್ರೋವೇವ್ ಶೇ.1.72, ಎಲ್ ಆ್ಯಂಡ್ ಟಿ ಶೇ.1.42ರಷ್ಟು ಏರಿಕೆ ಕಂಡವು.
ಚಂದ್ರಯಾನ-3 ಪ್ರಯಾಣದ ಹಾದಿ
- ಜುಲೈ 14: ಎಲ್‌ವಿಎಂ3 ಎಂ4 ರಾಕೆಟ್ ಮೂಲಕ ಉಡಾವಣೆಗೊಂಡು ಭೂಮಿಯ ಕಕ್ಷೆಯನ್ನು ಸೇರಿದ ಚಂದ್ರಯಾನ-3
- ಜುಲೈ 15 ರಿಂದ 25: ಜು.15, 17, 22, 25ನೇ ದಿನಾಂಕದಂದು 4 ಸತತ ಬಾರಿ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ
- ಆಗಸ್ಟ್ 1: ಟ್ರಾನ್ಸ್‌ಲೂನರ್ ಇಂಜೆಕ್ಷನ್ ಕೆಲಸ ಯಶಸ್ವಿಯಾಗಿ ಟ್ರಾನ್ಸ್‌ಲೂನರ್ ಕಕ್ಷೆ ಸೇರಿದ ನೌಕೆ
- ಆಗಸ್ಟ್ 5: ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿದ ಚಂದ್ರಯಾನ-3
- ಆಗಸ್ಟ್ 6: ಚಂದ್ರನ ಹತ್ತಿರಕ್ಕೆ ನೌಕೆ ಸಾಗಿಸಲು ಕಕ್ಷೆ ಇಳಿಸುವ ಕಾರ್ಯ ಆರಂಭ, ಚಂದ್ರನ ಫೋಟೋ ಕಳುಹಿಸಿದ ನೌಕೆ
- ಆಗಸ್ಟ್ 9 ರಿಂದ 16: ಆ.9, 14 ಮತ್ತು 16ರಂದು ಸತತ ಮೂರು ಬಾರಿ ಕಕ್ಷೆ ಇಳಿಸುವ ಕೆಲಸ ಯಶಸ್ವಿ
- ಆಗಸ್ಟ್ 17: ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಲ್ಯಾಂಡರ್ ಮಾಡ್ಯೂಲ್ ಅನ್ನು ಯಶ್ವಸಿಯಾಗಿ ಬೇರ್ಪಡಿಕೆ
- ಆಗಸ್ಟ್ 19 ರಿಂದ 20: ಎರಡು ಬಾರಿ ಲ್ಯಾಂಡರ್‌ನ ವೇಗ ತಗ್ಗಿಸುವ ಪ್ರಕ್ರಿಯೆ ಯಶಸ್ವಿ
- ಆಗಸ್ಟ್ 21: ಚಂದ್ರಯಾನ-3 ಆರ್ಬಿಟರ್ ಮತ್ತು ಲ್ಯಾಂಡರ್ ನಡುವೆ ಸಂಪರ್ಕ ಏರ್ಪಟ್ಟಿತು
- ಆಗಸ್ಟ್ 22: ಸುಗಮ ಲ್ಯಾಂಡಿಂಗ್‌ಗೆ ತಯಾರಿ, ತಾನು ಸೆರೆಹಿಡಿದ ಚಂದ್ರನ ಚಿತ್ರಗಳ ರವಾನಿಸಿದ ನೌಕೆ
- ಆಗಸ್ಟ್ 23: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ನೌಕೆ ಸಾಫ್ಟ್ ಲ್ಯಾಂಡಿಂಗ್
ಚಂದ್ರಯಾನ 3 ಯಶಸ್ಸು: ಬಾಹ್ಯಾಕಾಶದಲ್ಲಿ ಭಾರತವೀಗ ಹೊಸ ಪವರ್ ಸೆಂಟರ್
ಸಾಫ್ಟ್ ಲ್ಯಾಂಡಿಂಗ್‌ನ ಹಿರಿಮೆ ಮಾಡಿದ್ದು ಮೂರೇ ದೇಶಗಳು
ನವದೆಹಲಿ: ಚಂದ್ರಯಾನ-3 ನೌಕೆಯನ್ನು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಈವರೆಗೆ ಚಂದ್ರನ ಮೇಲೆ ನೌಕೆ ಇಳಿಸಿದ ಜಗತ್ತಿನ ನಾಲ್ಕನೇ ರಾಷ್ಟ್ರ ಎಂಬ ಹಿರಿಮೆಗೆ ಭಾರತ ಪಾತ್ರವಾಗಿದೆ. ಭಾರತಕ್ಕಿಂತ ಮೊದಲು ರಷ್ಯಾ, ಅಮೆರಿಕ ಮತ್ತು ಚೀನಾ ದೇಶಗಳು ಕ್ರಮವಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿವೆ.
