ಚಂದ್ರಯಾನ 3 ಯಶಸ್ಸು: ಬಾಹ್ಯಾಕಾಶದಲ್ಲಿ ಭಾರತವೀಗ ಹೊಸ ಪವರ್‌ ಸೆಂಟರ್‌

ಇಸ್ರೋದ ಚಂದ್ರಯಾನ -3 ಯೋಜನೆ ಯಶಸ್ವಿಯಾಗುವುದರೊಂದಿಗೆ, ಕಳೆದ ಕೆಲ ವರ್ಷಗಳಿಂದ ಬಾಹ್ಯಾಕಾಶ ವಲಯದಲ್ಲಿ ಹೊಸ ಶಕ್ತಿಯಾಗಿ ಉದಯಿಸಿದ್ದ ಭಾರತ ಮತ್ತು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋದ ಪವರ್‌ ಇನ್ನಷ್ಟು ಹೆಚ್ಚಲಿದೆ. 

Chandrayaan 3 success Indias new power center in space gvd

ನವದೆಹಲಿ (ಆ.24): ಇಸ್ರೋದ ಚಂದ್ರಯಾನ -3 ಯೋಜನೆ ಯಶಸ್ವಿಯಾಗುವುದರೊಂದಿಗೆ, ಕಳೆದ ಕೆಲ ವರ್ಷಗಳಿಂದ ಬಾಹ್ಯಾಕಾಶ ವಲಯದಲ್ಲಿ ಹೊಸ ಶಕ್ತಿಯಾಗಿ ಉದಯಿಸಿದ್ದ ಭಾರತ ಮತ್ತು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋದ ಪವರ್‌ ಇನ್ನಷ್ಟು ಹೆಚ್ಚಲಿದೆ. ಚಂದ್ರದ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎಂಬ ಕೀರ್ತಿಗೆ ಪಾತ್ರವಾಗುವುದರೊಂದಿಗೆ ಈ ಯೋಜನೆ ಭಾರತಕ್ಕೆ ಹಲವು ಲಾಭಗಳನ್ನು ತಂದುಕೊಟ್ಟಿದೆ.

ಭಾರತದ ತಂತ್ರಜ್ಞಾನಕ್ಕೆ ಜಾಗತಿಕ ಮನ್ನಣೆ, ಭಾರತೀಯ ಆರ್ಥಿಕತೆಗೆ ಮತ್ತಷ್ಟುವೇಗ ಸೇರಿದಂತೆ ಹಲವು ಲಾಭಗಳನ್ನು ಇದು ಭಾರತಕ್ಕೆ ತಂದುಕೊಟ್ಟಿದೆ. ಒಂದು ವೇಳೆ ಚಂದ್ರನ ಮೇಲೆ ನೀರು ಇರುವುದನ್ನು ಈ ಯೋಜನೆ ಖಚಿತ ಪಡಿಸಿದರೆ ಮುಂದಿನ ದಿನಗಳಲ್ಲಿ ವಿವಿಧ ದೇಶಗಳು ಕೈಗೊಳ್ಳಲಿರುವ ಬಾಹ್ಯಾಕಾಶ ಯೋಜನೆಗಳು ಮತ್ತು ವಿವಿಧ ಗ್ರಹಗಳಿಗೆ ತೆರಳುವ ಯೋಜನೆಗಳಿಗೆ ಇಂಧನ ಒದಗಿಸಲು ಇದು ಮೊದಲ ಮೆಟ್ಟಿಲಾಗಲಿದೆ.

ಯಾವುದೇ ದೇಶ ಹೋಗದ ಕಡೆ ಇಂದು ಭಾರತ ಹೋಗಿದೆ: ಚಂದ್ರಯಾನ ಯಶಸ್ಸಿಗೆ ಮೋದಿ ಹರ್ಷ

ತಾಂತ್ರಿಕತೆಗೆ ಜಾಗತಿಕ ಮನ್ನಣೆ: ಚಂದ್ರಯಾನ-3 ಯೋಜನೆಯಲ್ಲಿದ್ದ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಆದ ಹಿನ್ನೆಲೆಯಲ್ಲಿ ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟುಜಾಗತಿಕ ಮನ್ನಣೆ ದೊರಕಿದಂತಾಗಿದೆ. ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುತ್ತಿರುವ ವಿವಿಧ ರಾಷ್ಟ್ರಗಳು ಇಸ್ರೋದ ಮಾದರಿಯನ್ನು ಅನುಸರಿಸಲು ಮತ್ತು ಸಹಭಾಗಿತ್ವವನ್ನು ಬಯಸಲು ಇದು ಸಹಾಯ ಒದಗಿಸಲಿದೆ. 2020ರಲ್ಲಿ 78 ಸಾವಿರ ಕೋಟಿ ರು. ಇದ್ದ ಭಾರತದ ಬಾಹ್ಯಾಕಾಶ ಎಕಾನಮಿ ಈಗ ಮತ್ತಷ್ಟುಏರಿಕೆ ಕಂಡಿದೆ. ಈ ಯೋಜನೆಯ ಯಶಸ್ಸಿನ ಬಳಿಕ ಇದು 2025ರ ವೇಳೆಗೆ 1.06 ಲಕ್ಷ ಕೋಟಿ ರು.ಗೆ ತಲುಪಲಿದೆ ಎನ್ನಲಾಗುತ್ತಿದೆ.

