ನವದೆಹಲಿ(ಜ.30): ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಾಜಿ ಸಿಇಒ ಚಂದಾ ಕೊಚ್ಚರ್ ಅವರನ್ನು ಐಸಿಐಸಿಐ ವಜಾಗೊಳಿಸಿದೆ.

ಚಂದಾ ಕೊಚ್ಚಾರ್ ಅಧಿಕಾರದಲ್ಲಿ ಇದ್ದಾಗಲೆ ಐಸಿಐಸಿಐ ಬ್ಯಾಂಕ್ ಮೂಲಕ ಅವ್ಯವಹಾರ ನಡೆದಿದೆ ಎಂದು ಕಳೆದ ಮಾರ್ಚ್ ನಲ್ಲಿ ಮೊದಲ ಬಾರಿಗೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಂದಾ ಕೊಚ್ಚರ್ ಕಳೆದ ಅಕ್ಟೋಬರ್‌ನಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದರು.

ಇದೀಗ ಚಂದಾ ಕೊಚ್ಚರ್ ಅವರನ್ನು ಐಸಿಐಸಿಐಯಿಂದಲೇ ಹೊರ ಹಾಕಲಾಗಿದ್ದು, ಅವರಿಗೆ ನೀಡಲಾಗಿದ್ದ ಎಲ್ಲಾ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ. ಪ್ರಮುಖವಾಗಿ ವೇತನ, ಬೋನಸ್, ಮೆಡಿಕಲ್ ಸೌಲಭ್ಯಗಳು ಮತ್ತು ಷೇರು ಪಾಲುದಾರಿಕೆಯನ್ನು ಹಿಂಪಡೆಯಲಾಗಿದೆ.

ಅಲ್ಲದೇ ಚಂದಾ ಕೊಚ್ಚರ್ ಅವರಿಗೆ ಏಪ್ರಿಲ್ 2009ರಿಂದ ಮಾರ್ಚ್ 2018ರವರೆಗೆ ನೀಡಲಾಗಿದ್ದ ಎಲ್ಲಾ ಬೋನಸ್‌ಗಳನ್ನು ವಾಪಸ್ ಮಾಡುವಂತೆ ಐಸಿಐಸಿಐ ಆದೇಶಿಸಿದೆ. ವಿಡಿಯೋಕಾನ್ ಸಂಸ್ಥೆಗೆ ನೀಡಲಾಗಿದ್ದ 3,250 ಕೋಟಿ ರೂ. ಸಾಲದ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ಥಾನ ತ್ಯಜಿಸಿದ ಚಂದಾ ಕೊಚ್ಚಾರ್, ಐಸಿಐಸಿಯ ಷೇರು ದಿಢೀರ್ ಏರಿಕೆ