ಸೋವಿಯತ್ ಒಕ್ಕೂಟ
ರಷ್ಯಾ ತನ್ನ 6ನೇ ಪ್ರಯತ್ನದಲ್ಲಿ ಲೂನಾ-2 ನೌಕೆಯನ್ನು ಸೆ.14 1959 ರಂದು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಮಾಡಿತು.
ಅಮೆರಿಕ:
ಅಮೆರಿಕದ ನಾಸಾ ಸಂಸ್ಥೆ ತನ್ನ 13 ವಿಫಲ ಯತ್ನಗಳ ಬಳಿಕ ಜು.31, 1964ರಲ್ಲಿ ತನ್ನ ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿತು.
ಚೀನಾ:
ಚೀನಾ ತನ್ನ ಮೂರನೇ ಯತ್ನದಲ್ಲಿ 2013ರಲ್ಲಿ ಮೊದಲ ಬಾರಿ ಯಶಸ್ವಿಯಾಗಿ ಚಂದ್ರನ ಮೇಲೆ ನೌಕೆ ಇಳಿಸಿತ್ತು.
ನಿಮ್ಮ ಹೆಸರು ಸೋಮನಾಥದಲ್ಲೇ ಚಂದ್ರನ ನಂಟಿದೆ..
ಇಸ್ರೋ ಮುಖ್ಯಸ್ಥ ಸೋಮನಾಥ್‌ಗೆ ಮೋದಿ ಕರೆ
ಚಂದ್ರಯಾನ-3 ನೌಕೆ ಚಂದ್ರನಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಇಸ್ರೋದ ಮುಖ್ಯಸ್ಥರಾದ ಎಸ್ ಸೋಮನಾಥನ್ ಅವರಿಗೆ ದೂರವಾಣಿ ಕರೆ ಮಾಡಿದರು. ಯೋಜನೆ ಯಶಸ್ಸಿನ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಕೂಡಲೇ ಎಸ್.ಸೋಮನಾಥ್‌ಗೆ ಕರೆ ಮಾಡಿ ಇಸ್ರೋದಲ್ಲಿ ನೀವು ಮಾಡಿರುವ ಅದ್ಭುತ ಕಾರ್ಯಕ್ಕೆ ನಾನು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಧನ್ಯವಾದ ತಿಳಿಸುತ್ತೇನೆ ಎಂದರು. ಜೊತೆಗೆ ನಿಮ್ಮ ಹೆಸರು ಸೋಮನಾಥದಲ್ಲೇ ಚಂದ್ರನ ನಂಟಿದೆ. ಹೀಗಾಗಿ ನಿಮ್ಮ ಕುಟುಂಬ ಸದಸ್ಯರು ಇಂದು ಹೆಚ್ಚು ಸಂಭ್ರಮಿಸಿರಬಹುದು ಎಂದು ನಗೆ ಚಟಾಕಿ ಹಾರಿಸಿದರು.