ಹೂಡಿಕೆ ಹೆಚ್ಚಳ: ಇಸ್ರೋ ಇದೀಗ ಖಾಸಗಿ ಹೂಡಿಕೆಗೆ ತೊಡಗಿಸಿಕೊಂಡಿದ್ದು, ಈ ಯೋಜನೆಯ ಯಶಸ್ಸಿನ ಬಳಿಕ ಇದು ಮತ್ತಷ್ಟುಹೆಚ್ಚಾಗಲಿದೆ. ಈಗಾಗಲೇ ಹಲವು ದೇಶಗಳು ಹಾಗೂ ವಿದೇಶಗಳ ಖಾಸಗಿ ಸಂಸ್ಥೆಗಳು ತಮ್ಮ ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೋದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇದು ಮತ್ತಷ್ಟುಹೆಚ್ಚಳವಾಗುವ ಸಾಧ್ಯತೆ ಇದೆ. ಹೂಡಿಕೆ ಹೆಚ್ಚಳದೊಂದಿಗೆ ಹಲವು ಉದ್ಯೋಗಾವಕಾಶಗಳು ಹುಟ್ಟಿಕೊಳ್ಳುವುದರಿಂದ ಆರ್ಥಿಕತೆಗೆ ವೇಗ ದೊರೆಯಲಿದೆ.

ಸ್ಟಾರ್ಟ್‌ಅಪ್‌ಗಳ ಹೆಚ್ಚಳ: ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಬಾಹ್ಯಾಕಾಶ, ಉಪಗ್ರಹ ಮತ್ತು ರಾಕೆಟ್‌ಗೆ ಸಂಬಂಧಿಸಿದಂತೆ ಹಲವಾರು ಸ್ಟಾರ್ಟಪ್‌ಗಳು ಆರಂಭಗೊಂಡಿವೆ. ಚಂದ್ರಯಾನ-3 ಯೋಜನೆ ಈ ಸ್ಟಾರ್ಟಪ್‌ಗಳಿಗೆ ಮತ್ತಷ್ಟುಉತ್ತೇಜನ ನೀಡಲಿದ್ದು, ಹೊಸ ಸ್ಟಾರ್ಟಪ್‌ಗಳ ಸ್ಥಾಪನೆಗೆ ಕಾರಣವಾಗಲಿದೆ. ಪ್ರಸ್ತುತ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 140ಕ್ಕೂ ಹೆಚ್ಟುಸ್ಟಾರ್ಟಪ್‌ಗಳು ನೋಂದಣಿಗೊಂಡಿವೆ.

ಜಾಗತಿಕ ಸ್ಥಾನ: ಈ ಯೋಜನೆಯ ಯಶಸ್ಸಿನ ಬಳಿಕ ಭಾರತ ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡ್‌ ಮಾಡಿದ 4ನೇ ದೇಶ ಎನಿಸಿಕೊಂಡಿದೆ. ಅಲ್ಲದೇ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎನಿಸಿಕೊಂಡಿದೆ. ಈ ಮೂಲಕ ಜಾಗತಿಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಗುರುತಿಸಿಕೊಂಡಿದೆ. ಮುಂದಿನ ಬಾರಿ ವಿವಿಧ ದೇಶಗಳು ಯೋಜನೆ ಕೈಗೊಳ್ಳುವಾಗ ಇಸ್ರೋದ ಸಹಭಾಗಿತ್ವ ಬಯಸಲಿವೆ.

ಈಗ ನಮ್ಮ ಕರ್ನಾಟಕಕ್ಕೂ ಚಂದ್ರನಿಗೂ ನೇರ ನಂಟು: ಪೀಣ್ಯದಿಂದ ಚಂದ್ರಯಾನ ನಿರ್ವಹಣೆ

ಮುಂದಿನ ಯೋಜನೆಗೆ ದಾರಿ: ಚಂದ್ರನ ಮೇಲೆ ನೀರು ಇರುವುದನ್ನು ಪತ್ತೆ ಮಾಡಿದರೆ ಮುಂದಿನ ಬಾಹ್ಯಾಕಾಶ ಯೋಜನೆಗಳಿಗೆ ಇದು ಸಹಾಕಾರಿಯಾಗಲಿದೆ. ಈ ಮೂಲಕ ಇಸ್ರೋ ಎಲ್ಲಾ ದೇಶಗಳಿಗೆ ಮಾದರಿಯಾಗಿ ನಿಲ್ಲಲಿದೆ. ಚಂದ್ರನ ಮೇಲಿರುವ ನೀರನ್ನು ಬಳಸಿ ಹೈಡ್ರೋಜನ್‌ ಚಾಲಿತ ಎಂಜಿನ್‌ಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಅವುಗಳನ್ನು ಬಾಹ್ಯಾಕಾಶಯಾನದಲ್ಲಿ ಬಳಸಿಕೊಳ್ಳಲು ಈ ಯೋಜನೆ ಸಹಾಯ ಒದಗಿಸಲಿದೆ.

Latest Videos
Follow Us:
Download App:
  • android
  • ios