ಚಂದ್ರಯಾನ-3 ಯಶಸ್ಸಿನಲ್ಲಿ ಕನ್ನಡಿಗ ವಿಜ್ಞಾನಿಗಳು: ದಿನದ 24 ತಾಸೂ ದುಡಿದ್ದೇವೆಂದ ವಿಜ್ಞಾನಿಗಳು
ವಿದೇಶಗಳು, ಬಾಹ್ಯಾಕಾಶ ಸಂಸ್ಥೆಗಳಿಂದ ಅಭಿನಂದನೆ
ನವದೆಹಲಿ: ಭಾರತದ ಚಂದ್ರಯಾನ-3 ನೌಕೆಯ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆದ ಬಳಿಕ ಹಲವು ದೇಶಗಳು ಮತ್ತು ಅಲ್ಲಿನ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಇಸ್ರೋಗೆ (ISRO) ಶುಭಾಶಯ ಕೋರಿವೆ. ಚಂದ್ರನಲ್ಲಿ ನೌಕೆ ಇಳಿಸಿದ ನಾಲ್ಕನೇ ದೇಶವಾದ ಭಾರತಕ್ಕೆ ಶುಭಾಶಯಗಳು ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ (NASA)ಟ್ವೀಟ್ ಮಾಡಿದ್ದರೆ, ಬ್ರಿಟನ್‌ನ ಬಾಹ್ಯಾಕಾಶ ಸಂಸ್ಥೆಯು ಇತಿಹಾಸ ನಿರ್ಮಾಣ. ಇಸ್ರೋಗೆ ಅಭಿನಂದನೆಗಳು ಎಂದಿದೆ. ಇನ್ನು ಯುರೋಪ್ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ-3 ತಂಡಕ್ಕೆ ಅಭಿನಂದನೆಗಳು ಎಂದಿದೆ. ಇನ್ನು ನಿಮ್ಮ ಯಶಸ್ವಿ ಚಂದ್ರಯಾನ-3 ದಕ್ಷಿಣ ಧ್ರುವದ ಲ್ಯಾಂಡಿಂಗ್‌ಗಾಗಿ ಅಭಿನಂದನೆಗಳು. ಅಲ್ಲದೇ ಯಶಸ್ವಿ ಚಂದ್ರಯಾನ ನಡೆಸಿದ ಭಾರತಕ್ಕೆ ಶುಭಾಶಯಗಳು ಎಂದು ನಾಸಾದ ಆಡಳಿತಾಧಿಕಾರಿ ನೆಲ್ಸನ್ ಟ್ವೀಟ್ ಮಾಡಿದ್ದಾರೆ.
ಗಣ್ಯರಿಂದ ಅಭಿನಂದನೆ
ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ಗಾಗಿ ನನ್ನ ಅಭಿನಂದನೆಗಳನ್ನು ಸ್ವೀಕರಿಸಿ. ಇದು ಬಾಹ್ಯಾಕಾಶದಲ್ಲಿ ಸುದೀರ್ಘ ದಾಪುಗಾಲು ಮತ್ತು ಸಹಜವಾಗಿ ಭಾರತ ಮಾಡಿದ ಪ್ರಭಾವಶಾಲಿ ಪ್ರಗತಿಗೆ ಸಾಕ್ಷಿಯಾಗಿದೆ.
ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
ಭಾರತದ ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಭಾರತದ ನನ್ನ ಸ್ನೇಹಿತರಿಗೆ ಅಭಿನಂದನೆಗಳು. ಪರಿಶ್ರಮದಿಂದ ರಾಷ್ಟ್ರ ನಿರ್ಮಿಸಲಾಗಿದೆ. ಭಾರತ ಇತಿಹಾಸ ನಿರ್ಮಾಣ ಮಾಡುವುದನ್ನು ಮುಂದುವರೆಸಿದೆ.
ಶೇಖ್ ಮೊಹಮ್ಮದ್, ಯುಎಇ ಪ್ರಧಾನಿ